







7.46 ಲಕ್ಷ ರೂ. ನಿವ್ವಳ ಲಾಭ | ಶೇ.25 ಡಿವಿಡೆಂಡ್, ಹಾಲು ಉತ್ಪಾದಕರಿಗೆ ಶೇ.65 ಬೋನಸ್ ಘೋಷಣೆ


ಪೆರಾಬೆ: ಕಡಬ ತಾಲೂಕಿನ ಪೆರಾಬೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.19ರಂದು ಸಂಘದ ವಠಾರದಲ್ಲಿ ನಡೆಯಿತು.



ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಕುಸುಮಾವತಿ ಬಿ.ಅವರು ಮಾತನಾಡಿ, 2025-26ನೇ ಸಾಲಿನಲ್ಲಿ ಸಂಘವು 7,46,004 ರೂ.ನಿವ್ವಳ ಲಾಭಗಳಿಸಿದೆ. ಲಾಭಾಂಶವನ್ನು ಸಂಘದ ನಿಯಮಾನುಸಾರ ವಿಂಗಡಿಸಲಾಗಿದ್ದು ಸದಸ್ಯರಿಗೆ ಶೇ. 25 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಬೋನಸ್ ರೂಪದಲ್ಲಿ ಶೇ.65 ರಷ್ಟು ಅಂದರೆ 3,56,403 ರೂ.ನೀಡಲಾಗುವುದು ಎಂದರು. ಹಾಲಿನ ಗುಣಮಟ್ಟದ ಹೆಚ್ಚಳಕ್ಕೆ ಸದಸ್ಯರು ಗಮನಕೊಡಬೇಕು. ಡಿಗ್ರಿ ಮತ್ತು ಫ್ಯಾಟ್ ಸರಿ ಇರಬೇಕು. ಹಸುವಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ವಿಮೆ ಮಾಡದೇ ಇದ್ದಲ್ಲಿ ಹಸು ಸತ್ತು ಹೋದರೆ ಅದಕ್ಕೆ ಸಂಘ ಜವಾಬ್ದಾರಿ ಆಗುವುದಿಲ್ಲ ಎಂದು ಹೇಳಿದರು. ವರದಿ ವರ್ಷದಲ್ಲಿ ಯಾವುದೇ ಸದಸ್ಯರ ರದ್ದತಿ ಇರುವುದಿಲ್ಲ, 21 ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ. 2026-27ನೇ ಸಾಲಿನಲ್ಲಿ ಕಟ್ಟಡ ಅಭಿವೃದ್ಧಿ ಪಡಿಸುವ ಯೋಜನೆ ಹಾಕಲಾಗಿದೆ. ಅಲ್ಲದೇ ಸೈಲೇಜ್ ಇಡುವ ಕೊಠಡಿ, ಕ್ಯಾನ್ಗಳನ್ನು ಇಡಲು ಕೊಠಡಿ, ಶೌಚಾಲಯ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿ ಸದಸ್ಯರ ಸಹಕಾರ ಕೋರಿದರು.
ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಆದಿತ್ಯ ಸಿ.ಅವರು ಮಾತನಾಡಿ, ಅನಾರೋಗ್ಯದಿಂದ ಬಳಲುತ್ತಿರುವ ಸದಸ್ಯರಿಗೆ ರೈತ ಕಲ್ಯಾಣ ಯೋಜನೆಯಡಿ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಜಾನುವಾರು ವಿಮೆ, ಜಂತುಹುಳದ ಔಷಧ ನೀಡುವ ಬಗ್ಗೆ ಮಾಹಿತಿ ನೀಡಿದರು. ಹಸು ಸಾಕಾಣಿಕೆ, ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಗುವ ಸವಲತ್ತುಗಳ ಬಗ್ಗೆಯೂ ಮಾಹಿತಿ ನೀಡಿದ ಅವರು, ಹಾಲು ಉತ್ಪಾದನೆ ಹೆಚ್ಚಾಗಿರುವುದಕ್ಕೆ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷೆ ಭವಾನಿ, ನಿರ್ದೇಶಕರಾದ ಲೀಲಾವತಿ ಎಸ್.ಶೆಟ್ಟಿ, ಪ್ರಕಾಶಿನಿ ವಿ.ಶೆಟ್ಟಿ, ಶಾರದಾ ಜಿ., ನಾಗವೇಣಿ, ಭವಾನಿ, ಶ್ವೇತಾ, ಚಂದ್ರಿಕಾ, ನಮಿತಾ ಎಸ್.ಎ., ಮಮತಾ ಜಿ.ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಕ್ಷತಾ ವರದಿ ಮಂಡಿಸಿದರು. ನಿರ್ದೇಶಕರಾದ ಲೀಲಾವತಿ ಎಸ್.ಶೆಟ್ಟಿ ಸ್ವಾಗತಿಸಿ, ಮಮತಾ ಜಿ.ಭಟ್ ವಂದಿಸಿದರು. ಪ್ರಕಾಶಿನಿ ವಿ.ಶೆಟ್ಟಿ ಪ್ರಾರ್ಥಿಸಿದರು.
ಸದಸ್ಯರಿಗೆ ಬಹುಮಾನ;
ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು. ಪ್ರಥಮ-ನಮಿತಾ ಎಸ್.ಎ.(19,770.66 ಲೀ.), ದ್ವಿತೀಯ -ಮಾಲಿನಿ ಜಿ.ಶೆಟ್ಟಿ ( 16,751.71ಲೀ.) ಹಾಗೂ ತೃತೀಯ-ಭಾರತಿ(12,904ಲೀ.) ಅವರು ಬಹುಮಾನ ಪಡೆದುಕೊಂಡರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ;
ಕಳೆದ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಮಹಾಸಭೆಯಲ್ಲಿ ಗೌರವಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಶರಣ್ಯ ಶೆಟ್ಟಿ, ಆದ್ಯ ಬಿ.ರೈ, ದ್ವಿತೀಯ ಪಿಯುಸಿಯಲ್ಲಿ ಅನ್ವಿತಾ, ಕೀರ್ತಿ ಇವರನ್ನು ಗೌರವಿಸಲಾಯಿತು. ಕುಂಟ್ಯಾನದಲ್ಲಿ ಹಾಲು ಖರೀದಿ ಉಪಕೇಂದ್ರ ಪ್ರಾರಂಭವಾದ ದಿನದಿಂದ ಹಾಲು ಖರೀದಿಸಲು ಸ್ಥಳಾವಕಾಶ, ವಿದ್ಯುತ್, ನೀರು ನೀಡಿ ಸಹಕರಿಸಿದ ಸದಸ್ಯೆ ಮಮತಾ ಅವರನ್ನು ಸಂಘದ ಸಭೆಯಲ್ಲಿ ಸನ್ಮಾನಿಸಲಾಯಿತು.










