ಬಜತ್ತೂರು: ಟ್ಯಾಂಕರ್ ಲಾರಿಗೆ ಬೈಕ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು : ಪ್ರಕರಣ ದಾಖಲು

0

ನೆಲ್ಯಾಡಿ: ಬೈಕ್ ಹಾಗೂ ಟ್ಯಾಂಕರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ ದಾರುಣ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಸೆ.25ರಂದು ರಾತ್ರಿ 11 ಗಂಟೆಗೆ ನಡೆದಿದೆ.


ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಕಜೆ ನಿವಾಸಿ, ಗಾರೆ ಮೇಸಿ ಕೆಲಸ ಮಾಡುತ್ತಿದ್ದ ಅಣ್ಣು (52ವ.) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅಣ್ಣು ಅವರು ಕೋಡಿಂಬಾಡಿಯ ತನ್ನ ಮನೆಯಿಂದ ತಂದೆಯ ತಾಯಿಯನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಗೋಳಿತ್ತೊಟ್ಟಿಗೆ ಬಂದು, ಮೃತಪಟ್ಟಿದ್ದ ಸಂಬಂಽಕರೊಬ್ಬರ ಮನೆಗೆ ಹೋಗಿ ಅಲ್ಲಿಂದ ಬೈಕ್‌ನಲ್ಲಿ ಒಬ್ಬರೇ ಮತ್ತೆ ಕೋಡಿಂಬಾಡಿಯ ತನ್ನ ಮನೆಗೆ ಹಿಂತಿರುಗಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಅಣ್ಣು ಅವರು ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕ್ (ಕೆಎ 21, ವಿ 4177) ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಎದುರಿನಿಂದ ಅಂದರೆ ಮಂಗಳೂರಿನಿಂದ ಹಾಸನ ಕಡೆಗೆ ಬರುತ್ತಿದ್ದ ಟ್ಯಾಂಕರ್ ಲಾರಿ (ಕೆಎ 22, ಎಬಿ 2469)ಯ ಮುಂದಿನ ಚಕ್ರದ ಮಡ್ ಗಾರ್ಡಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಟ್ಯಾಂಕರ್ ಲಾರಿ ಚಾಲಕ ಮಲ್ಲಪ್ಪ ಸಂಕೋನಟ್ಟಿ ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಅಣ್ಣು ಅವರು ತಾಯಿ, ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಮನೆಗೆ ದಲಿತ ಮುಖಂಡರಾದ ರಾಜು ಹೊಸಮಠ, ಗಿರಿಧರ ನಾಯ್ಕ್ ಮತ್ತಿತರರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here