







ನೆಲ್ಯಾಡಿ: SIR ಪ್ರಕ್ರಿಯೆಯ ಸಂದರ್ಭದಲ್ಲಿ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉದ್ಯೋಗ ನಿಮಿತ್ತ ವಿದೇಶ ಹಾಗೂ ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿರುವ ಸ್ಥಳೀಯ ನಿವಾಸಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಸಲ್ಲಿಸಲಾಗಿರುವ ದೂರುಗಳ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿ, SDPI ನೆಲ್ಯಾಡಿ–ಕೌಕ್ರಾಡಿ ಗ್ರಾಮ ಸಮಿತಿಯ ವತಿಯಿಂದ ಕೌಕ್ರಾಡಿ ಗ್ರಾಮ ಪಂಚಾಯತ್‌ನ ಗ್ರಾಮ ಲೆಕ್ಕಿಗರಿಗೆ ಮನವಿ ಸಲ್ಲಿಸಲಾಯಿತು.


ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ತಾತ್ಕಾಲಿಕವಾಗಿ ಹೊರಗಡೆ ವಾಸಿಸುತ್ತಿರುವ ಸ್ಥಳೀಯರ ನಿಜವಾದ ನಿವಾಸ ಸ್ಥಿತಿ ಮತ್ತು ಮತದಾರರ ಅರ್ಹತೆಯನ್ನು ಸೂಕ್ತ ದಾಖಲೆಗಳೊಂದಿಗೆ ಪರಿಶೀಲಿಸದೆ, ಕೇವಲ ದೂರುಗಳ ಆಧಾರದ ಮೇಲೆ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.




ಅದೇ ರೀತಿ, ಯಾವುದೇ ವ್ಯಕ್ತಿಯ ವಿರುದ್ಧ ತಪ್ಪು ಮಾಹಿತಿ ಅಥವಾ ದುರುದ್ದೇಶಪೂರ್ವಕವಾಗಿ ದೂರು ಸಲ್ಲಿಸಿರುವುದು ಪರಿಶೀಲನೆಯಲ್ಲಿ ದೃಢಪಟ್ಟಲ್ಲಿ, ಅಂತಹ ದೂರುದಾರರ ವಿರುದ್ಧ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ದೂರುಗಳ ಹಿಂದೆ ಯಾವುದೇ ಪೂರ್ವಯೋಜಿತ ಉದ್ದೇಶ ಅಥವಾ ಷಡ್ಯಂತ್ರವಿದ್ದಲ್ಲಿ ಅದರ ಬಗ್ಗೆಯೂ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ FIR ದಾಖಲಿಸುವಂತೆ ಒತ್ತಾಯಿಸಲಾಗಿದೆ.
ಅರ್ಹ ಮತದಾರರ ಹಕ್ಕುಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ, ಕಾನೂನುಬದ್ಧ ಪ್ರಕ್ರಿಯೆ ಮತ್ತು ಸೂಕ್ತ ಪರಿಶೀಲನೆಯ ನಂತರವೇ ಮತದಾರರ ಪಟ್ಟಿಯಲ್ಲಿ ಹೆಸರುಗಳ ಕುರಿತು ಕ್ರಮ ಕೈಗೊಳ್ಳಬೇಕು ಎಂದು SDPI ಆಗ್ರಹಿಸಿದೆ.
ಈ ಸಂದರ್ಭದಲ್ಲಿ SDPI ಕಡಬ, ಉಪ್ಪಿನಂಗಡಿ ಬ್ಲಾಕ್ ಕಾರ್ಯದರ್ಶಿ ಸಿದ್ದೀಕ್ ಎಂ., ನೆಲ್ಯಾಡಿ, ಕೌಕ್ರಾಡಿ ಗ್ರಾಮ ಸಮಿತಿ ಉಪಾಧ್ಯಕ್ಷ ಮುಸ್ತಫಾ, ಗ್ರಾಮ ಸಮಿತಿ ಕಾರ್ಯದರ್ಶಿ ಸಿದ್ದೀಕ್ ಎಂ ಹಾಗೂ ಕೌಕ್ರಾಡಿ ಬ್ರಾಂಚ್ ಕಾರ್ಯದರ್ಶಿ ಇಸ್ಮಾಯಿಲ್ ಜಬ್ಬು ಉಪಸ್ಥಿತರಿದ್ದರು.










