







ನೆಲ್ಯಾಡಿ: 94ಸಿ ಅಡಿಯಲ್ಲಿ ಜಮೀನು ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ 3.25 ಲಕ್ಷ ರೂ.ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಶಿರಾಡಿಯ ಮಹಿಳೆಯೊಬ್ಬರು ನೀಡಿದ ದೂರಿನಂತೆ ಸಿರಿಬಾಗಿಲು ನಿವಾಸಿ ಪದ್ಮನಾಭ ಗೌಡ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸರಿತ (52ವ.) ಅವರು ನೀಡಿದ ದೂರಿನ ಆಧಾರದ ಮೇಲೆ ಸಿರಿಬಾಗಿಲು ಗ್ರಾಮದ ದೇರಣೆ ಬೇರಿಕೆ ನಿವಾಸಿ ಪದ್ಮನಾಭ ಗೌಡ ಎಂಬವರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಂಡ್ಯದಲ್ಲಿರುವ ಸರ್ವೆ ನಂ.87/1ರಲ್ಲಿ ಸರಿತ ಅವರು ವಾಸವಿರುವ ಮನೆಯ ಜಮೀನನ್ನು 94ಸಿ ಅಡಿಯಲ್ಲಿ ಮಂಜೂರು ಮಾಡಿಸಿಕೊಡುವುದಾಗಿ ಪದ್ಮನಾಭ ಗೌಡ ಅವರು ಭರವಸೆ ನೀಡಿ, 2024ರ ಅ.12ರಂದು 1 ಲಕ್ಷ ರೂ., ಅ.16ರಂದು ಸರಿತ ಅವರ ಪತಿ ನಿತ್ಯಾನಂದ ಕೆ.ಎಸ್. ಅವರ ಶಿರಾಡಿ ಎಸ್ಬಿಐ ಖಾತೆಯಿಂದ ಚೆಕ್ ಮೂಲಕ 30 ಸಾವಿರ ರೂ., ಅ.25ರಂದು ಚೆಕ್ ಮೂಲಕ 95 ಸಾವಿರ ರೂ., ನ.14ರಂದು 10 ಸಾವಿರ ರೂ. ಹಾಗೂ 2025ರ ಮೇ 30ರಂದು 90 ಸಾವಿರ ರೂ. ಸೇರಿ ಹೀಗೆ ಒಟ್ಟು 3.25 ಲಕ್ಷ ರೂ. ಪಡೆದು ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಮಾಡಿಕೊಡದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.



ಬೆದರಿಕೆ ಆರೋಪ;
ಸೆ.22ರಂದು ಬೆಳಗ್ಗೆ 10.30ಕ್ಕೆ ಪದ್ಮನಾಭ ಗೌಡ ಅವರು ಸರಿತ ಅವರ ಮನೆಗೆ ಬಂದಿದ್ದು, ಈ ವೇಳೆ ಸರಿತ ಅವರು 94ಸಿ ಅಡಿಯಲ್ಲಿ ಮಂಜೂರುಗೊಳಿಸಿದ ಜಮೀನಿನ ದಾಖಲೆ ಪತ್ರ ಅಥವಾ ನಾನು ನೀಡಿರುವ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಆಗ ಪದ್ಮನಾಭ ಗೌಡ ಅವರು, ನಾನು ಕೆಡಿಪಿ ಸದಸ್ಯನಾಗಿದ್ದು, ನನ್ನಿಂದ ಹಣ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಲ್ಲದೆ, ಈ ಕುರಿತು ಯಾರಿಗಾದರೂ ದೂರು ನೀಡಿದರೆ ಮನೆಯನ್ನು ತೆರವುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸರಿತಾ ಅವರು ನೀಡಿದ ದೂರಿನಂತೆ ಪದ್ಮನಾಭ ಗೌಡರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










