







- ಪ್ರಾಸಿಕ್ಯೂಶನ್ ಪರ ಪಿಪಿ ಮೋಹನ್ ಕುಮಾರ್ ವಾದ
ಪುತ್ತೂರು: 2015ರಲ್ಲಿ ಮಂಗಳೂರು ಸಬ್ ಜೈಲಿನಲ್ಲಿ ನಡೆದಿದ್ದ ಮಾಡೂರು ಯೂಸುಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.


ಸುರತ್ಕಲ್ ಸೂರಿಂಜೆಯ ಲಿತೇಶ್ ಪೂಜಾರಿ, ಸುರತ್ಕಲ್ ಮಧ್ಯ ನಿವಾಸಿ ಶೋಭರಾಜ್, ಕಾಟಿಪಳ್ಳ ಶಿಬರೂರಿನ ಯುವರಾಜ್, ಉಳಾಯಿಬೆಟ್ಟಿನ ಪ್ರದೀಪ್, ಸುಳ್ಯ ಬಾಳುಗೋಡಿನ ಉಮೇಶ್ ಕೊಂಬಾರ್ ಶಿಕ್ಷೆಗೀಡಾದವರು. ಪ್ರಕರಣದ ಉಳಿದ ಆರೋಪಿಗಳಾದ ಶರಣ್ ಪೂಜಾರಿ, ಮಹೇಶ್ ಕುಮಾರ್, ಕಮಲಾಕ್ಷ ಪೂಜಾರಿ ಹಾಗೂ ಲತೀಶ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇನ್ನೋರ್ವ ಆರೋಪಿ ಸತೀಶ್ ಪೂಜಾರಿ,ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಅವಧಿಯಲ್ಲಿ ಮೃತಪಟ್ಟಿದ್ದರು.



2015ರ ನ.2ರಂದು ಮಂಗಳೂರು ಸಬ್ ಜೈಲಿನಲ್ಲಿ ಕೋಮು ಗಲಾಟೆ ನಡೆದು ಮಾಡೂರು ಯೂಸುಫ್ ಭೀಕರ ಹತ್ಯೆ ನಡೆದಿತ್ತು.ಘಟನೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಯಾಗಿದ್ದ ಎಸಿಪಿ ತಿಲಕ್‌ಚಂದ್ರ ಅವರು ಘಟನೆಗೆ ಸಂಬಂಧಿಸಿ 10 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದ ಐದು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ರೂ.76,000 ದಂಡ ವಿಧಿಸಿ ಆದೇಶ ಹೊರಡಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ.ಉಪ್ಪಿನಂಗಡಿ ಇವರು ವಾದ ಮಂಡಿಸಿದ್ದರು.











