







ಮೆಡಿಕಲ್ ಕಾಲೇಜಿಗೆ ವಿರೋಧಿಸಿದವರಿಗೆ ಅಭಿವೃದ್ಧಿಯೇ ಉತ್ತರ: ಅಶೋಕ್ ಕುಮಾರ್ ರೈ


ಪುತ್ತೂರು:ಪುತ್ತೂರಿನ ಬಹುಕಾಲದ ಬೇಡಿಕೆಯಾಗಿರುವ ಸರಕಾರಿ ಮೆಡಿಕಲ್ ಕಾಲೇಜಿನ ಆರಂಭಿಕ ಹಂತದಲ್ಲಿ 300 ಹಾಸಿಗೆಗಳ ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ಮಾಣಕ್ಕೆ ಬನ್ನೂರು ಗ್ರಾ.ಪಂ ವ್ಯಾಪ್ತಿಯ ಸೇಡಿಯಾಪಿನಲ್ಲಿ ಸೆ.25ರಂದು ಭೂಮಿ ಪೂಜೆ ನೆರವೇರಿತು.



ಶಾಸಕ ಅಶೋಕ್ ಕುಮಾರ್ ರೈ ಅವರು ಭೂಮಿ ಪೂಜೆ ನೆರವೇರಿಸಿ ಕೆಸರುಕಲ್ಲು ಹಾಕಿ,ಹಾಲು,ಜೇನು,ತುಪ್ಪ ಹಾಗೂ ಸೀಯಾಳ ಅರ್ಪಿಸಿದರು.ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ, ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಸದಸ್ಯರನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಶಾಲು ಹೊದೆಸಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಹೋರಾಟ ಸಮಿತಿಯ ಸದಸ್ಯರು ಶಾಸಕರನ್ನು ಸನ್ಮಾನಿಸಿದರು.
550 ಕೋಟಿ ರೂ.ಮಂಜೂರು-182 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ:
ಭೂಮಿ ಪೂಜೆಯ ಬಳಿಕ ನಡೆದ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಸೇಡಿಯಾಪಿನ ಮಣ್ಣಿನಲ್ಲಿ 300 ಹಾಸಿಗೆಗಳ ಮೆಡಿಕಲ್ ಆಸ್ಪತ್ರೆಯ ಶಿಲಾನ್ಯಾಸ ನಡೆದಿರುವುದು ಪುತ್ತೂರಿನ ಇತಿಹಾಸದಲ್ಲಿ ದಾಖಲಿಸುವ ದಿನವಾಗಿದೆ.ಯಾಕೆಂದರೆ ಹಿಂದೆ ಶಕುಂತಳಾ ಶೆಟ್ಟಯವರು ಶಾಸಕರಾಗಿದ್ದ ಸಂದರ್ಭ ಹೋರಾಟ ಸಮಿತಿ ಅಲ್ಲಲ್ಲಿ ಮೀಟಿಂಗ್ ಮಾಡುವುದನ್ನು ಮಾಧ್ಯಮದ ಮೂಲಕ ನೋಡಿದ್ದೆ.ಮೆಡಿಕಲ್ ಕಾಲೇಜು ಹೋರಾಟ ಮಾತ್ರ,ಮಾಧ್ಯಮಕ್ಕೆ ಸೀಮಿತ.ಕಾಲೇಜು ಆಗ್ಲಿಕ್ಕಿಲ್ಲ ಎಂದು ಆಗ ನನ್ನ ಮನಸ್ಸಿನ ಭಾವನೆಯಲ್ಲೂ ಇತ್ತು.ಋಣಾನು ಬಂಧ ಹೇಗೆಂದು ಗೊತ್ತಿಲ್ಲ.ನನಗೆ ಶಾಸಕನಾಗುವ ಯೋಗ ಭಾಗ್ಯ ಬಂತು.ಹೋರಾಟ ಸಮಿತಿಯ ಮನವಿಗೆ ಪೂರಕವಾಗಿ ನನಗೂ ಮೆಡಿಕಲ್ ಕಾಲೇಜು ಮಾಡುವ ಆಸೆ ಇತ್ತು.ಆದರೆ ಇನ್ನೊಂದು ಕಡೆಯಿಂದ ಬಡ ಬಡ ಬಡ ಎಂದು ಒಡೆಯುತ್ತಿತ್ತು.ಯಾಕೆಂದರೆ ಬಾಯಲ್ಲಿ ಹೇಳಿದ ಮಾತನ್ನು ಮಾಡಿ ತೋರಿಸಬೇಕಲ್ಲ ಎಂಬ ಚಿಂತನೆ.ಆಲೋಚನೆ ಮಾಡುತ್ತಾ ಇದ್ದೆ ಒಂದಲ್ಲ ಒಂದು ದಿನ ಖಂಡಿತಾ ಸಾಧನೆ ಮಾಡುತ್ತೇನೆ ಎಂಬ ನಂಬಿಕೆ ಇತ್ತು.ಇವತ್ತು ಅದು ಸಾಕಾರಗೊಂಡಿದೆ.ಮೆಡಿಕಲ್ ಕಾಲೇಜಿಗೆ ಈಗಾಗಲೇ 550 ಕೋಟಿ ರೂ.ಮಂಜೂರಾಗಿದ್ದು,ಮೊದಲ ಹಂತದಲ್ಲಿ 182 ಕೋಟಿ ರೂ.ವೆಚ್ಚದಲ್ಲಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗಲಿದೆ.ಮುಂದಿನ ಒಂದು ತಿಂಗಳೊಳಗೆ ಮೆಡಿಕಲ್ ಕಾಲೇಜಿಗೆ ಮುಖ್ಯಮಂತ್ರಿಗಳ ಮೂಲಕ ಶಿಲಾನ್ಯಾಸದ ಬೃಹತ್ ಕಾರ್ಯಕ್ರಮ ನಡೆಸುವ ಉದ್ದೇಶವಿದೆ ಎಂದು ಹೇಳಿದರು.ಚುನಾವಣಾ ಸಂದರ್ಭದಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ತರುವ ಭರವಸೆ ನೀಡಿದಾಗ ಅನೇಕರು ಅದನ್ನು ನಂಬಿರಲಿಲ್ಲ.ಹಿಂದಿನ ಶಾಸಕಿ ಶಕುಂತಳಾ ಶೆಟ್ಟಿ ಅವರ ಅವಧಿಯಲ್ಲಿ ಆರಂಭವಾಗಿದ್ದ ಮೆಡಿಕಲ್ ಕಾಲೇಜು ಹೋರಾಟವನ್ನು ಮುಂದುವರಿಸಿಕೊಂಡು ಬಂದು ಇದೀಗ ಈ ಹಂತಕ್ಕೆ ತಲುಪಿದ್ದೇವೆ ಎಂದು ಅವರು ಹೇಳಿದರು.
ಎರಡು ವರ್ಷದಲ್ಲಿ ಆಸ್ಪತ್ರೆ ಪೂರ್ಣ:
ಶಿಲಾನ್ಯಾಸಗೊಂಡಿರುವ ಆಸ್ಪತ್ರೆಯ ಕಾಮಗಾರಿಯನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಿ ಜನರಿಗೆ ಸೇವೆ ಒದಗಿಸುವ ಗುರಿಯಿದೆ.ಮೆಡಿಕಲ್ ಕಾಲೇಜು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂಬ ಆಶಯವಿದೆ ಎಂದು ಹೇಳಿದ ಅಶೋಕ್ ಕುಮಾರ್ ರೈ ಅವರು, ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಫಿಸಿಯೋಥೆರಪಿ, ನರ್ಸಿಂಗ್, ಡೆಂಟಲ್ ಹಾಗೂ ಆಯುರ್ವೇದ ಸೇರಿದಂತೆ ವಿವಿಧ ಕೋರ್ಸ್‌ಗಳು ಆರಂಭವಾಗಲಿವೆ.ಸುಮಾರು 25 ಸಾವಿರ ಮಂದಿ ಹೊರಗಿನಿಂದ ಬರುವ ನಿರೀಕ್ಷೆಯಿದ್ದು,10ರಿಂದ 12 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು.ಇದರಿಂದ ಪುತ್ತೂರಿನ ಆರ್ಥಿಕ ಹಾಗೂ ನಗರಾಭಿವೃದ್ಧಿಗೂ ವೇಗ ದೊರೆಯಲಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ದೊರೆಯಬೇಕು ಹಾಗೂ ಮೆಡಿಕಲ್ ಕಾಲೇಜಿನಲ್ಲಿ ತುಳು ಭಾಷೆಗೂ ಆದ್ಯತೆ ನೀಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದವರು ತಿಳಿಸಿದರು.
ಮೆಡಿಕಲ್ ಕಾಲೇಜಿಗೆ ವಿರೋಧಿಸಿದವರಿಗೆ ಅಭಿವೃದ್ಧಿಯೇ ಉತ್ತರ:
ಮೆಡಿಕಲ್ ಕಾಲೇಜು ಯಾರೊಬ್ಬರ ವೈಯಕ್ತಿಕ ಯೋಜನೆಯಲ್ಲ.ಪಕ್ಷಾತೀತವಾಗಿ ಎಲ್ಲರಿಗೂ ಸೇರಿರುವ ಸಂಸ್ಥೆಯಾಗಲಿದೆ ಎಂದು ಹೇಳಿದ ಶಾಸಕ ಅಶೋಕ್ ಕುಮಾರ್ ರೈ,ಮೆಡಿಕಲ್ ಕಾಲೇಜು ನಿರ್ಮಾಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನ ವ್ಯಕ್ತಪಡಿಸಿ ಟೀಕೆ ಮಾಡಿದವರ ಕುರಿತು ಪ್ರತಿಕ್ರಿಯಿಸಿ, ಯಾವುದೇ ಸಾಧನೆ ಮಾಡುವಾಗ ಟೀಕೆಗಳು ಸಹಜ.ಆದರೆ ಇವತ್ತು ಯಾರೆಲ್ಲ ಮೆಡಿಕಲ್ ಕಾಲೇಜು ವಿರುದ್ದ ಮಾತಾಡಿದ್ದಾರೋ ಅವರಿಗೆ ದೇವರೇ ಉತ್ತರ ಕೊಟ್ಟಿದ್ದಾರೆ.ದೊಡ್ಡ ದೊಡ್ಡ ಸ್ವಯಂ ಘೋಷಿತ ನಾಯಕರು ಎಂದು ಹೇಳಿಕೊಳ್ಳುವವರು ಪೇಜ್‌ನಲ್ಲಿ ಬರೆಯುತ್ತಾರೆ.ಕ್ಯಾಬಿನೆಟ್‌ನಲ್ಲಿ ಆಯಿತು.ಫೈನಾನ್ಸ್ ಸೆಕ್ರೆಟರಿ ಅಪ್ರೂವಲ್ ಕೊಡ್ಲಿಲ್ಲವಂತೆ.ಇನ್ನು ಮೆಡಿಕಲ್ ಕಾಲೇಜು ಆಗುತ್ತದಾ ಎಂದು ಪ್ರಶ್ನೆ ಮಾಡಿದ್ದಾರೆ.ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ನಾನು ಮಾಧ್ಯಮದ ಮೂಲಕ ಪ್ರಶ್ನಿಸುತ್ತಿದ್ದೇನೆ.ಪುತ್ತೂರಿನಲ್ಲಿ ನಾಯಕರು ಎಂದು ಹೇಳಿಕೊಳ್ಳುತ್ತಾ ಸ್ಯಾಂಕ್ಷನ್ ಆಗಿರುವ ಮೆಡಿಕಲ್ ಕಾಲೇಜಿಗೆ ಫೆಸ್ ಬುಕ್‌ನಲ್ಲಿ ವಿರೋಧ ವ್ಯಕ್ತಪಡಿಸುವ ಇವರನ್ನು ಸಮಾಜ ವಿರೋಧಿಸಬೇಕು.ಆದರೆ ಪುತ್ತೂರಿನ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.ಮೆಡಿಕಲ್ ಕಾಲೇಜು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.ಇದು ಎಲ್ಲರಿಗೂ ಸೇರಿರುವ ಸಂಸ್ಥೆಯಾಗಿದ್ದು,ನಾನು ಪುತ್ತೂರಿನಲ್ಲಿ ಬೆಂಚ್ ಮಾರ್ಕ್ ಕನಸು ಕಂಡಿದ್ದೇನೆ.ಮುಂದಿನ 5 ಸಾವಿರ ವರ್ಷಗಳು ಹೋದರೂ ಪುತ್ತೂರಿಗೆ ಮೆಡಿಕಲ್ ಕಾಲೇಜು ತಂದದ್ದು ಅಶೋಕ್ ರೈ ಹೊರತು ಬೇರೆ ಯಾರೂ ಅಲ್ಲ.ದೂಷಿಸುವವರಿಗೂ ಈ ಹಿಂದೆ ಅಽಕಾರ ಕೊಟ್ಟಿದ್ದರು.ಆದರೆ ಆ ಸಮಯದಲ್ಲಿ ಕೆಲಸ ಮಾಡದ ಅವರಿಗೆ, ಅಧಿಕಾರದ ಸಮಯದಲ್ಲಿ ಏನೇನು ಕೆಲಸ ಮಾಡಬಹುದೆಂದು ಈಗ ಬಿಸಿ ಮುಟ್ಟಿದೆ.ಇಷ್ಟರ ತನಕ ಧರ್ಮ ಆಧಾರಿತ ಚುನಾವಣೆ ನಡೆಯುತ್ತಿತ್ತು.ಇನ್ನು ಅದು ನಡೆಯುವುದಿಲ್ಲ.ಪುತ್ತೂರಿನ ಅಭಿವೃದ್ಧಿಗೆ ಒಳ್ಳೆಯ ಕೆಲಸ ಮಾಡಿದರೆ ಸ್ವೀಕಾರ ಮಾಡಿ.ಸಹಕರಿಸುವ ಕೆಲಸ ಮಾಡಿ ಎಂದು ಶಾಸಕರು ಹೇಳಿದರು.
ಶ್ರಮಕ್ಕೆ ಫಲ ಸಿಕ್ಕಿದೆ:
ಮೆಡಿಕಲ್ ಕಾಲೇಜಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಿದ ಹೋರಾಟ ಸಮಿತಿ ಹಾಗೂ ಜಾಗ ನೀಡಿದ ಸೇಡಿಯಾಪು ಕುಟುಂಬದ ಕೊಡುಗೆಯನ್ನು ಶಾಸಕ ಅಶೋಕ್ ಕುಮಾರ್ ರೈ ಸ್ಮರಿಸಿದರು.ಸರಕಾರಿ ಜಾಗವನ್ನು ಬಿಟ್ಟುಕೊಟ್ಟು ಮೆಡಿಕಲ್ ಕಾಲೇಜಿಗೆ ನೀಡಿರುವುದು ದೊಡ್ಡ ತ್ಯಾಗವಾಗಿದೆ.ಸೇಡಿಯಾಪು ಸಹೋದರರು ಜಾಗವನ್ನು ಬಿಟ್ಟುಕೊಟ್ಟಿರುವುದು ಶ್ಲಾಘನೀಯ ಎಂದ ಶಾಸಕರು,ಮೆಡಿಕಲ್ ಕಾಲೇಜಿಗಾಗಿ ಹೋರಾಟ ನಡೆಸಿದ ಎಲ್ಲರ ಶ್ರಮಕ್ಕೆ ಇದೀಗ ಫಲ ಸಿಕ್ಕಿದೆ ಎಂದರು.
ಎರಡು ವರ್ಷದಲ್ಲಿ ಪುತ್ತೂರು ಬದಲಾವಣೆ:
ಮೆಡಿಕಲ್ ಕಾಲೇಜಿನ ಸುತ್ತಮುತ್ತಲಿನ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನೂ ಶಾಸಕರು ವಿವರಿಸಿದರು.ಮೆಡಿಕಲ್ ಕಾಲೇಜಿಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ, ದೊಡ್ಡ ಕೆರೆಯ ಅಭಿವೃದ್ಧಿ ಹಾಗೂ ಕೆರೆಯ ಸುತ್ತ 100 ಅಡಿ ರಸ್ತೆ ನಿರ್ಮಾಣ ಮಾಡುವ ಉದ್ದೇಶವಿದೆ.ಆಸ್ಪತ್ರೆಗೆ ಬರುವವರು ವಿಶ್ರಾಂತಿ ಪಡೆಯಲು ಹಾಗೂ ಉತ್ತಮ ಪರಿಸರ ಅನುಭವಿಸಲು ವ್ಯವಸ್ಥೆ ಕಲ್ಪಿಸಲಾಗುವುದು.ಕೆರೆಯ ಅಭಿವೃದ್ಧಿ, ಕಾರಂಜಿ ಸೇರಿದಂತೆ ವಿವಿಧ ಸೌಂದರ್ಯೀಕರಣ ಕಾಮಗಾರಿಗಳ ಮೂಲಕ ಮುಂದಿನ ಎರಡು ವರ್ಷಗಳಲ್ಲಿ ಪುತ್ತೂರಿನ ಚಿತ್ರಣ ಬದಲಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳ ಸಹಕಾರದಿಂದ ಮೆಡಿಕಲ್ ಕಾಲೇಜು:
ಮೆಡಿಕಲ್ ಕಾಲೇಜು ಸ್ಥಾಪನೆ ಹಿಂದೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹಕಾರವಿದೆ.ಮೆಡಿಕಲ್ ಕಾಲೇಜಿನ ಪ್ರಸ್ತಾವನೆ ಬಜೆಟ್‌ನಲ್ಲಿ ಬರುವಂತಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಪ್ರಯತ್ನ ನಡೆಸಿದ್ದೇನೆ.182 ಕೋಟಿ ರೂ.ವೆಚ್ಚದಲ್ಲಿ 300 ಹಾಸಿಗೆಗಳ ಮೆಡಿಕಲ್ ಕಾಲೇಜು ಆಸ್ಪತ್ರೆಯ ಟೆಂಡರ್ ಪ್ರಕ್ರಿಯೆ ಕುರಿತು ಮುಖ್ಯಮಂತ್ರಿಗಳು ಸ್ವತಃ ಮಾಹಿತಿ ನೀಡಿದ್ದರು.ಬಳಿಕ 550 ಕೋಟಿ ರೂ. ಮೆಡಿಕಲ್ ಕಾಲೇಜಿಗೆ ಮಂಜೂರಾಗಿದ್ದು, ಸರಕಾರದ ಸಹಕಾರದಿಂದ ಯೋಜನೆ ಸಾಕಾರಗೊಳ್ಳುತ್ತಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಶಕುಂತಳಾ ಶೆಟ್ಟಿಯವರು ಕರೆ ಸ್ವೀಕರಿಸಿಲ್ಲ:
ಈ ಕಾರ್ಯಕ್ರಮಕ್ಕೆ ಬರಲೆಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರಿಗೂ ನಾನು ಎರಡ್ಮೂರು ಸಲ ಫೋನ್ ಕರೆ ಮಾಡಿದೆ.ಅವರು ಕೂಡ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು.ಆದರೆ ಅವರು ಕರೆ ಸ್ವೀಕರಿಸಿಲ್ಲ.ಮುಂದಿನ ಕಾರ್ಯಕ್ರಮಕ್ಕೆ ಅವರನ್ನು ಬರುವಂತೆ ನಾವು ಮಾಡುತ್ತೇವೆ ಎಂದು ಶಾಸಕರು ಹೇಳಿದರು.
ತುಳು ಭಾಷೆಗೆ ಈಗ ಎಲ್ಲರೂ ಕೈ ಎತ್ತುತ್ತಾರೆ:
ಇವತ್ತು ತುಳುವಿಗೆ ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡಿರುವಂಥದ್ದು ಬಹುಶಃ ಜನರ ಎಷ್ಟೋ ವರ್ಷದ ಕನಸು.ಅದನ್ನು ಮಾಡಲಿಕ್ಕೆ ಯಾರಿಗೂ ಅದು ದೊಡ್ಡ ರಾಮಾಯಣ, ಮಹಾಭಾರತ ಅಲ್ಲ.ಜನರ ಭಾವನೆಗಳಿಗೆ ಸ್ಪಂದನೆ ನೀಡಬೇಕು.ನಲವತ್ತು ವರ್ಷದಿಂದ ಈ ಕುರಿತು ಬೇಡಿಕೆ ಇತ್ತು.ಆದರೆ ಅದನ್ನು ಮಾಡಿದ ಬಳಿಕ ಈಗ ಎಲ್ಲರೂ ನಾವು ಮಾಡಿದ್ದೇವೆಂದು ಕೈ ಎತ್ತುತ್ತಾರೆ.ಮಾಡಲಿ,ಚಪ್ಪಾಳೆ ಒಂದು ಕೈಯಲ್ಲಿ ಆಗುವುದಿಲ್ಲ,ಎರಡು ಕೈಗಳೂ ಬೇಕಾಗ್ತದೆ.ಆದರೂ,ತುಳುವನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡುವ ಕೆಲಸಕ್ಕೆ ನಾನು ಹದಿನಾಲ್ಕು ಬಾರಿ ಅಽವೇಶನದಲ್ಲಿ ಮಾತಾಡಿ, ಮುಖ್ಯಮಂತ್ರಿಯವರ ಮನವನ್ನು ಒಲಿಸಿದ್ದೆ ಎಂದು ಹೇಳಿದ ಶಾಸಕರು,ಮೂರು ದಿವಸ ಇಡೀ ಕರ್ನಾಟಕದಲ್ಲಿ ತುಳುವಿನದೇ ವಿಷಯ ಓಡಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು.ತುಳುವಿಗೆ ಇಷ್ಟೊಂದು ಅಟ್ಯಾಚ್ಮೆಂಟ್ ಇದೆ ಅನ್ನೋದು ನನಗೆ ಗೊತ್ತಿರಲಿಲ್ಲ ಎಂದು ಮುಖ್ಯಂತ್ರಿಗಳು ಹೇಳಿದ್ದರು ಎಂದು ತಿಳಿಸಿದರು.
ಮಣಿಪಾಲವನ್ನು ಮೀರಿಸುವ ಕೆಲಸ ಪುತ್ತೂರಿನಲ್ಲಿ ಆಗಲಿ:
ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮೊಹಮ್ಮದ್ ಮಾತನಾಡಿ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಎದುರಾಗಿದ್ದ ಹಲವು ಸಮಸ್ಯೆಗಳು ನಿವಾರಣೆಯಾಗಿದ್ದು, ಇದೀಗ ಮೊದಲ ಹಂತದಲ್ಲಿ 300 ಹಾಸಿಗೆಗಳ ಆಸ್ಪತ್ರೆಯ ಭೂಮಿ ಪೂಜೆಯೂ ನೆರವೇರಿದೆ.ಶಾಸಕ ಅಶೋಕ್ ಕುಮಾರ್ ರೈ ಅವರ ಇಚ್ಛಾಶಕ್ತಿ ಹಾಗೂ ಪ್ರಯತ್ನದಿಂದ ಈ ಯೋಜನೆ ಸಾಕಾರಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ಮಣಿಪಾಲವನ್ನು ಮೀರಿಸುವ ರೀತಿಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಆಗಬೇಕು. ಶಾಸಕರ ಕನಸು ನನಸಾಗುವಲ್ಲಿ ಯಾವುದೇ ಸಂಶಯವಿಲ್ಲ. ಮೆಡಿಕಲ್ ಕಾಲೇಜಿನ ಅಭಿವೃದ್ಧಿಗೆ ಎಲ್ಲರೂ ರಾಜಕೀಯ ಭೇದ ಮರೆತು ಬೆಂಬಲ ನೀಡಬೇಕು ಎಂದು ಹೇಳಿದರು.
ರಾಜ್ಯದಲ್ಲೇ ಪುತ್ತೂರು ತಾಲೂಕು ನಂ.1 ಆಗಲಿ:
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಪುತ್ತೂರಿನ ಸರಕಾರಿ ಮೆಡಿಕಲ್ ಕಾಲೇಜಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಪ್ರಯೋಜನವಾಗಲಿದ್ದು,ಪುತ್ತೂರು ಪ್ರಮುಖ ಕೇಂದ್ರವಾಗಿ ಬೆಳೆಯಲಿದೆ.ಶಾಸಕರ ಆಶಯದಂತೆ ಅಭಿವೃದ್ಧಿ ಕಾರ್ಯಗಳು ಮುಂದುವರಿದರೆ ಕರ್ನಾಟಕದಲ್ಲೇ ಪುತ್ತೂರು ತಾಲೂಕು ನಂಬರ್ ವನ್ ಆಗುವುದರಲ್ಲಿ ಸಂಶಯವಿಲ್ಲ.ಮೆಡಿಕಲ್ ಕಾಲೇಜಿಗಾಗಿ ಸೇಡಿಯಾಪು ಜನಾರ್ದನ ಭಟ್ ಹಾಗೂ ವಿಶ್ವಪ್ರಸಾದ್ ಭಟ್ ಅವರು ತಮ್ಮ ಜಾಗವನ್ನು ನೀಡಿರುವುದು ಮಾದರಿಯಾಗಿದೆ.ಮೆಡಿಕಲ್ ಕಾಲೇಜು ಕುರಿತು ಈ ಹಿಂದೆ ಹಲವು ಟೀಕೆಗಳು ಕೇಳಿಬಂದಿದ್ದವು.ಅದರಲ್ಲೂ 25 ವರ್ಷ ಮೆಡಿಕಲ್ ಕಾಲೇಜು ಆಗುವುದಿಲ್ಲ ಎಂದು ಮಹಾಲಿಂಗಶ್ವರ ದೇವರ ಜಾಗದಲ್ಲಿದ್ದ ವ್ಯಕ್ತಿಯೊಬ್ಬರು ಹೇಳಿದ್ದರು.ಆದರೆ ಇವತ್ತು ಮೆಡಿಕಲ್ ಕಾಲೇಜು ಯೋಜನೆ ಸಾಕಾರಗೊಳ್ಳುತ್ತಿರುವುದನ್ನು ಎಲ್ಲರೂ ಕಾಣುವಂತಾಗಿದೆ ಎಂದರು.
ಅಭಿಮನ್ಯುವಾಗಿ ಚಕ್ರವ್ಯೂಹ ಭೇದಿಸಿದ ಶಾಸಕರು:
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಪುತ್ತೂರು ಮೆಡಿಕಲ್ ಕಾಲೇಜಿನ ಭೂಮಿ ಪೂಜೆ ಜಿಲ್ಲೆಯ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವ ದಿನವಾಗಿದೆ. ಅಽಕಾರದ ವ್ಯಾಪ್ತಿಯಲ್ಲಿ ಏನು ಸಾಧ್ಯ ಎಂಬುದನ್ನು ಪ್ರಥಮ ಬಾರಿಗೆ ಶಾಸಕರಾಗಿರುವ ಅಶೋಕ್ ಕುಮಾರ್ ರೈ ಅವರು ತೋರಿಸಿಕೊಟ್ಟಿದ್ದಾರೆ.ಚುನಾವಣಾ ಸಂದರ್ಭದಲ್ಲಿ ಪುತ್ತೂರಿಗೆ ಮೆಡಿಕಲ್ ಕಾಲೇಜು ತರುವ ಭರವಸೆ ನೀಡಿದ್ದರು.ಇದೀಗ ಹಲವು ಕಷ್ಟ-ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಅವರು ಮೆಡಿಕಲ್ ಕಾಲೇಜಿನ ಕನಸನ್ನು ಸಾಕಾರಗೊಳಿಸುವ ಹಂತಕ್ಕೆ ತಂದಿದ್ದಾರೆ ಎಂದು ಹೇಳಿದರು ಮೆಡಿಕಲ್ ಕಾಲೇಜಿನ ಶಿಲಾನ್ಯಾಸ ಫಲಕದಲ್ಲಿ ಮುಂದಿನ ಪೀಳಿಗೆಗಳೂ ಶಾಸಕ ಅಶೋಕ್ ರೈ ಅವರ ಹೆಸರನ್ನು ನೆನಪಿಸಿಕೊಳ್ಳುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹೋರಾಟದ ಫಲ ಸಾರ್ಥಕತೆಯ ಅನುಭವ:
ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷರೂ ಆಗಿದ್ದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಮಾತನಾಡಿ, ಪುತ್ತೂರನ್ನು ಹೊಸ ರೂಪದಲ್ಲಿ ಕಾಣುವ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ.ಮೆಡಿಕಲ್ ಕಾಲೇಜಿಗಾಗಿ ಹಿಂದೆ ಹೋರಾಟ ಸಮಿತಿ ರಚಿಸಿ ಪ್ರಯತ್ನ ನಡೆಸಲಾಗಿತ್ತು.ಆಗ ಶಾಸಕರಾಗಿದ್ದ ಶಕುಂತಳಾ ಶೆಟ್ಟಿ ಅವರ ಅವಽಯಲ್ಲಿ ಆರಂಭವಾದ ಪ್ರಯತ್ನದ ಬಳಿಕ ಹಲವು ಹಂತಗಳ ಸವಾಲುಗಳನ್ನು ದಾಟಿ ಯೋಜನೆ ಇದೀಗ ಸಾಕಾರಗೊಳ್ಳುತ್ತಿದೆ.ಅಶೋಕ್ ಕುಮಾರ್ ರೈ ಅವರು ಶಾಸಕರಾದ ಬಳಿಕ ಮೆಡಿಕಲ್ ಕಾಲೇಜಿನ ಕನಸು ಈಡೇರುವ ಹಂತಕ್ಕೆ ಬಂದಿದೆ.ಮೆಡಿಕಲ್ ಕಾಲೇಜಿನಿಂದ ಪುತ್ತೂರು ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳೂ ಅಭಿವೃದ್ಧಿಯಾಗಲಿವೆ.ಮೆಡಿಕಲ್ ಕಾಲೇಜಿಗಾಗಿ ಹೋರಾಟ ನಡೆಸಿದ ನಮಗೆ ಇದೀಗ ಸಾರ್ಥಕತೆಯ ಅನುಭವವಾಗುತ್ತಿದೆ ಎಂದು ಹೇಳಿದರು.
ಹಿಡಿದ ಕೆಲಸವನ್ನು ಬಿಡದ ವ್ಯಕ್ತಿ ಅಶೋಕ್ ರೈ:
ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಪ್ರಮುಖರಾದ ಸೇಡಿಯಾಪು ವಿಶ್ವಪ್ರಸಾದ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, 2012-13ರಲ್ಲಿ ಆಗಿನ ಶಾಸಕಿ ಶಕುಂತಳಾ ಶೆಟ್ಟಿ ಅವರು ಮೆಡಿಕಲ್ ಕಾಲೇಜಿಗೆ ಜಾಗ ಹುಡುಕುತ್ತಿರುವುದು ತಿಳಿದಾಗ, ತಮ್ಮ ಕುಟುಂಬದ ಜಾಗವನ್ನು ಮೆಡಿಕಲ್ ಕಾಲೇಜಿಗಾಗಿ ನೀಡಲು ನಿರ್ಧರಿಸಲಾಯಿತು.2014-15 ರ ಅವಧಿಯಲ್ಲಿ ಆರ್‌ಟಿಸಿಯಲ್ಲಿ ಮೆಡಿಕಲ್ ಕಾಲೇಜಿಗೆ ಮೀಸಲು ಜಾಗ ಎಂದು ದಾಖಲಿಸಲಾಗಿತ್ತು.ಬಳಿಕ ಸರಕಾರದ ಮೇಲೆ ಒತ್ತಡ ತರಲು ಹೋರಾಟ ಸಮಿತಿಯಿಂದ ವಿವಿಧೆಡೆ ಸಭೆಗಳನ್ನು ನಡೆಸಲಾಗಿತ್ತು.ಈಗಿನ ಶಾಸಕ ಅಶೋಕ್ ಕುಮಾರ್ ರೈ ಅವರು ಹಿಡಿದ ಕೆಲಸವನ್ನು ಬಿಡದ ವ್ಯಕ್ತಿಯಾಗಿದ್ದು, ಮೆಡಿಕಲ್ ಕಾಲೇಜು ಸಾಕಾರಗೊಳ್ಳುವಲ್ಲಿ ಅವರ ಪ್ರಯತ್ನ ಪ್ರಮುಖವಾಗಿದೆ ಎಂದು ಅಭಿನಂದಿಸಿದರಲ್ಲದೆ,ಜಾಗದ ಅಭಿವೃದ್ಧಿ ಹಾಗೂ ಕಾಮಗಾರಿಯಲ್ಲಿ ಮುತುವರ್ಜಿಯಿಂದ ಕೆಲಸ ಮಾಡಿದ ಇಂಜಿನಿಯರ್‌ಗಳಾದ ಗುರುಪ್ರಸಾದ್ ಮತ್ತು ಸುಧಾಕರ್ ಅವರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

ಹೋರಾಟ ಸಮಿತಿಯವರಿಗೆ ಗೌರವ- ಶಾಸಕರಿಗೆ ಸನ್ಮಾನ:
ಮೆಡಿಕಲ್ ಕಾಲೇಜು ಹೋರಾಟ ಸಮಿತಿ ತನ್ನ ಪ್ರಯತ್ನಕ್ಕೆ ಪೂರಕವಾಗಿ ಕೆಲಸ ಮಾಡಿರುವುದನ್ನು ಗುರುತಿಸಿ ಶಾಸಕ ಅಶೋಕ್ ಕುಮಾರ್ ರೈಯವರು, ಹೋರಾಟ ಸಮಿತಿಯ ಸದಸ್ಯರಾದ ದಿನೇಶ್ ಭಟ್, ರಾಜೇಶ್‌ಕೃಷ್ಣ ಶರ್ಮ, ವೆಂಕಟ್ರಮಣ ಪುಣಚ, ಸಂಜೀವ ಕಬಕ, ಸಂದೀಪ್ ಲೋಬೋ, ದಿನೇಶ್ ಹೆಗ್ಡೆ, ಅಶೋಕ್ ಅಡ್ಯಂತಾಯ, ಡಾ.ಸಂದೀಪ್ ನಾಯ್ಕ, ಝೇವಿಯರ್ ಡಿ’ಸೋಜ,ವಿಶ್ವಪ್ರಸಾದ್ ಸೇಡಿಯಾಪು,ರೂಪೇಶ್ ರೈ ಅಲಿಮಾರು,ಎಂ.ಬಿ.ವಿಶ್ವನಾಥ ರೈ, ಅಮಳ ರಾಮಚಂದ್ರ ಭಟ್, ಸೇಡಿಯಾಪು ಜನಾರ್ದನ ಭಟ್, ರಾಜೇಶ್ ಪ್ರೆಸ್‌ನ ಎಂ.ಎಸ್.ರಘುನಾಥ ರಾವ್, ಉಲ್ಲಾಸ್ ಕೋಟ್ಯಾನ್ ಅವರಿಗೆ ಶಾಲು ಹೊದೆಸಿ ಗೌರವಿಸಿದರು.ಇದೇ ಸಂದರ್ಭ ಶಾಸಕರನ್ನು ಮೆಡಿಕಲ್ ಕಾಲೇಜು ಹೊರಾಟ ಸಮಿತಿ ಸದಸ್ಯರು ಸನ್ಮಾನಿಸಿದರು.ಗುತ್ತಿಗೆದಾರ ಬಾಬು ರಾಯ ಅವರು ಶಾಸಕರನ್ನು ಸನ್ಮಾನಿಸಿದರು.ಸೇಡಿಯಾಪು ಜಾಗದಲ್ಲಿ ಮೆಡಿಕಲ್ ಕಾಲೇಜಿನ ಭೂಮಿ ಪೂಜೆಯಲ್ಲ ಸಹಕರಿಸಿದ ಡೆನ್ನಿಸ್ ಮಸ್ಕರೇನಸ್, ಮೆಲ್ವಿನ್ ಅವರನ್ನು ಗುರುತಿಸಲಾಯಿತು.
ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್,ರೈತ ಸಂಘದ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ.,ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ರಘು ಬೆಳ್ಳಿಪ್ಪಾಡಿ,ಪುಡಾ ಮಾಜಿ ಅಧ್ಯಕ್ಷ ಪ್ರಸಾದ್‌ಕೌಶಲ್ ಶೆಟ್ಟಿ,ತಾಲೂಕು ಪಂಚ ಗ್ಯಾರೆಂಟಿ ಯೋಜನಾ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ನಗರ ಯೋಜನಾ ಪ್ರಾಽಕಾರದ ಅಧ್ಯಕ್ಷ ಅಮಲ ರಾಮಚಂದ್ರ ಭಟ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮುರಳಿಧರ ರೈ ಮಠಂತಬೆಟ್ಟು ಸ್ವಾಗತಿಸಿದರು.ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.ಕಾಂಗ್ರೆಸ್ ಪ್ರಚಾರ ಸಮಿತಿ ಪುತ್ತೂರು ನಗರ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, -ರೂಕ್ ಬಾಯಬೆ, ನಝೀರ್ ಮಠ, ಪದ್ಮನಾಭ ಶೆಟ್ಟಿ, ನಡುಬೈಲುಗುತ್ತು ಗೋಪಾಲಕೃಷ್ಣ ಪೂಜಾರಿ, ಪ್ರಕಾಶ್ ಗೌಡ, ನವೀನ್ ರೈ, ಜಯಪ್ರಕಾಶ್ ಬದಿನಾರು, ವಿಕ್ರಂ ಶೆಟ್ಟಿ ಅಂತರ, ಸುಪ್ರೀತ್ ಕಣ್ಣರಾಯ, ಸುದರ್ಶನ್, ಮಹಾಬಲ ಪೂಜಾರಿ, ಡೆನ್ನಿಸ್ ಮಸ್ಕರೇನಸ್, ಸುಧಾಕರ್ ಕೆಮ್ಮಾಯಿ, ಚಿದಾನಂದ ರೈ, ಸಾಯಿರ ಬಾನು ಸಹಿತ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕೀಳು ಭಾಷಣದಲ್ಲಿ ದೂಷಿಸುವವರಿಗೆ ಅಭಿವೃದ್ಧಿಯೇ ಉತ್ತರ
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನವನ್ನೂ ಕೂಡ ನೀವು ಕಣ್ಣೆತ್ತಿ ನೋಡೋ ತರ ಮುಂದಿನ ದಿವಸಗಳಲ್ಲಿ ಅಭಿವೃದ್ಧಿ ಮಾಡುವಂತಹ ಕೆಲಸವನ್ನು ಮಾಡ್ತೇವೆ.ಯಾರು ದೂಷಿಸ್ತಾರೆ, ಯಾರು ಕೀಳು ಭಾಷಣದಲ್ಲಿ ಮಾತಾಡ್ತಾರೆ, ಅವರಿಗೆ ಯಾರಿಗೂ ಉತ್ತರ ಕೊಡುವುದಿಲ್ಲ.ಯಾವುದಕ್ಕೂ ಉತ್ತರ ಕೊಡಬೇಡಿ, ಅಭಿವೃದ್ಧಿಯ ಮೂಲಕವೇ ಉತ್ತರ ಕೊಡಿ.ಮುಂದೆ ಜನರೇ ಉತ್ತರ ಕೊಡ್ತಾರೆ ಎಂದು ನನ್ನ ಒಂದಷ್ಟು ಮಂದಿ ಹಿತೈಷಿಗಳು ನನಗೆ ಮಾರ್ಗದರ್ಶನ ಮಾಡಿದ್ದಾರೆ.ಈ ಮುಖಾಂತರ ಪುತ್ತೂರಿನ ಅಭಿವೃದ್ಧಿ ಕೆಲಸವನ್ನು ಮಾಡಲು ನಿಮ್ಮೆಲ್ಲರ ಸಹಕಾರ ಬೇಕು. ಅಶೋಕ್ ರೈ ತಪ್ಪು ಮಾಡಿದ್ರೆ ಅದನ್ನು ತಿದ್ದುವಂತಹ ಕೆಲಸವನ್ನೂ ಮಾಡಿ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಹಳೆ ಕೋರ್ಟ್ ಹಾಲ್‌ನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗೆ ಚಿಂತನೆ
ಮೆಡಿಕಲ್ ಕಾಲೇಜಿನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪರ್ಯಾಯ ವ್ಯವಸ್ಥೆಯಾಗಿ ಪುತ್ತೂರಿನ ಹಳೆ ಕೋರ್ಟ್ ಕಟ್ಟಡದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ತರಗತಿ ಆರಂಭಿಸುವ ಯೋಜನೆಯಿದೆ.ಆರಂಭದಲ್ಲಿ 50 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಕಾಲೇಜು ಆರಂಭಿಸುವ ಉದ್ದೇಶವಿದೆ.ಮುಂದಿನ ಒಂದು ವರ್ಷದೊಳಗೆ ಅಗತ್ಯ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯಿದೆ.ಎರಡನೇ ವರ್ಷದ ವೇಳೆಗೆ ವಿದ್ಯಾರ್ಥಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಯೋಜನೆಯಿದೆ.ಪುತ್ತೂರು ಸರಕಾರಿ ಆಸ್ಪತ್ರೆಯನ್ನು 200 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆಯುತ್ತಿದ್ದು,ನರ್ಸಿಂಗ್ ಹಾಗೂ ಮೆಡಿಕಲ್ ಕಾಲೇಜುಗಳ ಆರಂಭಕ್ಕೂ ಸಿದ್ಧತೆ ನಡೆಯುತ್ತಿದೆ.ಆಯುರ್ವೇದ ಕಾಲೇಜಿಗೆ ಐದು ಎಕರೆ ಜಾಗ ಒದಗಿಸುವ ಕೆಲಸವೂ ಆಗಿದೆ
-ಅಶೋಕ್ ಕುಮಾರ್ ರೈ, ಶಾಸಕರು,ಪುತ್ತೂರು










