







ಪುತ್ತೂರು: ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡರೂ ಕಲ್ಪನೆಗೆ ಕಣ್ಣುಗಳಿರುತ್ತವೆ ಎಂಬುದನ್ನು ಸಾಬೀತುಪಡಿಸುವ ವಿಶಿಷ್ಟ ಸಾಹಸಕ್ಕೆ ಕೈ ಹಾಕಿದ ಪುತ್ತೂರಿನ ಕಲ್ಲಾರೆಯ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಏಷ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಗೊಂಡಿದ್ದಾರೆ.


ಈ ಹಿಂದೆ ವರ್ಣಕುಟೀರದ ವಿದ್ಯಾರ್ಥಿನಿ ಶಮಿಕ ಎಂ.ಕೆ. ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಿನ್ನೆಲೆ ಗಾಯನದೊಂದಿಗೆ ನಿರಂತರ 24 ಗಂಟೆಗಳಲ್ಲಿ ಸುಮಾರು 300 ಸ್ಯಾಂಡ್ ಆರ್ಟ್ ಕಲಾಕೃತಿಗಳನ್ನು ರಚಿಸಿ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ನಿರ್ಮಿಸಿದ್ದರು. ಇದೀಗ ಆ ಸಾಧನೆಯ ಮುಂದುವರಿದ ಭಾಗವಾಗಿ ಮತ್ತೊಂದು ವಿಶಿಷ್ಟ ದಾಖಲೆ ನಿರ್ಮಾಣಗೊಂಡಿದೆ.



‘ಮೂರನೇ ಕಣ್ಣಿನಿಂದ ನೋಡುವ ವಿದ್ಯೆ’ ಎಂದೇ ಪರಿಗಣಿಸಲ್ಪಡುವ ಗಾಂಧಾರಿ ವಿದ್ಯೆ (ಸ್ಯಾಂಡ್ ಆರ್ಟ್ ಕಲಾ ವಿನ್ಯಾಸ)ಯಲ್ಲಿ 6ನೇ ತರಗತಿಯ ಮೂವರು ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿರಂತರ 30 ಗಂಟೆಗಳ ಮತ್ತು 3ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಕಣ್ಣು ಬಿಟ್ಟುಕೊಂಡು ನಿರಂತರ 18 ಗಂಟೆಗಳ ಕಾಲ ಸ್ಯಾಂಡ್ ಆರ್ಟ್ ರಚಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಗೊಂಡಿದ್ದಾರೆ. ಇದರ ಜೊತೆಗೆ 8 ಮಂದಿ ಹಿನ್ನೆಲೆ ಗಾಯಕರು ಕೂಡಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಗೊಳ್ಳುವ ಮೂಲಕ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಿಂದ ಮೂರು ಪ್ರತ್ಯೇಕ ಸಾಧನೆ ಮಾಡಲಾಗಿದೆ.
ಏಷ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಏಷ್ಯಾ ವಿಭಾಗದ ಮುಖ್ಯಸ್ಥ ಡಾ| ಮನೀಷ್ ವೈಷ್ಣೋಯಿ ಅವರ ಸಮ್ಮುಖದಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳಾದ ಬುವಿಕ ಆರ್.ಕೆ, ಅಂಶಿ ಸಂತೋಷ್ ಕುಮಾರ್, ವಿಷ್ಮಾ ಅಜ್ಜಿಕಲ್ಲು ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 30 ಗಂಟೆಗಳ ಕಾಲ ಮತ್ತು 3ನೇ ತರಗತಿಯ ವಿದ್ಯಾರ್ಥಿಗಳಾದ ಹಿಮಾಂಶುಕೃಷ್ಣ ಮತ್ತು ಸೋಹನ್ ಕೆ.ಎಸ್ ಕಣ್ಣಿಗೆ ಬಟ್ಟೆ ಕಟ್ಟದೆ 18 ಗಂಟೆಗಳ ಕಾಲ ಸ್ಯಾಂಡ್ ಆರ್ಟ್ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಗೊಂಡರು. ಬಳಿಕ ಅವರಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಪ್ರಮಾಣ ಪತ್ರ ಹಸ್ತಾಂತರಿಸಲಾಯಿತು. ಇದೇ ಸಂದರ್ಭ ವಿದ್ಯಾರ್ಥಿಗಳ ಸಾಧನೆಗೆ ಹಿನ್ನೆಲೆ ಗಾಯಕರಾಗಿ ಸಾಥ್ ನೀಡಿದ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ, ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರು, ಅನುಷಾ ಅಮ್ಮಣ್ಣಾಯ, ರವಿ ಪುತ್ತೂರು, ಶಿವ ಕುಮಾರ್ ಬೆಟ್ಟಂಪಾಡಿ, ಪ್ರಸನ್ನ ಪಿ, ಗ್ರೀಷ್ಮಾ ಏಕತಡ್ಕ, ಗೌತಮ್ ಕೃಷ್ಣ ನೆಕ್ಕರೆ ಅವರಿಗೂ ಕೂಡಾ ಉತ್ತಮ ಸಮನ್ವಯಕಾರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಘೋಷಣೆ ಮಾಡಲಾಯಿತು.
ಅನೇಕ ಗಣ್ಯರ ಶುಭ ಹಾರೈಕೆ:
ಸೆ.26ರಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಿ.ವಿ.ನಾರಾಯಣ ಭಟ್ ಅವರು ದಾಖಲೆ ಕಾರ್ಯಕ್ರಮ ಉದ್ಘಾಟಿಸಿದರು. ಆ ಬಳಿಕ ಪ್ರದರ್ಶನ ಆರಂಭಗೊಂಡಿತು. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ವಿಜಯ ಸಾಮ್ರಾಟ್ ಸಂಸ್ಥಾಪಕ ಸಹಜ್ ರೈ ಬಳಜ್ಜ, ರಾಜ್ಯ ಸಹಕಾರಿ ಮಹಾಮಂಡಲದ ನಿರ್ದೇಶಕರು ಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಸಿವಿಲ್ ಇಂಜಿನಿಯರ್ ಹರಿಪ್ರಸಾದ್ ರೈ ಸಹಿತ ಅನೇಕ ಮಂದಿ ಆಗಮಿಸಿ ಶುಭ ಹಾರೈಸಿದ್ದರು.
ಸಾಧಕ ವಿದ್ಯಾರ್ಥಿಗಳ ಪರಿಚಯ:
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 30 ಗಂಟೆಗಳ ಸ್ಯಾಂಡ್ ಆರ್ಟ್ ಸಾಧನೆ ಮಾಡಿದವರಲ್ಲಿ ಬೆಥನಿ ಆಂಗ್ಲಮಾಧ್ಯಮ ಶಾಲೆಯ 6ನೇ ತರಗತಿಯ ಬುವಿಕ ಆರ್ ಕೆ. ಇವರು ಪಂಜಳ ರಘುಪೂಜಾರಿ ಮತ್ತು ರಮ್ಯ ಬಿ ದಂಪತಿ ಪುತ್ರಿ. ಇಂದ್ರಪ್ರಸ್ಥ ಆಂಗ್ಲಮಾಧ್ಯಮ ಶಾಲೆಯ 6ನೇ ತರಗತಿಯ ಅಂಶಿಸಂತೋಷ್ ಕುಮಾರ್ ಅವರು ಉಪ್ಪಿನಂಗಡಿ ಸಂತೋಷ್ ಕುಮಾರ್ ಮತ್ತು ಅಭಿನಿತ ಎಂ.ಜೆ ದಂಪತಿ ಪುತ್ರಿ. ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ 6ನೇ ತರಗತಿಯ ವಿಷ್ಮಾ ಅವರು ಅಜ್ಜಿಕಲ್ಲು ಏಕತಡ್ಕ ಚಂದ್ರನಾಯ್ಕ್ ಮತ್ತು ಶಾರದಾ ದಂಪತಿ ಪುತ್ರಿ. ಅದೇ ರೀತಿ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳದೆ 18ಗಂಟೆ ಕಾಲ ಸ್ಯಾಂಡ್ ಆರ್ಟ್ ಮಾಡಿದ ಇಂದ್ರಪ್ರಸ್ಥ ಶಾಲೆಯ 3ನೇ ತರಗತಿಯ ಹಿಮಾಂಶುಕೃಷ್ಣ ಅವರು ಉಪ್ಪಿನಂಗಡಿ ಗುರುಮೂರ್ತಿ ಅಮ್ಮಣ್ಣಾಯ ಮತ್ತು ಅನುಷಾ ಅಮ್ಮಣ್ಣಾಯ ಅವರ ಪುತ್ರ. ಮಾಣಿ ಬಾಲವಿಕಾಸ ಶಾಲೆಯ 3ನೇ ತರಗತಿಯ ಸೋಹನ್ ಕೆ.ಎಸ್ ಅವರು ನೇರಳಕಟ್ಟೆ ಕಮಲಾಕ್ಷ ಮತ್ತು ಶ್ವೇತಾ ಬಿ. ದಂಪತಿ ಪುತ್ರ.
ಸಾಧನೆ ನಮ್ಮ ಸಂಸ್ಥೆಗೆ ಹೆಮ್ಮೆ ತಂದಿದೆ
ವಿದ್ಯಾರ್ಥಿಗಳ ನಿರಂತರ ಶ್ರಮ ಮತ್ತು ಪ್ರಯತ್ನದ ಫಲವಾಗಿ ವಿದ್ಯಾರ್ಥಿಗಳು ಗೋಲ್ಡನ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿದ್ದಾರೆ. ಈ ದಾಖಲೆಯ ಹಿಂದೆ ಮಕ್ಕಳ ಪೋಷಕರ ಪಾತ್ರವೂ ಇದೆ. 30 ಗಂಟೆಗಳ ಸ್ಯಾಂಡ್ ಆರ್ಟ್ ಜೊತೆಗೆ 30 ಗಂಟೆಗಳ ಕಾಲ ನಿರಂತರವಾಗಿ ಹಾಡಿದ ಹಿನ್ನೆಲೆ ಗಾಯಕರ ಶ್ರಮವೂ ಮೆಚ್ಚುವಂತಹದ್ದು. ಒಮ್ಮೆ ಆರಂಭಗೊಂಡ ಪ್ರದರ್ಶನದಲ್ಲಿ ನಡುವೆ 15 ನಿಮಿಷ ಮಾತ್ರ ವಿಶ್ರಾಂತಿ ನೀಡಲಾಗಿತ್ತು. ಮತ್ತೆ ಎಲ್ಲೂ ವಿಶ್ರಾಂತಿ ನೀಡಿಲ್ಲ. ಸ್ಯಾಂಡ್ ಆರ್ಟ್ ಮಾಡುವ ಸಂದರ್ಭ ಆಹಾರವನ್ನು ಮಕ್ಕಳ ಬಾಯಿಗೆ ನೀಡಲಾಗುತ್ತಿತ್ತು. ಈ ಸಾಧನೆ ನಮ್ಮ ಸಂಸ್ಥೆಗೆ ಹೆಮ್ಮೆ ತಂದಿದೆ.
ಪ್ರವೀಣ್ ವರ್ಣಕುಟೀರ, ಸಂಚಾಲಕರು, ವರ್ಣಕಟೀರ ಕಲಾ ಶಿಕ್ಷಣ ಸಂಸ್ಥೆ










