ಶಿವಳ್ಳಿ ಯುವ ಸಂಪದ ಪುತ್ತೂರು ವತಿಯಿಂದ ಕಲಾ ಮೇಳ ’ವಸುಧೈವ ಕುಟುಂಬಕಂ’

0

ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಚತುರ್ಥಿಯ ಪ್ರಯುಕ್ತ ಶಿವಳ್ಳಿ ಸಂಪದ ಪುತ್ತೂರು ಇದರ ಶಿವಳ್ಳಿ ಯುವ ಸಂಪದ ಪುತ್ತೂರು ಘಟಕದ ವತಿಯಿಂದ ಸೆ.13ರಂದು ಕೆಮ್ಮಿಂಜೆ ಷಣ್ಮುಖ ಮಹಾವಿಷ್ಣು ಸಭಾಭವನದಲ್ಲಿ ’ವಸುಧೈವ ಕುಟುಂಬಕಂ’ ಎಂಬ ವಿನೂತನ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ 300ಕ್ಕೂ ಅಧಿಕ ಸಮಾಜಬಾಂಧವರು ಭಾಗವಹಿಸಿದ್ದರು.


ಜೀ ಕನ್ನಡ ಸರಿಗಮಪ ಲಿಟಲ್ ಚಾಂಪ್ ಸೆಮಿಫೈನಲಿಸ್ಟ್ ಸನ್ಮಯ್ ಅವರು ಕಾರ್ಯಕ್ರಮ ಉದ್ಘಾಟಿಸಿ ತಮ್ಮ ಮಧುರ ಕಂಠದಿಂದ ಭಕ್ತಿಗೀತೆ ಹಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಶಿವಳ್ಳಿ ಸಂಪದ ಪುತ್ತೂರು ಇದರ ಅಧ್ಯಕ್ಷ ಸತೀಶ ಮುಡಂಬಡಿತ್ತಾಯ, ಕಾರ್ಯದರ್ಶಿ ಬಾಲಚಂದ್ರ ಮುಚಿಂತ್ತಾಯ, ಕೋಶಾಧಿಕಾರಿ ಕೃಷ್ಣರಾಜ ಎರ್ಕಡಿತ್ತಾಯ, ನಿಕಟಪೂರ್ವ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ, ಖ್ಯಾತ ವೈದ್ಯ ಡಾ. ಅನಿಲ್ ಬೈಪಡಿತ್ತಾಯ, ಶಿವಳ್ಳಿ ಯುವ ಸಂಪದ ಅಧ್ಯಕ್ಷ ಡಾ. ಸುಜಯ್ ತಂತ್ರಿ ಕೆಮ್ಮಿಂಜೆ, ಕಾರ್ಯದರ್ಶಿ ಡಾ. ವಿಜಯ್ ವೈಲಾಯ, ಮಹಿಳಾ ಸಂಪದ ಅಧ್ಯಕ್ಷೆ ಪ್ರೇಮಲತಾ ಉಂಗ್ರುಪುಳಿತ್ತಾಯ, ಮಹಿಳಾ ಸಂಪದ ಗೌರವಾಧ್ಯಕ್ಷೆ ಪ್ರೊ. ವತ್ಸಲಾ ರಾಜ್ಞೆ, ಯುವ ಸಂಪದ ಗೌರವಾಧ್ಯಕ್ಷ ಸತೀಶ ಕೆದಿಲಾಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಹಾಗೂ ಶ್ರೀ ಗಣಪತಿ ದೇವರ ವೈಭವದ ಮೆರವಣಿಗೆ ಚೆಂಡೆ, ಭಜನೆ ಹಾಗೂ ವೇದಘೋಷಗಳೊಂದಿಗೆ ನಡೆಯಿತು.

ವಿವಿಧ ಸ್ಪರ್ಧೆ:
ಮಕ್ಕಳಿಂದ ಹಿರಿಯರವರೆಗೆ ಎಲ್ಲರನ್ನೂ ಒಳಗೊಂಡಂತೆ ಭಕ್ತಿಗೀತೆ, ಶ್ಲೋಕ ಕಂಠಪಾಠ, ಭಗವದ್ಗೀತೆ ಪಠಣ, ಸಂಗೀತ ಕುರ್ಚಿ, ಮಡಕೆ ಒಡೆಯುವುದು, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹಗ್ಗಜಗ್ಗಾಟದ ಪುರುಷರ ವಿಭಾಗದಲ್ಲಿ ಕಾವು ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ದರ್ಬೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ವಿವಿಧ ವಲಯಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ನರಿಮೊಗರು ವಲಯವು ಸಮಗ್ರ ಚಾಂಪಿಯನ್‌ಶಿಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಸಮಾರೋಪ:
ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಶಿವಳ್ಳಿ ಸಂಪದದ ಪದಾಧಿಕಾರಿಗಳಾದ ಸತೀಶ ಮುಡಂಬಡಿತ್ತಾಯ, ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ, ರವೀಂದ್ರ ಟಿ., ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ, ಹರೀಶ್ ಕುಂಜತ್ತಾಯ ಕಾವು, ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಡಾ. ಸುಜಯ್ ತಂತ್ರಿ ಕೆಮ್ಮಿಂಜೆ ಮುಂತಾದವರು ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.

ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು, ಕ್ರೀಡಾ ಮನೋಭಾವವನ್ನು ಉತ್ತೇಜಿಸುವುದು ಹಾಗೂ ಸಮಾಜಬಾಂಧವರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಕುಟುಂಬದ ಹಿರಿಯರು ಹಾಗೂ ಕಿರಿಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಉತ್ಸಾಹದಿಂದ ಭಾಗವಹಿಸುವ ಮೂಲಕ ’ವಸುಧೈವ ಕುಟುಂಬಕಂ’ ಎಂಬ ಪರಿಕಲ್ಪನೆಗೆ ನೈಜ ಅರ್ಥವನ್ನು ನೀಡಿದರು.

LEAVE A REPLY

Please enter your comment!
Please enter your name here