







ಪುತ್ತೂರು:ದೈವನರ್ತಕ ನೇಮು ಪರವ ಮಾಡಾವು ಸೇರಿದಂತೆ ತುಳು ಸಾಹಿತ್ಯ, ಸಂಶೋಧನೆ, ಜಾನಪದ ಹಾಗೂ ರಂಗಭೂಮಿ,ಸಿನಿಮಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಆರು ಮಂದಿ ಸಾಧಕರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 2025, 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದೆ.ನೇಮು ಪರವ ಅವರಿಗೆ ಜಾನಪದ ಕ್ಷೇತ್ರದ ಸೇವೆಗಾಗಿ 2026ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ.


ಪ್ರಶಸ್ತಿಯು ತಲಾ 50,೦೦೦ ರೂ.ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.ಪ್ರಶಸ್ತಿ ಪ್ರದಾನ ಸಮಾರಂಭ ಅ.4ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೆರವೇರಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.



ನೇಮು ಪರವ ಮಾಡಾವು ಪರಿಚಯ:
ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ನೇಮು ಪರವ ಅವರು ತಮ್ಮ 16ನೇ ವಯಸ್ಸಿನಿಂದಲೇ ದೈವ ನರ್ತನ ಸೇವೆ ಆರಂಭಿಸಿದವರು.ಕೆಯ್ಯೂರು ಗ್ರಾಮದ ಮಾಡಾವು ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನ, ಇರ್ದೆ ಪಿಲಿಭೂತ ಸೇರಿದಂತೆ ಪುತ್ತೂರು, ಕೊಡಗು, ಸುಳ್ಯ ಹಾಗೂ ಬಂಟ್ವಾಳ ಭಾಗದ ಪ್ರಮುಖ ದೈವಸ್ಥಾನಗಳಲ್ಲಿ ವರ್ಣರ ಪಂಜುರ್ಲಿ, ಸತ್ಯದೇವತೆ, ಪಿಲಿಚಾಮುಂಡಿ, ರಕ್ತೇಶ್ವರಿ, ಮಲರಾಯ ಮುಂತಾದ ದೈವಗಳ ನರ್ತಕರಾಗಿ, ಎಣ್ಮೂರು,ಅಂಕತ್ತಡ್ಕ ಸೇರಿ ಕರಾವಳಿಯಾದ್ಯಂತ 18 ಗರಡಿಗಳು ಹಾಗೂ 25ಕ್ಕೂ ಹೆಚ್ಚು ಪುರಾತನ ಕ್ಷೇತ್ರಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.ಸುಮಾರು 50 ವರ್ಷಗಳಿಂದ ದೈವ ನರ್ತನೆ ಸೇವೆಯಲ್ಲಿರುವ ನೇಮು ಪರವ ಅವರನ್ನು ಈಗಾಗಲೇ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.
ದೇವು ಪರವ ಮಾಡಾವು ಮತ್ತು ಕೊರಪ್ಪೊಳು ದಂಪತಿಯ ಮಗನಾಗಿರುವ ನೇಮು ಪರವ ಅವರು ಪತ್ನಿ ಹೇಮಾವತಿ,ಮಗ ರಾಜೇಶ್, ಮಗಳು ರಜನಿ,ಸೊಸೆ ಮಲ್ಲಿಕಾ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮೇಲ್ವಿಚಾರಕನಾಗಿರುವ ಅಳಿಯ ಮಾಧವ ಹಾಗೂ ಮೊಮ್ಮಕ್ಕಳು,ಮರಿಮಕ್ಕಳ ತುಂಬು ಸಂಸಾರವನ್ನು ಹೊಂದಿದ್ದಾರೆ.ಇವರ ಮಗ ರಾಜೇಶ್ ಅವರೂ ಪ್ರಸ್ತುತ ದೈವ ನರ್ತನ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ.ನೇಮು ಪರವ ಅವರ ಅಣ್ಣ ಕೋಟಿ ಪರವ ಅವರಿಗೆ 2015ರ ಸಾಲಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ನೀಡಿತ್ತು.

ಪ್ರಶಸ್ತಿ ಪುರಸ್ಕೃತ ಇತರ ಸಾಧಕರು
2025ನೇ ಸಾಲಿನ ಗೌರವ ಪ್ರಶಸ್ತಿ:
ಸಾಹಿತ್ಯ/ ಸಂಶೋಧನೆ-ಪ್ರೊ.ಬಿ.ಶಿವರಾಮ ಶೆಟ್ಟಿ, ಜಾನಪದ-ಕುಡ್ಡು ಕೊರಗ ಪಾಂಗಾಳ.ನಾಟಕ/ಸಿನಿಮಾ- ಉಷಾ ಭಂಡಾರಿ (ಬೆಂಗಳೂರು).
2026ನೇ ಸಾಲಿನ ಗೌರವ ಪ್ರಶಸ್ತಿ:
ಸಾಹಿತ್ಯ/ ಸಂಶೋಧನೆ-ಕೆ.ಪಿ. ರಾವ್ (ಕಿನ್ನಿಕಂಬಳ ಪದ್ಮನಾಭ ರಾವ್),ನಾಟಕ/ ಸಿನಿಮಾ-ಸುಧಾಕರ ಬನ್ನಂಜೆ (ಬೆಂಗಳೂರು).










