







ರಾಮಕುಂಜ: ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಯ ಪ್ರತಿಷ್ಠಿತ ’ಎಮಿನೆಂಟ್ ಇಂಜಿನಿಯರ್’ ಪ್ರಶಸ್ತಿಗೆ ಭಾಜನರಾದ ಶಿವಳ್ಳಿ ಸಂಪದದ ಹೆಮ್ಮೆಯ ಪ್ರತಿಭೆ ಶಿವಪ್ರಸಾದ್ ಇಜ್ಜಾವು ಅವರಿಗೆ ಶಿವಳ್ಳಿ ಸಂಪದ ಪುತ್ತೂರು ವತಿಯಿಂದ ಅಭಿನಂದನಾ ಸಮಾರಂಭ ಅವರ ಮನೆಯಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿದ್ದ ಶಿವಳ್ಳಿ ಸಂಪದ ಪುತ್ತೂರು ಇದರ ಅಧ್ಯಕ್ಷ ಸತೀಶ್ ಮುಡಂಬಡಿತ್ತಾಯ ಅವರು ಶಿವಪ್ರಸಾದ್ ಅವರನ್ನು ಅಭಿನಂದಿಸಿ ಮಾತನಾಡಿ, ನಿಮ್ಮ ಸಾಧನೆ ನಮ್ಮೆಲ್ಲರಿಗೂ ಸ್ಪೂರ್ತಿ. ಇನ್ನಷ್ಟು ಪ್ರಶಸ್ತಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿ ಎಂದು ಹರಸಿದರು. ಯುವ ಸಂಪದದ ಅಧ್ಯಕ್ಷ ಸುಜಯ್ ತಂತ್ರಿ ಅವರು ಮಾತನಾಡಿ, ಶಿವಪ್ರಸಾದರು ಸಂಪದದ ಯುವಕರಿಗೆ ಒಂದು ಮಾದರಿ ಯುವ ಪ್ರತಿಭೆ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.



ರಾಮಕುಂಜ ವಲಯದ ಅಧ್ಯಕ್ಷ ಸತ್ಯಪ್ರಕಾಶ್ ಉಡುಪ ಅವರು ಮಾತನಾಡಿ, ಶಿವಪ್ರಸಾದ್ ಅವರು ಎಸ್.ಆರ್. ಬಿಲ್ಡರ್ಸ್ ಮಾಲಕರು ಹಾಗೂ ಪ್ರಶಸ್ತಿ ವಿಜೇತ ಹನಿ ನೀರಾವರಿ ಮಾದರಿ ಕೃಷಿಕರು. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಶಿವಳ್ಳಿ ಸಂಪದವು ಈ ಹಿಂದೆಯೇ ’ಶಿವಳ್ಳಿ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು. ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಎರ್ಕಡಿತ್ತಾಯ, ಜೊತೆ ಕಾರ್ಯದರ್ಶಿ ಸಂತೋಷ್ ಕುಮಾರ್ ಕೆ, ಶಿವಪ್ರಸಾದ್ ಅವರ ತಂದೆ ಇಜ್ಜಾವು ಮಾಧವ ಆಚಾರ್, ತಾಯಿ ಶಶಿಕಲಾ, ಪತ್ನಿ ಕವಿತಾ, ಮಕ್ಕಳಾದ ಅದ್ವಿತ್ ಮತ್ತು ಅನಯಾ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ರವೀಂದ್ರ ಟಿ ನಿರೂಪಿಸಿದರು. ಕಾರ್ಯದರ್ಶಿ ಬಾಲಚಂದ್ರ ಮುಚ್ಚಿಂತ್ತಾಯ ವಂದಿಸಿದರು.










