ಪುತ್ತೂರು ಬಂಟರ ಸಂಘದ ಸಾರಥ್ಯದಲ್ಲಿ ‘ಬಂಟೆರೆ ಸೇರಿಗೆ-2026 :16 ಮಂದಿ ಸಾಧಕರಿಗೆ ಸನ್ಮಾನ-ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0

ಪುತ್ತೂರು:ಪುತ್ತೂರು ಬಂಟರ ಸಂಘಕ್ಕೆ ಸಾಮೆತ್ತಡ್ಕದಲ್ಲಿ 5.50 ಎಕ್ರೆ ಜಾಗವನ್ನು ಸರಕಾರದಿಂದ ಮಂಜೂರು ಮಾಡಿಸಿದ್ದೇನೆ.ಈ ಜಾಗಕ್ಕೆ ಸರಕಾರಕ್ಕೆ ಕಟ್ಟಬೇಕಾದ 1 ಕೋಟಿ ರೂಪಾಯಿ ಹಣವನ್ನು ನಾನೇ ಪಾವತಿಸಿದ್ದೇನೆ.ಈ ಜಾಗದಲ್ಲಿ ಮಂಗಳೂರಿನಲ್ಲಿ ಇರುವಂತೆ ಅದ್ದೂರಿಯಾದ ಮದುವೆ ಹಾಲ್ ಎರಡು ವರ್ಷದೊಳಗೆ ಆಗಬೇಕು ಎಂಬುದು ನನ್ನ ಕನಸಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ತಾಲೂಕು ಬಂಟರ ಸಂಘದ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇದರ ಮಾರ್ಗದರ್ಶನದಲ್ಲಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದಲ್ಲಿ ಅ.3ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆದ ‘ಬಂಟೆರೆ ಸೇರಿಗೆ-2026’ಕಾರ‍್ಯಕ್ರಮವನ್ನು ಅವರು ದೀಪ ಬೆಳಗಿಸಿ, ಉದ್ಘಾಟನೆಗೈದು ಮಾತನಾಡಿದರು.ನಾನು ಶಾಸಕನಾದ ಪ್ರಾರಂಭದ ದಿನಗಳಲ್ಲಿ ಕಾವು ಹೇಮನಾಥ ಶೆಟ್ಟಿಯವರು ನನ್ನನ್ನು ಭೇಟಿಯಾಗಿ ಪುತ್ತೂರಿನಲ್ಲಿ ಬಂಟರ ಸಂಘಕ್ಕೆ ಸ್ವಂತ ಜಾಗವೊಂದನ್ನು ಮಾಡಿಕೊಡುವಂತೆ ವಿನಂತಿಸಿದಾಗ, ನೀವು ಒಂದು ಸರಕಾರಿ ಜಾಗವನ್ನು ಹುಡುಕಿಕೊಡಿ,ನಾನು ಮಂಜೂರು ಮಾಡಿಸುತ್ತೇನೆ ಎಂದು ಹೇಳಿದ್ದೆ.ಅವರು ಸಾಮೆತ್ತಡ್ಕದಲ್ಲಿ ಜಾಗವನ್ನು ನೋಡಿ,ನನ್ನಲ್ಲಿ ಹೇಳಿದರು.5.50 ಎಕ್ರೆ ಜಾಗವನ್ನು ನಾನು ಸರಕಾರದ ಮೂಲಕ, ಪುತ್ತೂರು ತಾಲೂಕು ಬಂಟರ ಸಂಘಕ್ಕೆ ಮಂಜೂರು ಮಾಡಿಸಿದ್ದೇನೆ.ಮುಂದೆ ಆ ಜಾಗದಲ್ಲಿ ಪ್ರಾರಂಭದಲ್ಲಿ ಮದುವೆ ಹಾಲ್ ಆಗಬೇಕು,ಅದಕ್ಕಾಗಿ ಸರಕಾರದಿಂದ ಎರಡು ಕೋಟಿ ರೂಪಾಯಿ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಿದ್ದೇನೆ.ಮಂಗಳೂರಿನಲ್ಲಿ ಇರುವಂಥದ್ದೇ ಭವ್ಯ,ಸುಂದರವಾದ ಮದುವೆ ಹಾಲ್ ಎರಡು ವರ್ಷದೊಳಗೆ ಆಗಬೇಕು ಎನ್ನುವ ಆಸೆ ನನಗಿದೆ ಎಂದ ಶಾಸಕರು,ಬಂಟ ಸಮಾಜದ ದಾನಿಗಳು ಮುಂದೆ ಬಂದು ಇಲ್ಲಿ ಆಗುವ ಕಟ್ಟಡಕ್ಕೆ ಪೂರ್ಣ ರೀತಿಯ ಸಹಕಾರವನ್ನು ನೀಡುವಂತೆ ವಿನಂತಿಸಿದರು.ಮುಂದೆ ನಡೆಯುವ ಚುನಾವಣೆಯಲ್ಲಿ ನಮ್ಮ ಬಂಟ ಸಮಾಜದ ಬಂಧುಗಳು ನನಗೆ ಪೂರ್ಣರೀತಿಯಲ್ಲಿ ಸಹಕಾರವನ್ನು ನೀಡಿ, ಆಶೀರ್ವಾದ ಮಾಡುವಂತೆ ಮನವಿ ಮಾಡಿದ ಅಶೋಕ್ ಕುಮಾರ್ ರೈ,ಪುತ್ತೂರಿನಲ್ಲಿ ಮುಂದಿನ ವರ್ಷ ಮೆಡಿಕಲ್ ಕಾಲೇಜ್ ಪ್ರಾರಂಭ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.ನಾನು ಮಾಡಿರುವ ಅಭಿವೃದ್ಧಿ ಕೆಲಸವನ್ನು ನೋಡಲಾಗದೇ ಕೆಲವು ಮಂದಿ ನಂಜಿ ಕಾರುತ್ತಾರೆ.ಯಾರು ಏನು ಬೇಕಾದರೂ ಮಾಡಲಿ, ನಾನು ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದು ಹೇಳಿದ ಅಶೋಕ್ ಕುಮಾರ್ ರೈ ಅವರು,ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಪದಾಧಿಕಾರಿಗಳು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.


ಶಾಸಕರಿಗೆ ವಿಶೇಷ ಸನ್ಮಾನ:
ಬಂಟರ ಸಂಘಕ್ಕೆ ಸರ್ಕಾರದಿಂದ ಜಾಗ ಮಂಜೂರು ಮಾಡಿಸಿಕೊಟ್ಟಿರುವುದಲ್ಲದೆ, ಅದಕ್ಕೆ ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ತಾನೇ ಪಾವತಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ತಾಲೂಕು ಬಂಟರ ಸಂಘದಿಂದ ವಿಶೇಷವಾಗಿ ಸನ್ಮಾನಿಸಲಾಯಿತು.ಅಶೋಕ್ ಕುಮಾರ್ ರೈ ಪತ್ನಿ ಸುಮಾ ಅಶೋಕ್ ರೈ ಉಪಸ್ಥಿತರಿದ್ದರು.


ಅಶೋಕ್ ಕುಮಾರ್ ರೈ ಧಿಮಂತ ನಾಯಕ-ಹೇಮನಾಥ ಶೆಟ್ಟಿ:
ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಪುತ್ತೂರಿನ ಇತಿಹಾಸದಲ್ಲಿ ತಾಲೂಕು ಬಂಟರ ಸಂಘಕ್ಕೆ ಸರಕಾರದಿಂದ 5.50 ಎಕ್ರೆ ಜಾಗವನ್ನು ಮಂಜೂರು ಮಾಡಿಸಿದ್ದಾರೆ.ಇದಕ್ಕೆ ಈಗಿನ ಮೌಲ್ಯ 35 ಕೋಟಿ ರೂಪಾಯಿ ಆಗುತ್ತದೆ.ಸರಕಾರಕ್ಕೆ ಕಟ್ಟಬೇಕಾದ ಒಂದು ಕೋಟಿ ರೂಪಾಯಿ ಹಣವನ್ನು ತಾವೇ ಭರಿಸುವ ಮೂಲಕ ಪುತ್ತೂರಿನ ಬಂಟ ಸಮಾಜದ ಪ್ರೀತಿ-ವಿಶ್ವಾಸವನ್ನು ಗಳಿಸಿರುವ ಅಶೋಕ್ ರೈ ಅವರು ಸಾಧನೆಯ ಸರದಾರ.ಹಠವಾದಿ,ಹಿಡಿದ ಕೆಲಸವನ್ನು ಸಾಧಿಸುವ ಧಿಮಂತ ನಾಯಕ. ತುಳು ಭಾಷೆಯನ್ನು ರಾಜ್ಯ ಸರಕಾರದ ಮೂಲಕ ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯಾಗಿ ಮಾಡಿಸುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ ಎಂದರು.ಬಂಟರ ಸಂಘದ ಮೂಲಕ ನಾವು ಪ್ರತಿ ವರ್ಷ ಹಲವು ವಿಭಾಗಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ,ಗೌರವಿಸುತ್ತಿದ್ದೇವೆ.ಬಹಳಷ್ಟು ಅದ್ದೂರಿಯಾಗಿ ನಾವು ಕಾರ‍್ಯಕ್ರಮವನ್ನು ಮಾಡುತ್ತಿದ್ದೇವೆ.ಈ ಬಾರಿ ಬಂಟರ ಭವದಲ್ಲಿ ಬಂಟ ಸಮಾಜ ಬಾಂಧವರ ಪೂರ್ಣ ಭಾಗವಹಿಸುವಿಕೆ ತುಂಬಾ ಖುಷಿ ನೀಡಿದೆ ಎಂದು ಅವರು ಹೇಳಿದರು.


300 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ-ಮಾಲಾಡಿ:
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಮಾತನಾಡಿ, ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಸಾಧನೆಗೆ ಬಂಟರ ಯಾನೆ ನಾಡವರ ಮಾತೃ ಸಂಘದ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.ಮಂಗಳೂರಿನಲ್ಲಿ ಮಾತೃ ಸಂಘದ ವತಿಯಿಂದ 300 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸುವ ಕಾರ‍್ಯ ಆರಂಭವಾಗಲಿದೆ ಎಂದವರು ತಿಳಿಸಿದರು.


ತುಂಬಾ ಉತ್ತಮವಾಗಿ ನಡೆಯುತ್ತಿದೆ-ಜಗನ್ನಾಥ ರೈ:
ಉದ್ಯಮಿ ಜಗನ್ನಾಥ ರೈ ಬೀಡುರವರು ಮಾತನಾಡಿ, ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ನಾಯಕತ್ವದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಕಾರ‍್ಯ ಚಟುವಟಿಕೆ ತುಂಬಾ ಉತ್ತಮವಾಗಿ ನಡೆಯುತ್ತಿದೆ ಎಂದರು.


16 ಮಂದಿ ಸಾಧಕರಿಗೆ ಸನ್ಮಾನ:
‘ಸಹಕಾರರತ್ನ’ ಸವಣೂರು ಸೀತಾರಾಮ ರೈ ಅವರಿಗೆ ಕಾವು ಹೇಮನಾಥ ಶೆಟ್ಟಿ ಪ್ರಾಯೋಜಕತ್ವದ ‘ಬನ್ನೂರುಗುತ್ತು ತಾರಾ ಅಂತಪ್ಪ ಶೆಟ್ಟಿ ಕಾವು ಬಂಟ ಶೀರೋಮಣಿ’ ಪ್ರಶಸ್ತಿ, ಚನಿಲ ತಿಮ್ಮಪ್ಪ ಶೆಟ್ಟಿ ಅವರಿಗೆ ಅಬುಧಾಬಿಯ ಜಯರಾಮ ರೈ ಮಿತ್ರಂಪಾಡಿ ಪ್ರಾಯೋಜಕತ್ವದ ‘ಸಮಾಜ ಸೇವಾ ಮಿತ್ರ’ ಪ್ರಶಸ್ತಿ, ಉದ್ಯಮಿ ಮಿತ್ರಂಪಾಡಿ ಪುರಂದರ ರೈ ಅವರಿಗೆ ಕಡಮಜಲು ಸುಭಾಸ್ ರೈ ಪ್ರಾಯೋಜಕತ್ವದ ‘ಸಿರಿಕಡಮಜಲು’ ಪ್ರಶಸ್ತಿ, ಡಾ.ಸಂದೀಪ್ ರೈ ಅವರಿಗೆ ಡಾ.ಬೂಡಿಯಾರ್ ಸಂಜೀವ ರೈ ಪ್ರಾಯೋಜಕತ್ವದ ‘ಬೂಡಿಯಾರ್ ವೈದ್ಯಕೀಯ ಪ್ರತಿಷ್ಠಿತ’ ಪ್ರಶಸ್ತಿ, ಸಹಕಾರರತ್ನ ಅಗರಿ ನವೀನ್ ಭಂಡಾರಿ ಅವರಿಗೆ ಸಹಕಾರರತ್ನ ಸವಣೂರು ಸೀತಾರಾಮ ರೈ ಪ್ರಾಯೋಜಕತ್ವದ ‘ಸಾಧಕ ಸಹಕಾರಿ ರಶ್ಮಿ’ ಪ್ರಶಸ್ತಿ,ಸುಬೇದಾರ್ ಮೇಜರ್ ರಮೇಶ್ ರೈ ಬೋಳೋಡಿ ಅವರಿಗೆ ಅಗರಿ ಕರ್ನಲ್ ಜಗಜೀವನ್‌ದಾಸ್ ಭಂಡಾರಿ ಮತ್ತು ಸಹೋದರರ ಪ್ರಾಯೋಜಕತ್ವದ ‘ದೇಶ ಸೇವಾ ಅಗರಿ’ ಪ್ರಶಸ್ತಿ,ಚಂದ್ರಹಾಸ್ ರೈ ಬನ್ನೂರು ಬಾಳಿಕೆ ಅವರಿಗೆ ಮಿತ್ರಂಪಾಡಿ ಪುರಂದರ ರೈ ಪ್ರಾಯೋಜಕತ್ವದ ‘ಪಂಚಮಿ ಉದ್ಯಮ ಸಿರಿ’ ಪ್ರಶಸ್ತಿ,ಜಯಲಕ್ಷ್ಮೀ ಶೆಟ್ಟಿ ಅವರಿಗೆ ದೇರ್ಲ ಕರುಣಾಕರ ರೈ ಪ್ರಾಯೋಜಕತ್ವದ ‘ಉತ್ತಮ ಶಿಕ್ಷಕ ಅಶ್ವಿನಿ’ ಪ್ರಶಸ್ತಿ,ಸತೀಶ್ ರೈ ಕುತ್ಯಾಡಿ ಅವರಿಗೆ ಎನ್.ಚಂದ್ರಹಾಸ್ ಶೆಟ್ಟಿ ಪ್ರಾಯೋಜಕತ್ವದ ‘ಕ್ರೀಡಾ’ ಪ್ರಶಸ್ತಿ, ಪ್ರವೀಣ್ ಭಂಡಾರಿ ಪುರ ಅವರಿಗೆ ವಿಜಯಾ ಮಂಜುನಾಥ ಶೆಟ್ಟಿ ಪ್ರಾಯೋಜಕತ್ವದ ‘ಅರಣ್ಯ ಮಿತ್ರ’ ಪ್ರಶಸ್ತಿ,ಡಾ.ಸತ್ಯವತಿ ಆಳ್ವ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಪ್ರಾಯೋಜಕತ್ವದ ‘ಪುತ್ತೂರು ಬಂಟ ಸಿರಿ’ ಪ್ರಶಸ್ತಿ, ಸರೋಜ ಉಮೇಶ ರೈ ಮನವಳಿಕೆ ಅವರಿಗೆ ಬೂಡಿಯಾರು ಗುಲಾಬಿ ಎಂ.ಚೌಟ ಮತ್ತು ಮಕ್ಕಳ ಪ್ರಾಯೋಜಕತ್ವದ ‘ಬೂಡಿಯಾರು ಮಹಿಳಾ ಕೃಷಿ’ ಪ್ರಶಸ್ತಿ, ಪಿಯುಸಿ ವಿಭಾಗದಲ್ಲಿ ಸ್ವಸ್ತಿ ಶೆಟ್ಟಿ ಮತ್ತು ಸಮೃದ್ಧಿ ಶೆಟ್ಟಿ ಅವರಿಗೆ ಅರಿಯಡ್ಕ ಚಿಕ್ಕಪ್ಪ ನಾೖಕ್‌ ಪ್ರಾಯೋಜಕತ್ವದ ‘ವಿದ್ಯಾ ಅರಿಯಡ್ಕ’ ಪ್ರಶಸ್ತಿ ಹಾಗೂ ಶರಣ್ಯ ಶೆಟ್ಟಿ ಅವರಿಗೆ ಚನಿಲ ತಿಮ್ಮಪ್ಪ ಶೆಟ್ಟಿ ಪ್ರಾಯೋಜಕತ್ವದ ‘ವಿದ್ಯಾ ಚನಿಲ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.2025ನೇ ಸಾಲಿನ ‘ದೇಶ ಸೇವಾ ಅಗರಿ’ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಾಗದೇ ಇದ್ದ ಜಗನ್ನಾಥ ರೈ ಅವರು ಈ ಬಾರಿ ಪ್ರಶಸ್ತಿಯನ್ನು ಸ್ವೀಕರಿಸಿದರು.


ತುಂಬಾ ಸಂತೋಷ ಆಗಿದೆ -ಸೌಮ್ಯಪ್ರಿಯ ಹೆಗ್ಡೆ:
ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ ಅರಿಯಡ್ಕ ಮೂಲದ ಸೌಮ್ಯಪ್ರಿಯ ಹೆಗ್ಡೆ ಅವರು ಮಾತನಾಡಿ ಹುಟ್ಟೂರಿನ ಪ್ರೀತಿ-ಗೌರವದಿಂದ ನಾನು ಪುತ್ತೂರು ಬಂಟರ ಸಂಘದ ಕಾರ‍್ಯಕ್ರಮದಲ್ಲಿ ಭಾಗಿಯಾಗಿದ್ದೇನೆ.ಪುತ್ತೂರು ಬಂಟರ ಸಂಘದ ಸಾಧನೆ ಕಂಡು ತುಂಬಾ ಸಂತೋಷ ಆಗಿದೆ ಎಂದು ಹೇಳಿದರು.ಬೆಂಗಳೂರು ಬಂಟರ ಸಂಘದ ಕಾರ‍್ಯಕಾರಿ ಸಮಿತಿ ಸದಸ್ಯ ದೇರ್ಲ ಉಮೇಶ್ ಪೂಂಜ ಅವರು ಮುಖ್ಯ ಅತಿಥಿಯಾಗಿದ್ದರು.ಮಾತೃ ಸಂಘದ ತಾಲೂಕು ಸಂಚಾಲಕ ‘ಸಹಕಾರರತ್ನ’ ದಂಬೆಕ್ಕಾನ ಸದಾಶಿವ ರೈ, ಬಂಟರ ಸಂಘದ ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ, ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾಮೋಹನ್ ರೈ, ಯುವ ಬಂಟರ ವಿಭಾಗದ ಅಧ್ಯಕ್ಷ ಭಾಗ್ಯೇಶ್ ರೈ, ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷ ಸಮೃದ್ಧ್ ಶೆಟ್ಟಿ ಉಪಸ್ಥಿತರಿದ್ದರು.ತಾಲೂಕು ಬಂಟರ ಸಂಘದ ಪ್ರಧಾನ ಕಾರ‍್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು.ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ‍್ಯಕ್ರಮ ನಿರೂಪಿಸಿದರು.ಪ್ರತಿಭಾ ಪುರಸ್ಕಾರ ಪಡೆದವರ ಪಟ್ಟಿಯನ್ನು ಶಿವಪ್ರಸಾದ್ ರೈ ಮೈಲೇರಿ ವಾಚಿಸಿದರು.ಬಂಟರ ಸಂಘದ ಉಪಾಧ್ಯಕ್ಷರುಗಳಾದ ರಮೇಶ್ ರೈ ಡಿಂಬ್ರಿ, ಸುಭಾಸ್ ಕುಮಾರ್ ಶೆಟ್ಟಿ ಅರುವಾರ, ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ಜೊತೆ ಕಾರ‍್ಯದರ್ಶಿಗಳಾದ ಪುಲಸ್ಯ ರೈ, ಹರಿಣಾಕ್ಷಿ ಜೆ.ಶೆಟ್ಟಿ,ಸ್ವರ್ಣಲತಾ ಜೆ.ರೈ,ನಿರ್ದೇಶಕ ಶಶಿಕಿರಣ್ ರೈ ನೂಜಿಬೈಲು ಅವರುಗಳು ಅತಿಥಿಗಳನ್ನು ಗೌರವಿಸಿದರು.ಬಂಟರ ಸಂಘ ಮತ್ತು ಮಾತೃ ಸಂಘದ ನಿರ್ದೇಶಕರುಗಳು, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಪದಾಧಿಕಾರಿಗಳು ಸಹಕರಿಸಿದರು.


ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ:
ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದ 23 ಮಂದಿ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 82 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.


ಬಂಟೆರೆ ಮೆರವಣಿಗೆ-ಮಾಜಿ ಸಂಸದ ಕಟೀಲ್‌ರಿಂದ ಚಾಲನೆ:
ಪೂರ್ವಾಹ್ನ ಪುತ್ತೂರು ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ತೆಂಗಿನ ಕಾಯಿ ಒಡೆದು ‘ಬಂಟೆರೆ ಮೆರವಣಿಗೆ’ಗೆ ಚಾಲನೆ ನೀಡಿದರು.ಅಧ್ಯಕ್ಷತೆಯನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವಹಿಸಿದ್ದರು.ತಾಲೂಕು ಬಂಟರ ಸಂಘದ ಮಾಜಿ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವರವರು ಧ್ವಜ ಹಸ್ತಾಂತರಗೈದರು.ಬಂಟರ ಯಾನೆ ನಾಡವರ ಮಾತೃ ಸಂಘದ ನಿಕಟಪೂರ್ವ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ ಅವರು ಗಣಪತಿ ದೇವರ ಎದುರು ಪ್ರಾರ್ಥನೆಗೈದರು.ಪುತ್ತೂರು ತಾಲೂಕು ಸಮಿತಿ ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ತಾಲೂಕು ಯುವ ಬಂಟರ ವಿಭಾಗದ ಅಧ್ಯಕ್ಷ ಭಾಗ್ಯೇಶ್ ರೈ, ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷ ಸಮೃದ್ಧ್ ಶೆಟ್ಟಿ ಉಪಸ್ಥಿತರಿದ್ದರು.ಬಳಿಕ, ವಿಶೇಷವಾಗಿ ಸಿದ್ಧಪಡಿಸಲಾದ ಎರಡು ರಥಗಳಲ್ಲಿ, ಬಂಟ ಸಮಾಜದ 16ಮಂದಿ ಸಾಧಕರನ್ನು ಮತ್ತು ಸಮಾರಂಭದ ಅತಿಥಿಗಳನ್ನು ರಾಜರಸ್ತೆಯ ಮೂಲಕ ಮೆರವಣಿಗೆಯಲ್ಲಿ ಬಂಟರ ಭವನಕ್ಕೆ ಕರೆದುಕೊಂಡು ಬರಲಾಯಿತು.


ಮಹಾದ್ವಾರ ಉದ್ಘಾಟನೆ-ಧ್ವಜಾರೋಹಣ:
ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ನಿರ್ದೇಶಕ ಅರಿಯಡ್ಕ ಚಿಕ್ಕಪ್ಪ ನಾಕ್ ಅವರು ಬಂಟರ ಭವನದ ಬಳಿಯ ಮಹಾದ್ವಾರ ಉದ್ಘಾಟನೆಗೈದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ, ತಾಲೂಕು ಬಂಟರ ಸಂಘದ ನಿರ್ದೇಶಕ ರವೀಂದ್ರ ಶೆಟ್ಟಿ ನುಳಿಯಾಲುರವರ ಗೌರವ ಉಪಸ್ಥಿತಿಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಸಹಕಾರರತ್ನ ದಂಬೆಕ್ಕಾನ ಸದಾಶಿವ ರೈ ಅವರು ಧ್ವಜಾರೋಹಣಗೈದರು.ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಪ್ರವೇಶ ದ್ವಾರ ಉದ್ಘಾಟನೆಗೈದರು.

ಬೆಂಗಳೂರು ಬಂಟರ ಸಂಘಕ್ಕೆ ಆಯ್ಕೆಯಾದ ಪುತ್ತೂರಿನವರಿಗೆ ಸನ್ಮಾನ
ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪುತ್ತೂರು ಮೂಲದ ಸೌಮ್ಯಪ್ರಿಯ ಹೆಗ್ಡೆ ಅರಿಯಡ್ಕ, ಉಮೇಶ್ ಪೂಂಜ ದೇರ್ಲರವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಸನ್ಮಾನಿತರನ್ನು ಆಕರ್ಷಕವಾದ ಸನ್ಮಾನ ಪೀಠದಲ್ಲಿ ಕುಳ್ಳಿರಿಸಿ, ಅದ್ದೂರಿ ಸನ್ಮಾನದೊಂದಿಗೆ ವಿಶೇಷವಾದ ಗೌರವ ನೀಡಲಾಯಿತು.


ಮುಂದಿನ ಅವಧಿಯಲ್ಲಿಯೂ ನಿಮ್ಮ ಸಹಕಾರ ಬೇಕು
ಈ ಅವಧಿಯಲ್ಲಿ ಬೇಕಾದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ.ಇನ್ನೂ ಒಂದುವರೆ ವರ್ಷ ಇದೆ.ಮುಂದೆ ನಡೆಯುವ ಚುನಾವಣೆಯಲ್ಲಿಯೂ ನನಗೆ ಬಂಟ ಸಮಾಜದವರ ಪೂರ್ಣ ಸಹಕಾರ,ಆಶೀರ್ವಾದ ಇರಲಿ.ನನಗೆ ಪುತ್ತೂರನ್ನು ದೊಡ್ಡ ಪಟ್ಟಣವಾಗಿ ರೂಪಿಸಬೇಕೆಂಬ ಕನಸು ಇದೆ.ಮೆಡಿಕಲ್ ಕಾಲೇಜ್‌ನಿಂದ ಸುಮಾರು 10 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿ ಆಗುತ್ತದೆ
ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು

ಬಂಟರ ಸಂಘದ ನೂತನ ಜಾಗದಲ್ಲಿ ಶೀಘ್ರ ಕಾಮಗಾರಿ ಆರಂಭ
ತಾಲೂಕು ಬಂಟರ ಸಂಘಕ್ಕೆ ಕರ್ನಾಟಕ ಸರಕಾರದಿಂದ ಶಾಸಕ ಅಶೋಕ್ ಕುಮಾರ್ ರೈ ಅವರ ಮುಖಾಂತರ ಮಂಜೂರಾದ 5.50 ಎಕ್ರೆ ಜಾಗದಲ್ಲಿ ಪ್ರಥಮ ಹಂತದಲ್ಲಿ ಅತೀ ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ.ಈ ಜಾಗದಲ್ಲಿ ಹಂತ ಹಂತವಾಗಿ ವಿವಿಧ ರೀತಿಯ ಅಭಿವೃದ್ಧಿ ಕೆಲಸ ಆಗಲಿದೆ
-ಕಾವು ಹೇಮನಾಥ ಶೆಟ್ಟಿ, ಅಧ್ಯಕ್ಷರು ಬಂಟರ ಸಂಘ ಪುತ್ತೂರು

ಭರ್ಜರಿ ಭೋಜನ
ಬೆಳಿಗ್ಗೆ ಉಪಹಾರದಲ್ಲಿ ಇಡ್ಲಿ,ಅಂಬಡೆ,ಕ್ಷೀರ, ಚಾ,ಕಾಫಿ ಹಾಗೂ ಸಭೆಯ ನಡುವೆ ಗ್ರೇಪ್ ಜ್ಯೂಸ್, ತಿಂಡಿ ವಿತರಿಸಲಾಯಿತು.ಮಧ್ಯಾಹ್ನ ಮಾಂಸಾಹಾರಿ ಭೋಜನದಲ್ಲಿ ಕೋರಿ ಫ್ರೈ ರೊಟ್ಟಿ,ಬಂಗುಡೆ ಫ್ರೈ ,ಬಂಗುಡೆ ಪುಳಿಮುಂಚಿ,ಚಿಕನ್ ಸುಕ್ಕ,ಪಾಯಸ ಮತ್ತು ಸಸ್ಯಹಾರಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.1500ಕ್ಕೂ ಹೆಚ್ಚು ಮಂದಿ ಬಂಟ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here