







ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೀಡಲಾಗುವ 2026-27ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೊಳಪಟ್ಟ ಕಾಂಚನದ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಎ. ಲಕ್ಷ್ಮಣ ಗೌಡ ಭಾಜನರಾಗಿದ್ದಾರೆ.


ವಿಜಯಪುರ ಜಿಲ್ಲೆಯ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಇವರ ದೀರ್ಘಕಾಲದ ಸಾರ್ಥಕ ಸೇವೆ, ಶಾಲೆಯ ಅಭಿವೃದ್ಧಿಗೆ ನೀಡಿದ ಅಪಾರ ಕೊಡುಗೆ, ವಿದ್ಯಾರ್ಥಿಗಳ ಸಾಧನೆಗೆ ನೀಡಿದ ಪ್ರೋತ್ಸಾಹ ಹಾಗೂ ಆದರ್ಶ ಮುಖ್ಯ ಶಿಕ್ಷಕರಾಗಿ ನಿರ್ವಹಿಸಿದ ಜವಾಬ್ದಾರಿಗಳನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.



ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾಗಿರುವ ಇವರು ಶಾಲೆಯಲ್ಲಿನ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಳಕ್ಕೆ, ಶಾಲೆಯ ಮೂಲಭೂತ ಸೌಕರ್ಯಕ್ಕೆ, ಶಾಲಾ ನೂತನ ಕಟ್ಟಡ, ಸುಸಜ್ಜಿತವಾದ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ನೃತ್ಯ, ಚಿತ್ರಕಲೆ, ಯಕ್ಷಗಾನ ತರಬೇತಿ ಹೀಗೆ ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ.










