ಈಶ್ವರಮಂಗಲ: ಜಾಗದ ತಕರಾರು, ತಡೆಗೋಡೆ ನಿರ್ಮಾಣಕ್ಕೆ ಅಡ್ಡಿ ಆರೋಪ : ಮೂವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ

0

ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲ ಪುಳಿತ್ತಡಿ ಎಂಬಲ್ಲಿ ಜಾಗದ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತಡೆಯಾಜ್ಞೆ ಹಾಗೂ ಅಕ್ರಮ ಪ್ರವೇಶ ಎಸಗಿದ ಆರೋಪದ ಮೇಲೆ ಮೂವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒಂದನೇ ಹೆಚ್ಚುವರಿ ಹಿರಿಯ ನ್ಯಾಯಾಲಯ ಆದೇಶಿಸಿದೆ.


ನೆಟ್ಟಣಿಗೆಮುಡ್ನೂರು ಗ್ರಾಮದ ಪೂರ್ಣತೇಜ, ಪೂರ್ಣಪ್ರಜ್ಞ ಹಾಗೂ ಪೂರ್ಣಾತ್ಮರಾಮ ಎಂಬವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 319ರ ಅಡಿಯಲ್ಲಿ ಪ್ರಕರಣ ದಾಖಲಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ.


ಪ್ರಕರಣದ ಹಿನ್ನೆಲೆ:
ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲ ಪುಳಿತ್ತಡಿ ಎಂಬಲ್ಲಿ ಗುರುರಾಜ್ ಎನ್. ಜಿ. ಎಂಬವರು 0.25.50 ಎಕರೆ ಜಾಗವನ್ನು ಖರೀದಿ ಮಾಡಿದ್ದರು. ಈ ಜಾಗದಲ್ಲಿ ಅವರು ತಡೆಗೋಡೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಆರೋಪಿಗಳಾದ ಪೂರ್ಣತೇಜ, ಪೂರ್ಣಪ್ರಜ್ಞ ಹಾಗೂ ಪೂರ್ಣಾತ್ಮರಾಮ ಅಡ್ಡಿಪಡಿಸಿದ್ದರು ಎಂದು ಆರೋಪಿಸಿ ಗುರುರಾಜ್ ಎನ್. ಜಿ. ಅವರು ಪುತ್ತೂರಿನ ಪ್ರಿನ್ಸಿಪಾಲ್ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು (ಒ.ಎಸ್ ಸಂಖ್ಯೆ: 30/2025). ವಿಚಾರಣೆ ನಡೆಸಿದ ನ್ಯಾಯಾಲಯವು ದಿನಾಂಕ 29/01/2025 ರಂದು ತಾತ್ಕಾಲಿಕ ತಡೆಯಾಜ್ಞೆ ನೀಡಿ, ಗುರುರಾಜ್ ಅವರ ಜಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಆರೋಪಿಗಳು ಹಾಗೂ ಅವರ ಕಡೆಯವರು ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಆದೇಶಿಸಿತ್ತು.


ಕೋರ್ಟ್ ಆದೇಶ ಉಲ್ಲಂಘನೆ ಮತ್ತು ಅಕ್ರಮ ಪ್ರವೇಶ:
ನ್ಯಾಯಾಲಯದ ಆದೇಶವಿದ್ದಾಗ್ಯೂ, ದಿನಾಂಕ 09/03/2025 ರಂದು ಆರೋಪಿಗಳು ಗುರುರಾಜ್ ಅವರ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಲ್ಲದೆ, ದಿನಾಂಕ 28/04/2025 ರಂದು ಮತ್ತೊಮ್ಮೆ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕೃತ್ಯವನ್ನು ಪುನರಾವರ್ತಿಸಿದ್ದರು ಎಂದು ಆರೋಪಿಸಿ ಈ ಬಗ್ಗೆ ಗುರುರಾಜ್ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಪೋಲಿಸರು ಈ ಕುರಿತು ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ಗುರುರಾಜ್ ಎನ್. ಜಿ. ಅವರು ಪುತ್ತೂರಿನ ಒಂದನೇ ಹೆಚ್ಚುವರಿ ಹಿರಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶ ನೀಡಿದೆ.

LEAVE A REPLY

Please enter your comment!
Please enter your name here