







ವಿಶ್ವಕ್ಕೆ ಕರಾವಳಿಯ ಕಂಬಳ ಪರಿಚಯಿಸುವ ಸಂಕಲ್ಪ: ಶಾಸಕ ಅಶೋಕ್ ಕುಮಾರ್ ರೈ


ಪುತ್ತೂರು: ಮೈಸೂರಿನಲ್ಲಿ ನಡೆಯಲಿರುವ ಕಂಬಳವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಿ, ವಿಶ್ವಮಟ್ಟದಲ್ಲಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಪರಿಚಯಿಸುವ ಸಂಕಲ್ಪ ಹೊಂದಲಾಗಿದೆ. ಇದಕ್ಕಾಗಿ ಸುಮಾರು 150 ಜೋಡಿ ಕೋಣಗಳನ್ನು ಪುತ್ತೂರಿನಿಂದ ಮೈಸೂರಿಗೆ ಕೊಂಡೊಯ್ಯಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.



ಪುತ್ತೂರಿನಲ್ಲಿ ಮಾದ್ಯಮದ ಜೊತೆ ಮಾತನಾಡಿದ ಅವರು ಈ ಬಾರಿ ದಸರಾ ಸಂದರ್ಭದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸುವ ಕ್ರೀಡೆ ಕಂಬಳವಾಗುವ ನಿರೀಕ್ಷೆಯಿದ್ದು, ಸುಮಾರು 25 ಲಕ್ಷ ಮಂದಿ ಕಂಬಳ ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಏಕಕಾಲದಲ್ಲಿ ಸುಮಾರು 8 ಸಾವಿರ ಮಂದಿ ಕಂಬಳ ವೀಕ್ಷಿಸಲು ಸಾಧ್ಯವಾಗುವಂತೆ ಬ್ಯಾಚ್‌ವಾರು ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಸುಮಾರು 5,6 ಸಾವಿರ ಮಂದಿ ನಿಂತುಕೊಂಡು ವೀಕ್ಷಿಸಲು ಅನುಕೂಲವಾಗುವಂತೆ ವಿವಿಧ ಹಂತಗಳಲ್ಲಿ ಸ್ಟೇಜ್‌ಗಳನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು. ಕಂಬಳದ ಜತೆಗೆ ಕರಾವಳಿಯ ಸಾಂಪ್ರದಾಯಿಕ ಆಹಾರ, ತಿಂಡಿ-ತಿನಿಸುಗಳು ಹಾಗೂ ಹಿಂದಿನ ಕಾಲದ ಪರಿಕರಗಳ ಪ್ರದರ್ಶನ ಕೂಡ ಆಯೋಜಿಸಲಾಗುವುದು. ಇದರಿಂದ ಕಂಬಳದ ಜತೆಗೆ ಕರಾವಳಿಯ ಸಂಸ್ಕೃತಿ ಮತ್ತು ಜೀವನಶೈಲಿಯನ್ನೂ ಮೈಸೂರಿಗೆ ಪರಿಚಯಿಸುವ ಉದ್ದೇಶವಿದೆ ಎಂದರು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಪ್ರಯಾಣ
ಸುಮಾರು 150 ಜೋಡಿ ಕೋಣಗಳು ಶುಕ್ರವಾರ ಬೆಳಗ್ಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ. ಮಾರ್ಗಮಧ್ಯೆ ಮಡಿಕೇರಿಯಲ್ಲಿ ಸುಮಾರು ಮೂರು ಗಂಟೆಗಳ ವಿಶ್ರಾಂತಿ ನೀಡಲಾಗುವುದು. ಬಳಿಕ ಸಂಜೆ ಮೈಸೂರಿಗೆ ತಲುಪಲಿದ್ದು, ಶನಿವಾರ ಕೋಣಗಳಿಗೆ ವಿಶ್ರಾಂತಿ ನೀಡಲಾಗುವುದು. ಅದಿತ್ಯವಾರ ಹಾಗೂ ಸೋಮವಾರ ಕಂಬಳ ನಡೆಯಲಿದೆ ಎಂದು ಅಶೋಕ್ ಕುಮಾರ್ ರೈ ವಿವರಿಸಿದರು. ವಿದೇಶಗಳಿಂದಲೂ ಸುಮಾರು 10ರಿಂದ 15 ಸಾವಿರ ಮಂದಿ ಕಂಬಳ ವೀಕ್ಷಿಸಲು ಆಗಮಿಸುವ ನಿರೀಕ್ಷೆಯಿದೆ. ವಿದೇಶಿ ಪ್ರವಾಸಿಗರಿಗೆ ವಿಶೇಷ ಕೌಂಟರ್ ಹಾಗೂ ವಿಶೇಷ ಪಾಸ್‌ಗಳ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಕಂಬಳವನ್ನು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ, ವಿಶ್ವದ ಗಮನ ಸೆಳೆಯುವಂತೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಎಲ್ಲರಿಗೂ ಉಚಿತ ವೀಕ್ಷಣೆ
ಕಂಬಳ ವೀಕ್ಷಣೆಗೆ ಸಾರ್ವಜನಿಕರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಎಲ್ಲರಿಗೂ ಉಚಿತವಾಗಿ ಕಂಬಳ ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ಕಂಬಳದ ಉದ್ಘೋಷಣೆಯನ್ನು ತುಳು ಹಾಗೂ ಕನ್ನಡ ಭಾಷೆಯಲ್ಲಿ ನಡೆಸಲಾಗುವುದು. ಇದರ ಮೂಲಕ ಕರಾವಳಿಯ ಭಾಷೆ, ಸಂಸ್ಕೃತಿ ಮತ್ತು ಕಂಬಳದ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.










