







25 ಲಕ್ಷಕ್ಕೂ ಅಧಿಕ ಜನರ ನಿರೀಕ್ಷೆ
150-160 ಜೋಡಿ ಕೋಣಗಳು ಭಾಗಿ, ಸಾರ್ವಜನಿಕರ ವೀಕ್ಷಣೆಗೆ ಸುಸಜ್ಜಿತ ವ್ಯವಸ್ಥೆ-ಶಾಸಕ ಅಶೋಕ್ ರೈ


ಮಂಗಳೂರು:ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಅ.18,19ರಂದು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗುವುದು.25 ಲಕ್ಷಕ್ಕೂ ಅಧಿಕ ಜನರು ಕಂಬಳ ವೀಕ್ಷಿಸುವ ನಿರೀಕ್ಷೆಯಿದ್ದು, ಇದಕ್ಕಾಗಿ ಸರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮೈಸೂರು ದಸರಾ ಕಂಬಳೋತ್ಸವದ ರೂವಾರಿ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.



ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕರೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.ಕಂಬಳ ಕರೆಯ ಉದ್ದ 147 ಮೀಟರ್ ಇರಲಿದ್ದು, ಕೋಣಗಳು ಓಡುವ ಜಾಗ 140 ಮೀಟರ್ ಇರಲಿದೆ. ಸುಮಾರು 20 ಎಕರೆ ಜಾಗದಲ್ಲಿ ಏಕಕಾಲದಲ್ಲಿ 15,000 ಜನರು ಕುಳಿತು ವೀಕ್ಷಿಸುವಂತೆ ಗ್ಯಾಲರಿ ವ್ಯವಸ್ಥೆ ಮಾಡಲಾಗುತ್ತಿದೆ.ಒಟ್ಟು 3 ವೇದಿಕೆಗಳನ್ನು ನಿರ್ಮಿಸಲಾಗುತ್ತಿದ್ದು, ಮುಖ್ಯ ವೇದಿಕೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಅಕ್ಕಪಕ್ಕದ ವೇದಿಕೆಗಳಲ್ಲಿ ವಿಐಪಿ ಮತ್ತು ವಿವಿಐಪಿ ಆಸನಗಳ ವ್ಯವಸ್ಥೆ ಇರಲಿದೆ ಎಂದರು.
ಉಚಿತ ಪ್ರವೇಶ:
ಸಾರ್ವಜನಿಕರ ವೀಕ್ಷಣೆಗೆ ಯಾವುದೇ ಪ್ರವೇಶ ಶುಲ್ಕ ಇಲ್ಲ. ಹೆಚ್ಚಿನ ಜನರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲು ದಿನಕ್ಕೆ 3 ಬ್ಯಾಚ್ಗಳಲ್ಲಿ ಪಾಸ್ಗಳನ್ನು ವಿತರಿಸಲಾಗುತ್ತದೆ.ಪಾಸ್ ಇಲ್ಲದೆಯೂ ಉಚಿತವಾಗಿ ನಿಂತು ವೀಕ್ಷಿಸಲು 5,000 ಜನರಿಗೆ ಪ್ರತ್ಯೇಕ ವಲಯ ನಿರ್ಮಿಸಲಾಗಿದೆ ಎಂದು ಅಶೋಕ್ ರೈ ತಿಳಿಸಿದರು.
ಕೋಣಗಳ ಪ್ರಯಾಣ ಮತ್ತು ವೇಳಾಪಟ್ಟಿ:
ಕಂಬಳ ಕರೆಯಲ್ಲಿ ಯಾವುದೇ ಲೋಪದೋಷ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಅ.15ರಂದು 5 ಜೋಡಿ ಕೋಣಗಳ ಪ್ರಾಯೋಗಿಕ ಓಟ ನಡೆಸಲಾಗುವುದು.ಅ.18ರಿಂದ ನಡೆಯುವ ಕಂಬಳೋತ್ಸವಕ್ಕೆ ಅ.16ರಂದು ಬೆಳಗ್ಗೆ 10:30ಕ್ಕೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯ ಆವರಣದಿಂದ ಕೋಣಗಳು ಮೈಸೂರಿಗೆ ಪಯಣ ಬೆಳೆಸಲಿವೆ.ಮಡಿಕೇರಿಯಲ್ಲಿ 3 ಗಂಟೆಗಳ ಕಾಲ ವಿರಾಮ ಹಾಗೂ ಉಪಹಾರದ ನಂತರ, ರಾತ್ರಿ 8:30ರಿಂದ 9 ಗಂಟೆಯ ವೇಳೆಗೆ ಮೈಸೂರು ತಲುಪಲಿವೆ. ಕೋಣಗಳಿಗೆ ಸುಧಾರಿಸಿಕೊಳ್ಳಲು ಅ.17ರಂದು ಪೂರ್ತಿ ದಿನ ವಿರಾಮ ನೀಡಲಾಗುವುದು ಎಂದು ವಿವರಿಸಿದರು.ಅ.18ರಂದು ಬೆಳಗ್ಗೆ ಉದ್ಘಾಟನಾ ಸಮಾರಂಭ, ಸಂಜೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಅ.19ರಂದು ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ಶಾಸಕ ರೈ ತಿಳಿಸಿದರು.
ವಿಜಯದಶಮಿ ಕರೆ:
ಮೈಸೂರಿನ ರಿಂಗ್ ರೋಡ್ ಸಮೀಪ, ಮೈಸೂರು ಅರಮನೆಯಿಂದ ಸುಮಾರು 7ರಿಂದ 8 ಕಿ.ಮೀ. ದೂರದಲ್ಲಿ ಕಂಬಳ ನಡೆಯಲಿದೆ.ಕಂಬಳ ಕರೆಗೆ ‘ವಿಜಯ ದಶಮಿ’ ಕರೆ ಎಂದು ಹೆಸರಿಡಲಾಗಿದೆ ಎಂದರು.
ಕೋಣಗಳಿಗೆ ಗೌರವಧನ:
ಸ್ಪರ್ಧೆಯಲ್ಲಿ ಭಾಗವಹಿಸುವ ದೊಡ್ಡ ಜೋಡಿ ಕೋಣಗಳಿಗೆ ರೂ.65,000 ಹಾಗೂ ಚಿಕ್ಕ ಜೋಡಿ ಕೋಣಗಳಿಗೆ ರೂ.50,000 ಗೌರವಧನವನ್ನು ಸರ್ಕಾರ ನಿಗದಿಪಡಿಸಿದೆ.ಕೋಣಗಳ ಯಜಮಾನರು ಹಾಗೂ ಕಂಬಳ ಸಮಿತಿಯವರು ಖರ್ಚು ಹೆಚ್ಚಿದ್ದು, ಗೌರವಧನ ಹಾಗೂ ಚಿನ್ನದ ಪದಕದ ತೂಕವನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದು, ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಅಶೋಕ್ ರೈ ಹೇಳಿದರು. ಪ್ರತಿ ಕೋಣದ ಯಜಮಾನರಿಗೆ ಮೈಸೂರು ದಸರಾ ನೆನಪಿನ ಕಾಣಿಕೆ, ಪ್ರಮಾಣಪತ್ರ, ಪೇಟ ಹಾಗೂ ಶಾಲು ಹೊದಿಸಿ ಗೌರವಿಸಲಾಗುವುದು. ಕೋಣಗಳ ಯಜಮಾನರು ಹಾಗೂ ಸಹಾಯಕರಿಗೆ ಪ್ರತ್ಯೇಕ ಪಾಸ್ ನೀಡಲಾಗುವುದು ಎಂದರು.
150-160 ಕೋಣಗಳ ಆಯ್ಕೆ:
ಮೈಸೂರು ಕಂಬಳದಲ್ಲಿ ಭಾಗವಹಿಸಲು ಈವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ ಸುಮಾರು 150ರಿಂದ 160 ಜೋಡಿ ಕೋಣಗಳಿಗೆ ಅವಕಾಶ ನೀಡಲಾಗುವುದು.ಇದಕ್ಕಾಗಿ ಉಪಸಮಿತಿಯೊಂದನ್ನು ರಚಿಸಿ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತದೆ. ಎಂದು ತಿಳಿಸಿದರು.
ಕಂಬಳ ಅಕಾಡೆಮಿಯ ಸಂಸ್ಥಾಪಕ ಗುಣಪಾಲ ಕಡಂಬ,ಕಂಬಳ ಎಸೋಸಿಯೇಶನ್ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಇದ್ದರುಕರಾವಳಿ ಭಾಗದ ಖಾದ್ಯ ವೈವಿಧ್ಯ ಮಳಿಗೆಗಳು
ಕರಾವಳಿ ಭಾಗದ ಖಾದ್ಯಗಳನ್ನು ಮೈಸೂರು ಸೇರಿದಂತೆ ದೇಶ ವಿದೇಶಗಳ ಜನತೆಗೆ ಪರಿಚಯಿಸಲು 4-5 ಎಕರೆ ಪ್ರದೇಶದಲ್ಲಿ ಕರಾವಳಿ ಶೈಲಿಯ ಆಹಾರ ಮಳಿಗೆಗಳನ್ನು ತೆರೆಯಲಾಗುವುದು ಎಂದು ಅಶೋಕ್ ರೈ ತಿಳಿಸಿದರು.
25 ಲಕ್ಷ ಮಂದಿ ಕಂಬಳ ವೀಕ್ಷಣೆ ನಿರೀಕ್ಷೆ
ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ವೀಕ್ಷಿಸಲು ಸುಮಾರು 25 ಲಕ್ಷ ಮಂದಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಆಗಮಿಸಲಿದ್ದಾರೆ ಎಂಬ ನಿರೀಕ್ಷೆ ನಮ್ಮದು. ಕಂಬಳದ ಬಗ್ಗೆ ಮೈಸೂರಿನಲ್ಲಿ ಈಗಾಗಲೇ ಹೆಚ್ಚಿನ ಕುತೂಹಲ ಮೂಡಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರು ಕಂಬಳ ಯಾವಾಗ ನಡೆಯಲಿದೆ ಎಂದು ವಿಚಾರಿಸುತ್ತಿದ್ದಾರೆ.

ಸೆಲ್ಪೀ, ಫೋಟೋಗೆ ಅವಕಾಶ:
ಸುಮಾರು ಐದು ಎಕರೆ ಪ್ರದೇಶದಲ್ಲಿ ಕೋಣಗಳನ್ನು ಇರಿಸುವ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಕೋಣಗಳೊಂದಿಗೆ ಛಾಯಾಚಿತ್ರ ಹಾಗೂ ಸೆಲ್ಫೀ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.ಈ ಮೂಲಕ ಕರಾವಳಿಯ ಕಂಬಳ ಕ್ರೀಡೆ, ಸಂಸ್ಕೃತಿ ಮತ್ತು ಆಹಾರ ವೈವಿಧ್ಯವನ್ನು ಮೈಸೂರು ದಸರಾ ಮೂಲಕ ರಾಜ್ಯದ ಜನರಿಗೆ ಪರಿಚಯಿಸುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿದರು.
ತುಳುನಾಡು- ಕರುನಾಡಿಗೆ ಸಂಬಂಧ ಕಲ್ಪಿಸುವ ಕೊಂಡಿಯಾಗಿ ಮೈಸೂರು ಕಂಬಳ-ದೇವಿಪ್ರಸಾದ್ ಶೆಟ್ಟಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರು ದಸರಾದಲ್ಲಿ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳಕ್ಕೆ ಅವಕಾಶ ನೀಡಿದ್ದು, ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ.ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ವಿಶೇಷ ಸ್ಥಾನ ಮಾನ ದೊರಕಿದ್ದು, ಇದೀಗ ತುಳುನಾಡು- ಕರುನಾಡಿಗೆ ಸಂಬಂಧ ಕಲ್ಪಿಸುವ ಕೊಂಡಿಯಾಗಿ ಮೈಸೂರು ಕಂಬಳ ನಡೆಯಲಿದೆ ಎಂದು ಕಂಬಳ ಎಸೋಸಿಯೇಶನ್ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.










