







ಪುತ್ತೂರು: ವ್ಯಾಜ ಮುಕ್ತ ಗ್ರಾಮ ನಿರ್ಮಾಣಕ್ಕೆ ಕಾನೂನು ಸಾಕ್ಷರತೆ, ಉಚಿತ ಕಾನೂನು ನೆರವು, ಲೋಕ ಅದಾಲತ್ ಅಭಿಯಾನ ಆರಂಭಿಸಲಾಗಿದೆ ಎಂದು 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಹಾಗೂ ಪುತ್ತೂರು ತಾಲೂಕು ಕಾನೂನು ಸೇವೆಗಳ ಅಧ್ಯಕ್ಷರಾದ ಸದಾನಂದ ನಾಗಪ್ಪ ನಾಯಕ್ ತಿಳಿಸಿದ್ದಾರೆ.
ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ, ಬೀರಿಗ ಅಂಗನವಾಡಿ,ಬನ್ನೂರು ಪಂಚಾಯತ್, ಮಹಿಳಾ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ,ಜನ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆದ ವಿಶ್ವ ಸಾಕ್ಷರತಾ ದಿನಾಚರಣೆ, ಪೋಷಣಾ ಅಭಿಯಾನ್, ಖಾಯಂ ಅದಾಲತ್ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಪೂರ್ಣ ಸಾಕ್ಷರತೆ, ಉತ್ತಮ ಸಂಸ್ಕಾರದೊಂದಿಗೆ ಕಾನೂನಿನ ಅರಿವಿನಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯವೆಂದೂ ತಿಳಿಸಿದರು.
ಇನ್ನೋರ್ವ ನ್ಯಾಯಾಧೀಶರಾದ ರಮ್ಯಾ ಆರ್ ಮಕ್ಕಳ ಶಿಕ್ಷಣ, ಮಹಿಳೆಯರ ಜಾಗೃತಿ, ಪೌಷ್ಟಿಕ ಆಹಾರ ಪದ್ದತಿ ಕುರಿತು ಮಾಹಿತಿ ನೀಡಿದರು.ನರೇಗಾ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಸಂವಿಧಾನ ಓದು ಪುಸ್ತಕ ವಿತರಿಸಿ ಸಂವಿಧಾನ ಮತ್ತು ಕಾನೂನು ಸಾಕ್ಷರತಾ ಅಭಿಯಾನದ ಬಗ್ಗೆ ತಿಳಿಸಿದರು. ನೋಟರಿ ವಕೀಲರಾದ ಪುತ್ತೂರು ವಕೀಲರ ಸಂಘದ ಕೋಶಾಧಿಕಾರಿ ಭಾರತಿ ಎ . ಸಂಪನ್ಮೂಲ ವ್ಯಕ್ತಿಯಾಗಿ ಸಮಗ್ರ ಮಕ್ಕಳ ಮತ್ತು ಮಹಿಳಾ ಕಾನೂನು ಮತ್ತು ಅಭಿವೃದ್ಧಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಯಶೋಧ ಪೋಷಣಾ ಅಭಿಯಾನ್, ಪೌಷ್ಟಿಕ ಆಹಾರ ಸಪ್ತಾಹದ ಬಗ್ಗೆ ಮಾಹಿತಿ ನೀಡಿದರು.
ವಕೀಲರ ಸಂಘದ ಜತೆ ಕಾರ್ಯದರ್ಶಿ ಉದಯಚಂದ್ರ, ಸಮುದಾಯ ಆರೋಗ್ಯ ಅಧಿಕಾರಿ ಶೃತಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ಬೀರೀಗ ಅಂಗನವಾಡಿ ಕಾರ್ಯಕರ್ತೆ ಅರುಣಾ ಕಾರ್ಯಕ್ರಮ ನಿರೂಪಿಸಿ, ಸ್ವಾತಿ ಗಣೇಶ್ ಸ್ವಾಗತಿಸಿದರು.ಅಂಗನವಾಡಿ ಪುಟಾಣಿಗಳ ಆಶಯ ಗೀತೆ,ನಾಡ ಗೀತೆ, ಜಾಗೃತಿ ಘೋಷಣೆ ಮೂಲಕ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಆರಂಭವಾಯಿತು. ಸ್ತ್ರೀ ಶಕ್ತಿ ಸಂಜೀವಿನಿ ಒಕ್ಕೂಟದ ಸದಸ್ಯರು ಮನೆ ಮನೆಗಳಿಂದ ತಯಾರಿಸಿ ತಂದಿದ್ದ ಪೌಷ್ಟಿಕ ಆಹಾರದ ಪದರ್ಶನದೊಂದಿಗೆ ಸಾಮೂಹಿಕ ಸಹ ಭೋಜನ ನಡೆಯಿತು.












