ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ‘ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ’ : ಎಸ್‌ಆರ್ ಬಿಲ್ಡರ್ಸ್ ನ ಮಾಲಕ, ಯುವ ಉದ್ಯಮಿ ಶಿವಪ್ರಸಾದ್ ಇಜ್ಜಾವು ಆಯ್ಕೆ

0

ಪುತ್ತೂರು: ಮಾಧ್ಯಮ ರಂಗದ ಅಗ್ರಗಣ್ಯ ಸಂಸ್ಥೆಗಳಾದ ‘ಕನ್ನಡ ಪ್ರಭ’ ಹಾಗೂ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಜಂಟಿಯಾಗಿ ಆಯೋಜಿಸುತ್ತಿರುವ ಅತ್ಯಂತ ಪ್ರತಿಷ್ಠಿತ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ 2026 (Eminent Engineer Award 2026) ಗೌರವಕ್ಕೆ ಪುತ್ತೂರಿನ ಶ್ರೀರಾಮ ಸೌಧ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಎಸ್‌ಆರ್ ಬ್ಯುಲ್ಡರ್‍ಸ್ ಆಂಡ್ ಡೆವಲಪ್ಪರ್‍ಸ್ ಸಂಸ್ಥೆಯ ಮಾಲಕ, ಯುವ ಉದ್ಯಮಿ ಶಿವಪ್ರಸಾದ್ ಇಜ್ಜಾವು ಅವರು ಭಾಜನರಾಗಿದ್ದಾರೆ.


ಇಂಜಿನಿಯರಿಂಗ್, ಮೂಲಸೌಕರ್ಯ, ಉದ್ಯಮಶೀಲತೆ ಹಾಗೂ ಸಮಾಜಮುಖಿ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮತ್ತು ನಾಯಕತ್ವ ತೋರಿದ ಇಂಜಿನಿಯರ್‌ಗಳನ್ನು ಗೌರವಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಸೆ.26ರಂದು ಸಂಜೆ ಬೆಂಗಳೂರಿನ ‘ತಾಜ್ ಯಶವಂತಪುರ’ ದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಸಾಧನೆಯ ಪಥದಲ್ಲಿ ಯಶಸ್ವಿ ಯುವ ಉದ್ಯಮಿ:
ಕಡಬ ತಾಲೂಕಿನ ಹಳೆನೇರಂಕಿ ಗ್ರಾಮದ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದ ಶಿವಪ್ರಸಾದ್ ಇಜ್ಜಾವು ಅವರು, ಮಾಧವ ಆಚಾರ್ಯ ಹಾಗೂ ಶಶಿಕಲಾ ಎಂ. ಆಚಾರ್ಯ ದಂಪತಿಯ ಪುತ್ರ. ಇವರ ಅಜ್ಜ ಇಜ್ಜಾವು ಸುಬ್ರಾಯರು ಊರಿನ ಗಣ್ಯರಾಗಿ ತುರ್ತು ಪರಿಸ್ಥಿತಿಯಲ್ಲಿ ಜೈಲು ಅನುಭವಿಸಿದ ಧೀಮಂತ ವ್ಯಕ್ತಿಯಾಗಿದ್ದಾರೆ. ತಂದೆ ಮಾಧವ ಆಚಾರ್ಯರು ಧಾರ್ಮಿಕ ಹಾಗೂ ಜ್ಯೋತಿಷ್ಯ ಮಾರ್ಗದರ್ಶಕರಾಗಿದ್ದಾರೆ.
ಪೇಜಾವರ ಶ್ರೀಗಳು ಕಟ್ಟಿ ಬೆಳೆಸಿದ ಶ್ರೀ ರಾಮಕುಂಜೇಶ್ವರ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು, ಪುತ್ತೂರಿನ ವಿವೇಕಾನಂದ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಹಾಗೂ ಮಂಗಳೂರಿನ ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿ.ಇ.(ಮೆಕ್ಯಾನಿಕಲ್ ಇಂಜಿನಿಯರಿಂಗ್) ಪದವಿ ಪಡೆದಿದ್ದಾರೆ.

ವೃತ್ತಿಪರ ನೈಪುಣ್ಯತೆ ಹಾಗೂ ಪ್ರಮುಖ ಯೋಜನೆಗಳು:
ಕಳೆದ 7 ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು, ಪುತ್ತೂರಿನ ಶ್ರೀರಾಮ ಸೌಧ ವಾಣಿಜ್ಯ ಸಂಕೀರ್ಣದಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಸ್‌ಆರ್ ಬ್ಯುಲ್ಡರ್‍ಸ್ ಆಂಡ್ ಡೆವಲಪ್ಪರ್‍ಸ್ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇವರು ‘ಅನಘ ವಸತಿ ಸಂಕೀರ್ಣ’ (ಬ್ಲಾಕ್ ಎ,ಬಿ,ಸಿ.), ‘ಅನಘ ಬಲ್ನಾಡು’, ಮುರದಲ್ಲಿ ‘ಅದ್ವಿತ್ ಲೇಔಟ್’ ಹಾಗೂ ಉಪ್ಪಿನಂಗಡಿಯ ‘ಅನಯ ಲೇಔಟ್’ ಸೇರಿದಂತೆ ಒಟ್ಟು 6 ಬೃಹತ್ ಲೇಔಟ್ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ಈವರೆಗೆ ಸುಮಾರು 300 ಸೈಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ , 40ಕ್ಕೂ ಹೆಚ್ಚು ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಗ್ರಾಹಕರ ಅಪಾರ ನಂಬಿಕೆಯನ್ನು ಗಳಿಸಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಜಲಸಂರಕ್ಷಣೆ ಹಾಗೂ ತಂತ್ರಜ್ಞಾನದ ಮಾದರಿ:
ತಮ್ಮ ಇಂಜಿನಿಯರಿಂಗ್ ಜ್ಞಾನವನ್ನು ಕೃಷಿ ಕ್ಷೇತ್ರದಲ್ಲೂ ಅತ್ಯಂತ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿರುವ ಇವರು, ತಮ್ಮ ಸುಮಾರು 20 ಎಕರೆ ಕೃಷಿ ಭೂಮಿಗೆ 5 ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಗುರುತ್ವಾಕರ್ಷಣ ಬಲವನ್ನು (Gravity) ಬಳಸಿಕೊಂಡು, ಹನಿ ನೀರಾವರಿ (Drip Irrigation) ಪದ್ಧತಿಯ ಮೂಲಕ ಸುಮಾರು 8,000 ಗಿಡಗಳಿಗೆ ನೀರುಣಿಸುವ ವಿಶಿಷ್ಟ ಜಲಸಂರಕ್ಷಣಾ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಜೊತೆಗೆ ಆಳುಗಳ ಕೊರತೆ ನೀಗಿಸಲು ಯಾಂತ್ರೀಕೃತ ಕೃಷಿ ಮಾದರಿಯನ್ನು ಅಳವಡಿಸಿಕೊಂಡಿದ್ದಾರೆ.

ಸಾಮಾಜಿಕ ಕಳಕಳಿ:
ಪೇಜಾವರ ಮಠಾಧೀಶರ ವಿದ್ಯಾಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನ ಹೊಂದಿರುವ ಇವರು, ಊರಿನ ದೇವಾಲಯ, ವಿದ್ಯಾಲಯಗಳ ಅಭಿವೃದ್ಧಿ ಹಾಗೂ ಬಡವರ ಕಷ್ಟಗಳಿಗೆ ಸ್ಪಂದಿಸುವ ಸಮಾಜಮುಖಿ ಚಿಂತಕರಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಈ ಹಿಂದೆ ‘ಶಿವಳ್ಳಿ ಶ್ರೀ ಉದ್ಯಮ ಪ್ರಶಸ್ತಿ’ ಹಾಗೂ ‘ಆದರ್ಶ ಕೃಷಿಕ ಪ್ರಶಸ್ತಿ’ಗಳು ಲಭಿಸಿವೆ. ಇಂಜಿನಿಯರಿಂಗ್ ಶಿಕ್ಷಣದ ತಾಂತ್ರಿಕ ಜ್ಞಾನವನ್ನು ಕಟ್ಟಡ ನಿರ್ಮಾಣ ಕ್ಷೇತ್ರವಲ್ಲದೆ ಕೃಷಿ ಕ್ಷೇತ್ರದ ಜಲಸಂರಕ್ಷಣೆಗೂ ಸಮರ್ಥವಾಗಿ ಬಳಸಿ, ಉದ್ಯಮಶೀಲತೆಯಲ್ಲಿ ಹೊಸ ಮಾದರಿ ಸೃಷ್ಟಿಸಿರುವ ಶಿವಪ್ರಸಾದ್ ಇಜ್ಜಾವು ಅವರಿಗೆ ಈ ಪ್ರತಿಷ್ಠಿತ ‘ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ’ ಒಲಿದಿರುವುದು ಪುತ್ತೂರು ಕ್ಷೇತ್ರಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

ನಾಳೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ;
ಸೆ.26ರಂದು ಸಂಜೆ ಬೆಂಗಳೂರಿನ ‘ತಾಜ್ ಯಶವಂತಪುರ’ ದಲ್ಲಿ ವೈಭವೋಪೇತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆಯಲಿದೆ. ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹಮದ್, ಮಾಜಿ ಮುಖ್ಯಮಂತ್ರಿ, ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್, ಚಲನಚಿತ್ರ ನಟಿ ಬೃಂದಾ ಆಚಾರ್ಯ ಹಾಗೂ ಪರ್ವ ಗ್ರೂಪ್ ಸಂಸ್ಥಾಪಕ ನೀಲೇಶ್ ಎಚ್.ಪಿ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್‌ನ ಸಮೂಹ ಸಂಪಾದಕೀಯ ನಿರ್ದೇಶಕರಾದ ರವಿ ಹೆಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here