







ಕಡಬ: ಕೇಪು ಶ್ರೀ ಲಕ್ಷ್ಮೀ ಜನಾರ್ದನ ಯುವಕ ಮಂಡಲ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಅ.2ರಂದು ಶುಕ್ರವಾರ ಕೇಪು ಶ್ರೀ ಲಕ್ಷ್ಮೀ ಜನಾರ್ದನ ಸಭಾಭವನದಲ್ಲಿ ನಡೆಯಿತು.


ಕಳೆದ ಹತ್ತು ವರ್ಷಗಳಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯುವಕ ಮಂಡಲವು ದಶಮಾನೋತ್ಸವದ ಅಂಗವಾಗಿ ಬಡ ಕುಟುಂಬವೊಂದಕ್ಕೆ ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಮೂಲಕ ಸಮಾಜಮುಖಿ ಕಾರ್ಯ ನಡೆಸಿದೆ. ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಪುನೀತ್ ದೇಂತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಡಬದ ದುರ್ಗಾಂಬಾ ಮೊಬೈಲ್ಸ್ ಮಾಲಕ ಹಾಗೂ ಯುವ ಉದ್ಯಮಿ ದಯಾನಂದ ಗೌಡ ಆರಿಗ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.



ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ದೀಕ್ಷಿತ್ ಹಳ್ಳಿಮನೆ, ಕಾರ್ಯದರ್ಶಿಯಾಗಿ ಶ್ರೇಯತ್ ನಂದುಗುರಿ, ಕೋಶಾಧಿಕಾರಿಯಾಗಿ ಪ್ರವೀಣ್ ದೋಲ, ಉಪಾಧ್ಯಕ್ಷರಾಗಿ ತೀರ್ಥೇಶ್ ಮೀನಾಡಿ, ಕ್ರೀಡಾ ಸಮಿತಿ ಸಂಚಾಲಕರಾಗಿ ಹರ್ಷಿತ್ ಹಳ್ಳಿಮನೆ ಹಾಗೂ ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ರೋಹಿತ್ ಹಳ್ಳಿ ಆಯ್ಕೆಯಾದರು.
ವೇದಿಕೆಯಲ್ಲಿ ಶಿವಪ್ರಸಾದ್ ಮೈಲೇರಿ, ಶರತ್ ನಂದುಗುರಿ, ವಿಜೇತ್ ಬಜೆತಡ್ಕ, ಸಂದೇಶ್ ದರ್ಖಾಸ್ ಹಾಗೂ ಚೇತನ್ ಧೋಳ ಉಪಸ್ಥಿತರಿದ್ದರು. ಕಾರ್ತಿಕ್ ಅಜ್ಜರಮೂಲೆ ಸ್ವಾಗತಿಸಿದರು. ಸುದೀಪ್ ಹಳ್ಳಿಮನೆ ಧನ್ಯವಾದ ಸಲ್ಲಿಸಿದರು. ಪ್ರವೀಣ್ ಧೋಲ ಹಾಗೂ ರಕ್ಷಿತ್ ಧೋಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹೇಶ್ ಕುಂಟೋಡಿ, ಅಜಿತ್ ಆರ್ತಿಲ, ಗಣೇಶ್ ಹಳ್ಳಿಮನೆ ಸೇರಿದಂತೆ ಗ್ರಾಮಸ್ಥರು ಹಾಗೂ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.










