







ಪುತ್ತೂರು :ಕಾಣಿಯೂರು ಸವಣೂರು ರೈತ ಉತ್ಪಾದಕರ ಕಂಪೆನಿ ಲಿಮಿಟೆಡ್ ಇದರ ವಾರ್ಷಿಕ ಮಹಾಸಭೆಯು ಸೆ.30 ರಂದು ಸವಣೂರು ಯುವ ಸಭಾಭವನದಲ್ಲಿ ಜರಗಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಗಿರಿಶಂಕರ ಸುಲಾಯ ಮಾತನಾಡಿ ರೈತ ಉತ್ಪಾದಕ ಕಂಪೆನಿಯ ಲಿಮಿಟೆಡ್‌ನಲ್ಲಿ ಸುಮಾರು ರೂ 1ಕೋಟಿ 87 ಲಕ್ಷ ವ್ಯವಹಾರ ನಡೆಸಲಾಗಿದ್ದು, ಸುಮಾರು ರೂ 4 ಲಕ್ಷ 55 ಸಾವಿರ ರೂಪಾಯಿ ಲಾಭಾಂಶವಾಗಿರುತ್ತದೆ. ಪ್ರಸ್ತುತ ಲಾಭಾಂಶದಲ್ಲಿ ರೂ 2,41,500/- ಹಣವನ್ನು ರೈತರ ಕೃಷಿ ಅಭಿವೃದ್ಧಿಗಾಗಿ ರೂ 1,50,000/- ಹಣವನ್ನು ರೈತರ ವೆಬ್‌ಸೈಟ್ ಅಭಿವೃದ್ಧಿಗೆ ಉಪಯೋಗಿಸುವುದು. ರೂ 50,000/- ವನ್ನು ನರ್ಸರಿ ಸ್ಥಾಪನೆ. ಮುಂದಿನ ದಿನಗಳಲ್ಲಿ ರೈತ ಸಮುದಾಯದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಳಂದೂರು ಭಾಗದಲ್ಲಿ ರಸಗೊಬ್ಬರ ಹಾಗೂ ರೈತ ಉತ್ಪನ್ನಗಳ ಸಂಗ್ರಹದ ನಿಟ್ಟಿನಲ್ಲಿ ಹೊಸದಾಗಿ ಗೋದಾಮು ನಿರ್ಮಾಣ ಮಾಡಲಾಗುವುದು ಎಂದರು. ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪೆನಿ ರಾಜ್ಯದಲ್ಲಿ 12ನೇ ಸ್ಥಾನ ಪಡೆದಿರುವುದಕ್ಕೆ ಎಲ್ಲಾ ರೈತ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದರು.


ತೋಟಗಾರಿಕೆ ಇಲಾಖೆಯ ಅಧಿಕಾರಿ ಶಿವಪ್ರಕಾಶ್ ರವರು ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಕಡಬ ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ, ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಕಾಣಿಯೂರು ಇದರ ಅಧ್ಯಕ್ಷ ಗಣೇಶ್ ಉದನಡ್ಕ ಸಂದರ್ಭೋಚಿತವಾಗಿ ಮಾತನಾಡಿದರು. ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪೆನಿಯ ಉಪಾಧ್ಯಕ್ಷ ಸುರೇಶ್ ಓಡಬಾಯಿ, ನಿರ್ದೇಶಕರುಗಳಾದ ಸುಬ್ರಾಯ ಗೌಡ ಪಾಲ್ತಾಡಿ, ಗಂಗಾಧರ ಪೆರಿಯಡ್ಕ, ಸದಾನಂದ ಸೌತೆಮಾರು, ಯಶವಂತ ಕಳುವಾಜೆ, ಧನಂಜಯ ಕೇನಾಜೆ, ಶಿವರಾಮ ಗೌಡ ದೋಲ್ಪಾಡಿ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಇದೇ ಸಂದರ್ಭದಲ್ಲಿ ಸುಮಾರು 50 ಸಾವಿರಕ್ಕಿಂತಲ್ಲೂ ಅಧಿಕ ವ್ಯವಹಾರ ನಡೆಸಿದ ಸುಮಾರು 23 ಕ್ಕಿಂತಲ್ಲೂ ಅಧಿಕ ರೈತ ಸದಸ್ಯರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಎರೆಹುಳ ಗೊಬ್ಬರದಲ್ಲಿ ಉತ್ತಮ ಸಾಧನೆ ಮಾಡಿರುವ ಆಶಾ ರೈ ಕಲಾಯಿ ಹಾಗೂ ಇತರ ಸಾಧಕರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಭಾಗವಹಿಸಿದ ಸದಸ್ಯ ರೈತರಿಗೆ ಕಾಫಿಯ ಸಸಿಯನ್ನು ನೀಡಲಾಯಿತು. ರೈತ ಸದಸ್ಯರಾದ ವಿಠಲ ಗೌಡ ಬರೆಪ್ಪಾಡಿ, ನಾಗವೇಣಿ ಕಾಣಿಯೂರು ಸಲಹೆ ಸೂಚನೆಯನ್ನು ನೀಡಿದರು. ಸಂಸ್ಥೆಯ ಸಿಬ್ಬಂದಿ ವರ್ಷ ಪ್ರಾರ್ಥಿಸಿದರು. ನ್ಯಾಯವಾದಿ ಮಹೇಶ್ ಕೆ ಸವಣೂರು ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಸುಬ್ರಾಯ ಗೌಡ ಪಾಲ್ತಾಡಿ ವಂದಿಸಿದರು.










