ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೂರ್ನಡ್ಕದ ಮಹಿಳೆಗೆ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ಸೂಕ್ತ ವಿಚಾರಣೆ ನಡೆಸುತ್ತೇನೆ: ವೈದ್ಯಾಧಿಕಾರಿ

0

ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಕೂರ್ನಡ್ಕದ ಮಹಿಳೆಯೊಬ್ಬರಿಗೆ ನೀಡಿದ ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಮಾತ್ರೆಗಳು ಅವಧಿ ಮೀರಿದೆ ಎಂದು ಎಸ್ ಡಿ ಪಿ ಐ ಪಕ್ಷದ ಮುಖಂಡರು ಆರೋಪಿಸಿದ್ದಾರೆ. ಅವರು ಮಾತ್ರೆ ಅವಧಿ ಮೀರಿದ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಗಮನಕ್ಕೆ ಸಂಬಂಧಪಟ್ಟ ಮಹಿಳೆಯ ಸಂಬಂಧಿಕರು ತಂದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವ ಭರವಸೆಯನ್ನು ವೈದ್ಯಾಧಿಕಾರಿಗಳು ನೀಡಿದ್ದಾರೆ.


ಕೂರ್ನಡ್ಕದ ಮಹಿಳೆ ಸೆ.16ರಂದು ಮಧುಮೇಹಕ್ಕೆ ಸಂಬಂಧಿಸಿದ ಔಷಧಿಗಳನ್ನು ಪಡೆಯಲು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಹಿಳೆಯನ್ನು ಪರಿಶೀಲಿಸಿದ ಬಳಿಕ ಮಧುಮೇಹಕ್ಕೆ ಸಂಬಂಧಿಸಿದ ಗ್ಲೈಮಾಪೆರೈಡ್ ಮಾತ್ರೆಯ ಜೊತೆಗೆ ಇತರ ಮಾತ್ರೆಗಳನ್ನು ನೀಡಿದ್ದರು. ಆದರೆ ಮಧುಮೇಹಕ್ಕೆ ನೀಡಿದ ಗ್ಲೈಮಾಪೆರೈಡ್ ಮಾತ್ರೆಗಳೆಲ್ಲವೂ ಅವಧಿ ಮೀರಿದ ಮಾತ್ರೆಗಳಾಗಿದ್ದು, ಅಗಸ್ಟ್ ತಿಂಗಳಿನಲ್ಲೇ ಇವುಗಳ ಬಳಕೆಯ ಅವಧಿ ಮುಗಿದಿತ್ತು. ಈ ಬಗ್ಗೆ ಅರಿವಿಲ್ಲದೆ ಮಹಿಳೆ ಇದೇ ಮಾತ್ರೆಗಳನ್ನು ಹತ್ತು ದಿನಗಳ ಕಾಲ ನುಂಗಿದ್ದರು. ಆದರೆ ಎರಡು ದಿನಗಳ ಹಿಂದೆ ಮಹಿಳೆಯ ಆರೋಗ್ಯದಲ್ಲಿ ಕೊಂಚ ಏರುಪೇರಾಗಿರೋದನ್ನು ಗಮನಿಸಿದ ಮನೆಮಂದಿ ಆಕೆಯ ಮಾತ್ರೆಗಳನ್ನು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಅವಧಿ ಮೀರಿದ ಮಾತ್ರೆಗಳ ಮಾಹಿತಿ ದೊರೆತಿದೆ. ಈ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವಧಿ ಮೀರಿದ ಮಾತ್ರೆಗಳನ್ನು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಿದ ವಿಚಾರವನ್ನು ಗಂಭೀರವಾಗಿ ಪರಿಗಣಿಸಲು ಮನವಿ ಮಾಡಿದ್ದಾರೆ. ಮಾತ್ರೆಗಳ ವಿತರಣೆಯಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ಎಸ್ ಡಿ ಪಿ ಐ ಪಕ್ಷದ ಮುಖಂಡ ತಾಜುದ್ದೀನ್ ಅವರು ತಿಳಿಸಿದ್ದಾರೆ.

ಸೂಕ್ತ ವಿಚಾರಣೆ ನಡೆಸುತ್ತೇನೆ: ವೈದ್ಯಾಧಿಕಾರಿ
ಅವಧಿ ಮಾತ್ರೆಗೆ ಸಂಬಂಧಿಸಿದಂತೆ ದೂರು ಬಂದಿರುವ ಹಿನ್ನಲೆಯಲ್ಲಿ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಸಾಮಾನ್ಯವಾಗಿ ಮಾತ್ರೆಗಳ ಅವಧಿ ಮುಗಿದಿರುವ ಒಂದು ತಿಂಗಳ ಮೊದಲೇ ಮಾತ್ರೆಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಅಲ್ಲದೆ ಅವಧಿ ಮೀರುವ ಸಮಯವನ್ನು ರೋಗಿಗಳಿಗೆ ತಿಳಿಸಿ, ಅವಧಿ ಮುಗಿಯುವ ಒಳಗೆ ಮಾತ್ರೆಗಳನ್ನು ಉಪಯೋಗಿಸುವಂತೆ ಸೂಚನೆಯನ್ನೂ ನೀಡಲಾಗುತ್ತದೆ. ಆದರೆ ಈ ರೀತಿ ಸಂಭವಿಸಲು ಕಾರಣಗಳೇನು ಎನ್ನುವುದರ ಬಗ್ಗೆ ಸೂಕ್ತ ವಿಚಾರಣೆ ನಡೆಸಿದ ಬಳಿಕ ವರದಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನೀಡಲಾಗುವುದು ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here