ಗಿರಿಜಾ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಡಿ.12, 13ರಂದು ಧಾರ್ಮಿಕ ವೈಭವಯ ಯಶಸ್ಸಿಗಾಗಿ ಶಿವನ ಸನ್ನಿಧಿಯಲ್ಲೇ ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು: ಸತತ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವದ ಬಳಿಕ ಪುತ್ತೂರಿನಲ್ಲಿ ಮತ್ತೊಂದು ವೈಭವೋಪೇತ ಧಾರ್ಮಿಕ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಗಿರಿಜಾ ಕಲ್ಯಾಣೋತ್ಸವ ಸಮಿತಿಯಿಂದ ಡಿ.12 ಮತ್ತು 13ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ.

ಗಿರಿಜಾ ಕಲ್ಯಾಣೋತ್ಸವದ ಜತೆಗೆ ಉಚಿತ ಸಾಮೂಹಿಕ ವಿವಾಹ, ಶ್ರೀ ಮಹಾಲಿಂಗೇಶ್ವರ ದೇವರಿಗೆ ಲಕ್ಷ ಬಿಲ್ವಾರ್ಚನೆ, ಕೇಸರಿ ಸಂಗಮ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಅ.4ರಂದು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಳದ ಸಭಾಭವನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾಮಾಜಿಕ ಸೇವೆಯ ಜತೆಗೆ ಧಾರ್ಮಿಕ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಹಿಂದು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮತ್ತು ಒಗ್ಗಟ್ಟಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕಳೆದ ಮೂರು ವರ್ಷಗಳಿಂದ ನಡೆದ ಶ್ರೀನಿವಾಸ ಕಲ್ಯಾಣೋತ್ಸವವು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಗಮನ ಸೆಳೆದ ಬೃಹತ್ ಧಾರ್ಮಿಕ ಕಾರ್ಯಕ್ರಮವಾಗಿ ರೂಪುಗೊಂಡಿತ್ತು. ತಿರುಪತಿಗೆ ತೆರಳಲು ಸಾಧ್ಯವಾಗದ ಭಕ್ತರಿಗೆ ಪುತ್ತೂರಿನಲ್ಲೇ ಶ್ರೀ ವೆಂಕಟೇಶ್ವರನ ದರ್ಶನದ ಅವಕಾಶ ಕಲ್ಪಿಸಿದ್ದ ಕಾರ್ಯಕ್ರಮಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ದೊರೆತಿತ್ತು. ಕಳೆದ ವರ್ಷದ ಕಾರ್ಯಕ್ರಮದಲ್ಲೇ ಮುಂದಿನ ವರ್ಷ ಗಿರಿಜಾ ಕಲ್ಯಾಣೋತ್ಸವ ನಡೆಸಬೇಕು ಎಂಬ ಅಪೇಕ್ಷೆ ವ್ಯಕ್ತವಾಗಿತ್ತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಗಿರಿಜಾ ಕಲ್ಯಾಣೋತ್ಸವದಿಂದ ಲೋಕಕಲ್ಯಾಣವಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ದೇವರ ಪ್ರೇರಣೆ, ಭಕ್ತರ ಅಪೇಕ್ಷೆ ಹಾಗೂ ಸಾರ್ವಜನಿಕರ ಆಶಯದಂತೆ ಈ ಬಾರಿ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಅಡೆತಡೆಗಳ ನಡುವೆಯೂ ಗಿರಿಜೆ ಶಿವನನ್ನು ಒಲಿಸಿದಂತೆ ಪುತ್ತಿಲರ ಕನಸು ಸಾಕಾರ:
ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಗುರುಪುರ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಅರುಣ್ ಕುಮಾರ್ ಪುತ್ತಿಲರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಈಗಾಗಲೇ ಜಗಜಾಹಿರವಾಗಿದೆ. ರೈಲು ಇಂಜಿನ್‌ಗೆ ಹೆಚ್ಚುವರಿ ಬೋಗಿಗಳು ಸೇರಿದರೂ ಅದರ ವೇಗ ಕಡಿಮೆಯಾಗುವುದಿಲ್ಲ. ಅದೇ ರೀತಿ ಪುತ್ತಿಲ ಪರಿವಾರವೂ ವೇಗವನ್ನು ಕಳೆದುಕೊಂಡಿಲ್ಲ. ಮೂರು ವರ್ಷ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿದ ಬಳಿಕ ನಾಲ್ಕನೇ ವರ್ಷ ಗಿರಿಜಾ ಕಲ್ಯಾಣೋತ್ಸವ ನಡೆಸುವ ಸಂಕಲ್ಪ ಮಾಡಲಾಗಿದೆ” ಎಂದರು. ಸೀತಾರಾಮ, ಶ್ರೀನಿವಾಸ ಹಾಗೂ ಗಿರಿಜಾ ಕಲ್ಯಾಣಗಳು ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿವೆ. ಹಿಂದು ಧರ್ಮದ ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮಕ್ಕೆ ಮಹತ್ವವಿದೆ. ಆದರೆ ಇಂದಿನ ಸಮಾಜದಲ್ಲಿ ಗೃಹಸ್ಥ ಧರ್ಮದ ನಿಯಮಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತಿವೆ. ಈ ವ್ಯವಸ್ಥೆ ಸರಿಯಾಗಬೇಕಾದರೆ ಧಾರ್ಮಿಕ ಕಲ್ಯಾಣೋತ್ಸವಗಳಂತಹ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸಬೇಕು” ಎಂದರು. ಗಿರಿಜೆಯು ಶಿವನನ್ನು ಒಲಿಸಿಕೊಳ್ಳಲು ಅನೇಕ ಅಡೆತಡೆಗಳನ್ನು ಎದುರಿಸಿ ತಪಸ್ಸು ಮಾಡಿದಳು. ಅಂತಿಮವಾಗಿ ಶಿವನನ್ನು ಒಲಿಸಿಕೊಂಡಳು. ಅದೇ ರೀತಿ ಅರುಣ್ ಕುಮಾರ್ ಪುತ್ತಿಲರು ಕಟ್ಟಿಕೊಂಡಿರುವ ಕನಸುಗಳು ಸಾಕಾರಗೊಳ್ಳಲಿ. ಪುತ್ತೂರಿನ ಮಣ್ಣಿನಲ್ಲಿ ಗಿರಿಜಾ ಕಲ್ಯಾಣೋತ್ಸವ ಯಶಸ್ವಿಯಾಗಿ ನೆರವೇರಲಿ” ಎಂದು ಆಶಿಸಿದರು. ಧರ್ಮದ ಜತೆಗೆ ಸಮಾಜದ ಕಾಳಜಿಯೂ ಇರಬೇಕು. ಮನೆ ಇಲ್ಲದವರಿಗೆ ಮನೆ, ಅಗತ್ಯವಿರುವವರಿಗೆ ನೆರವು ಹಾಗೂ ಸಂಕಷ್ಟದಲ್ಲಿರುವವರಿಗೆ ಆಸರೆಯಾಗುವ ಕಾರ್ಯಗಳು ನಡೆಯಬೇಕು ಎಂದು ಅವರು ಹೇಳಿದರು. `ಹಿಂದುತ್ವದ ರಕ್ಷಣೆಗೆ ಧಾರ್ಮಿಕತೆ ಮತ್ತು ಸಾಮಾಜಿಕ ಶಕ್ತಿ ಅಗತ್ಯ’ ಪುರೋಹಿತ ಹಾಗೂ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ಜಗತ್ತು ಉಳಿಯಬೇಕಾದರೆ ಭಾರತ ಉಳಿಯಬೇಕು. ಹಿಂದುತ್ವ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಜೀವ ಉಳಿಸುವುದೇ ಹಿಂದುತ್ವದ ಗುರಿ. ಪುತ್ತೂರಿನ ಮಣ್ಣಿನಲ್ಲಿಯೂ ಹಿಂದುತ್ವದ ರಕ್ಷಣೆ ಹಾಗೂ ಧಾರ್ಮಿಕ ಜಾಗೃತಿ ನಡೆಯಬೇಕು” ಎಂದರು. ಪುತ್ತಿಲ ಪರಿವಾರವು ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸಿ ಧಾರ್ಮಿಕ ಕಾರ್ಯಗಳನ್ನು ಮುಂದುವರಿಸುತ್ತಿದೆ. ಶ್ರೀನಿವಾಸ ಕಲ್ಯಾಣೋತ್ಸವದ ಬಳಿಕ ಇದೀಗ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಗಿರಿಜಾ ಕಲ್ಯಾಣ ನಡೆಯಲಿದೆ. ಶಿವ-ಪಾರ್ವತಿಯ ಕಲ್ಯಾಣವು ಧರ್ಮರಕ್ಷಣೆಯ ಸಂಕೇತವಾಗಿದೆ. ತಪ್ಪಸಿನ ಫಲದಿಂದ ಗಿರಿಜೆಯು ಶಿವನನ್ನು ಒಲಿಸಿದಳು. ಅವರ ಪುತ್ರ ಸುಬ್ರಹ್ಮಣ್ಯನಿಂದ ತಾರಕಾಸುರನ ವಧೆಯಾಯಿತು. ಅದೇ ರೀತಿ ಹಲವು ವರ್ಷಗಳ ತಪ್ಪಸ್ಸಿನ ಫಲ ಅರುಣ್ ಕುಮಾರ್ ಪುತ್ತಿಲರ ಮೂಲಕ ಹಿಂದುತ್ವಕ್ಕೆ ಸಿಗಲಿದೆ. ಪುತ್ತೂರಿಗೆ ಶುಭಫಲ ದೊರೆಯಲಿ. ಇದು ನಮ್ಮ ಮನೆಯ ಮದುವೆಯೆಂಬ ಭಾವನೆಯೊಂದಿಗೆ ಎಲ್ಲರೂ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.

ಹಿಂದು ಸಂಘಟನೆ ಇಬ್ಬಾಗವಾಗಬಾರದು:
ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ ಮಾತನಾಡಿ, ಅರುಣ್ ಕುಮಾರ್ ಪುತ್ತಿಲರನ್ನು ಬಜರಂಗದಳಕ್ಕೆ ಕರೆತಂದ ಸಂದರ್ಭ ಹಾಗೂ ಹಿಂದು ಸಂಘಟನೆಗಾಗಿ ಅವರು ಮಾಡಿದ ಕಾರ್ಯಗಳನ್ನು ಸ್ಮರಿಸಿದರು. ಶಿವನ ಸನ್ನಿಧಿಯಲ್ಲಿ ಲೋಕಕಲ್ಯಾಣದ ಉದ್ದೇಶದಿಂದ ಗಿರಿಜಾ ಕಲ್ಯಾಣೋತ್ಸವ ನಡೆಸುತ್ತಿರುವುದು ಹಿಂದು ಸಮಾಜಕ್ಕೆ ಅಗತ್ಯವಾದ ಕಾರ್ಯವಾಗಿದೆ. ಹಿಂದು ಸಮಾಜದೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟನೆ ಒಂದಾಗಬೇಕು. ಹಿಂದು ಸಮಾಜ ಸಂಘಟಿತವಾಗದಿದ್ದರೆ ಅನ್ಯ ಶಕ್ತಿಗಳಿಗೆ ಅವಕಾಶ ಸಿಗಬಹುದು. ಆದ್ದರಿಂದ ಎಲ್ಲ ಹಿಂದುಗಳು ಒಗ್ಗಟ್ಟಿನಿಂದ ಸಂಘಟಿತರಾಗಬೇಕು ಎಂದು ಅವರು ಮನವಿ ಮಾಡಿದರು.

ಒಂದು ತಿಂಗಳಲ್ಲಿ ಹಿಂದು ಮನೆಮನೆಗೆ ಆಮಂತ್ರಣ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಿರಿಜಾ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ ಮಾತನಾಡಿ, ನಮ್ಮ ಧರ್ಮ, ಆಚರಣೆ ಮತ್ತು ಅನುಷ್ಠಾನಗಳಲ್ಲಿ ಭಿನ್ನತೆಗಳಿದ್ದರೂ ನಾವು ಒಂದಾಗಬೇಕಾದ ಕಾಲ ಬಂದಿದೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲರು ಮುನ್ನುಡಿ ಬರೆದಿದ್ದಾರೆ” ಎಂದರು. ಪರಿವಾರದಲ್ಲಿ ಮೂರು ವರ್ಷಗಳ ಹಿಂದೆ 64 ಸಾವಿರ ಬೋಗಿಗಳಿದ್ದವು. ಮೂರು ವರ್ಷ ಕಳೆದ ನಂತರ 46ಸಾವಿರ ಬೋಗಿಗಳು ಸೇರಿಕೊಂಡಿವೆ. ಅದರೆ ವೇಗ ಮಾತ್ರ ನಿಂತಿಲ್ಲ. ಅರುಣ್ ಕುಮಾರ್ ಅವರ ಸಾರಥ್ಯದಲ್ಲಿ ಮುಂದೆಯೂ ಕೂಡಾ ಈ ಬೋಗಿಗಳು ಸೇರುತ್ತಾ ಇರುತ್ತವೆ ಹೊರತು ಹಲಿ ತಪ್ಪುವುದಿಲ್ಲ ಎಂದು ಹೇಳಿದರು. ಮುಂದಿನ ಗಿರಿಜಾ ಕಲ್ಯಾಣೋತ್ಸವವನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಒಂದೇ ಮನಸ್ಸಿನಿಂದ ಕಾರ್ಯನಿರ್ವಹಿಸಬೇಕು. ಪ್ರತಿ ಮಂಡಲ, ಉಪವಸತಿ ಹಾಗೂ ಹಿಂದು ಮನೆಗಳಿಗೆ ಗಿರಿಜಾ ಕಲ್ಯಾಣೋತ್ಸವದ ಆಮಂತ್ರಣ ಪತ್ರವನ್ನು ಒಂದು ತಿಂಗಳೊಳಗೆ ತಲುಪಿಸಲಾಗುವುದು” ಎಂದು ತಿಳಿಸಿದರು.

ರಾಜಕೀಯ, ಜಾತೀಯತೆ ಇಲ್ಲದ ಧಾರ್ಮಿಕ ಕಾರ್ಯಕ್ರಮ:
ಮಾಧ್ಯಮದೊಂದಿಗೆ ಮಾತನಾಡಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಹಿಂದು ಸಮಾಜಕ್ಕೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕಳೆದ ಮೂರು ವರ್ಷ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿದ ಬಳಿಕ ಈ ಬಾರಿ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ಗಿರಿಜಾ ಕಲ್ಯಾಣೋತ್ಸವ ನಡೆಸಲಾಗುತ್ತಿದೆ. ಇದರ ಜತೆಗೆ ಉಚಿತ ಸಾಮೂಹಿಕ ವಿವಾಹ ನಡೆಯಲಿದ್ದು, ಈಗಾಗಲೇ ಐದಾರು ಜೋಡಿಗಳು ನೋಂದಾಯಿಸಿಕೊಂಡಿದ್ದಾರೆ” ಎಂದರು. ಡಿ.12ರಂದು ಪುತ್ತೂರಿಗೆ ಹೊಸದಾಗಿರುವ, ಕೇರಳದಲ್ಲಿ ಯಶಸ್ವಿಯಾಗಿರುವ ಭಜನ್ ತಂಡದಿಂದ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಬೆಳಗ್ಗೆ ಮಹಾಲಿಂಗೇಶ್ವರ ದೇವರಿಗೆ ಪ್ರಿಯವಾದ ಲಕ್ಷ ಬಿಲ್ವಾರ್ಚನೆ ಸೇವೆ ನಡೆಯಲಿದೆ. ಕಾಶಿಯ ಗಂಗಾರತಿಯ ಮಾದರಿಯಲ್ಲಿ ವಿಶೇಷ ಶಿವಾರತಿ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ರಾಜಕೀಯಕ್ಕೂ ಜಾತೀಯತೆಗೂ ಸ್ಥಾನವಿಲ್ಲ. ಹಿಂದು ಸಮಾಜಕ್ಕೆ ಶಕ್ತಿ ತುಂಬುವ, ಧರ್ಮಶ್ರದ್ಧೆಯೊಂದಿಗೆ ಬದುಕುವ ಸಂದೇಶವನ್ನು ಸಮಾಜಕ್ಕೆ ನೀಡುವುದು ಉದ್ದೇಶ. ಧರ್ಮಸಭೆ ಹಾಗೂ ಹಿಂದುತ್ವಕ್ಕಾಗಿ ಜೀವನ ಅರ್ಪಿಸಿದ ಕಾರ್ಯಕರ್ತರಿಗಾಗಿ ಕೇಸರಿ ಸಂಗಮವೂ ನಡೆಯಲಿದೆ. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು” ಎಂದು ಅವರು ವಿನಂತಿಸಿದರು. ಡಿ.11ರಂದು ದರ್ಬೆಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ನಡೆಯಲಿದೆ ಎಂದರು.

ಶಿವ,ಪಾರ್ವತಿ ಕಲ್ಯಾಣವನ್ನು ಮಹಾವಿಷ್ಣು ನಡೆಸಿಕೊಡಲಿದ್ದಾರೆ:
ಗಿರಿಜಾ ಕಲ್ಯಾಣೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅನಿಲ್ ಕುಮಾರ್ ಕಣ್ಣಾರ್ನೂಜಿ ಸ್ವಾಗತಿಸಿ ಮಾತನಾಡಿ, ʼಶ್ರೀನಿವಾಸ ಕಲ್ಯಾಣೋತ್ಸವವನ್ನು ಶಿವನ ಸನ್ನಿಧಿಯಲ್ಲಿ ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬಂದ ರೀತಿಯಲ್ಲೇ ಈ ಬಾರಿ ಶಿವ-ಪಾರ್ವತಿ ಕಲ್ಯಾಣವನ್ನು ಮಹಾವಿಷ್ಣು ನಡೆಸಿಕೊಡಲಿದ್ದಾರೆ. ಭಗವಂತನ ಸಾನ್ನಿಧ್ಯ ಮತ್ತು ಪ್ರೇರಣೆಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ” ಎಂದರು.


ವೇದಿಕೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ವೈದಿಕ ಸಮಿತಿ ಸಂಚಾಲಕ ಬ್ರಹ್ಮಶ್ರೀ ಗುರು ತಂತ್ರಿ, ಸಮಿತಿ ಗೌರವಾಧ್ಯಕ್ಷರಾದ ವಾಸು ಪೂಜಾರಿ ಗುಂಡ್ಯಡ್ಕ, ಮೋನಪ್ಪ ಪುರುಷ ಮುಗೇರಡ್ಕ, ಸುಜೀರ್ ಗಣಪತಿ ನಾಯಕ್ ಉಪ್ಪಿನಂಗಡಿ, ದೈವ ನರ್ತಕ ಚಂದ್ರ ನಳಿಕೆ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಸಮಿತಿ ಕೋಶಾಧಿಕಾರಿ ಉದಯ ಕುಮಾರ್ ರೈ, ಸೀತಾ ಪರಿವಾರದ ಅಧ್ಯಕ್ಷೆ ಪ್ರೇಮಾ ರಾಧಾಕೃಷ್ಣ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಶ್ರೀಗಳಿಗೆ ತುಳಸಿ ಮಾಲೆ ಹಾಗೂ ಫಲಪುಷ್ಪ ನೀಡಿ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ ಅತಿಥಿಗಳನ್ನು ಗೌರವಿಸಿದರು. ಕು. ವಿಭಾ ಪ್ರಾರ್ಥಿಸಿದರು. ಕಾರ್ಯಾಧ್ಯಕ್ಷ ಅನಿಲ್ ಕುಮಾರ್ ಕಣ್ಣಾರ್ನೂಜಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ತೆಂಕಿಲ ವಂದಿಸಿದರು. ಆಮಂತ್ರಣ ಸಮಿತಿ ಸಂಚಾಲಕ ರವಿ ಕುಮಾರ್ ರೈ ಕೆದಂಬಾಡಿ ಮಠ ಕಾರ್ಯಕ್ರಮ ನಿರೂಪಿಸಿದರು. ಕೆಮ್ಮಿಂಜೆ ಬ್ರಹ್ಮಶ್ರೀ ಸುಬ್ರಹ್ಮಣ್ಯ ಬಳ್ಳಕುರಾಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದೇವಳದಲ್ಲಿ ಸಾಗರವಾದ ಪುತ್ತಿಲ-ಸೀತಾ ಪರಿವಾರ:
ಗಿರಿಜಾ ಕಲ್ಯಾಣೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುತ್ತಿಲ ಪರಿವಾರ ಹಾಗೂ ಸೀತಾ ಪರಿವಾರದ ಕಾರ್ಯಕರ್ತರು, ಗಿರಿಜಾ ಕಲ್ಯಾಣೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತರ ಭಾರೀ ಸಂಖ್ಯೆಯ ಉಪಸ್ಥಿತಿ ಕಂಡುಬಂತು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಗಿರಿಜಾ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ ಅವರು ಹರಿವಾಣದಲ್ಲಿ ಹಿಂಗಾರ, ಫಲಪುಷ್ಪ ಹಾಗೂ ಆಮಂತ್ರಣ ಪತ್ರವನ್ನು ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮಶ್ರೀ ಗುರು ತಂತ್ರಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ದೇವಳದ ಪ್ರಧಾನ ಅರ್ಚಕ ವೇ.ಮೂ. ವಿ.ಎಸ್. ಭಟ್ ಪ್ರಸಾದ ವಿತರಿಸಿದರು. ಈ ಸಂದರ್ಭ ದೇವಳದ ಒಳಾಂಗಣ ಹಾಗೂ ರಾಜಾಂಗಣದಲ್ಲಿ ಕಾರ್ಯಕರ್ತರು ಮತ್ತು ಭಕ್ತರ ದೊಡ್ಡ ಸಂಖ್ಯೆಯ ಉಪಸ್ಥಿತಿ ಕಂಡುಬಂತು. ಬಳಿಕ ದೇವಳದ ಸಭಾಭವನದಲ್ಲಿ ನಡೆದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿಯೂ ಸಭಾಂಗಣ ಭಕ್ತರಿಂದ ತುಂಬಿ ತುಳುಕಿತು.


ಇಲ್ಲಿ ರಾಜಕೀಯ ಲವಲೇಶವೂ ಇಲ್ಲ:
ಇಲ್ಲಿ ಯಾವುದೇ ರಾಜಕೀಯದ ಲವಲೇಶವೂ ಇಲ್ಲ. ರಾಜಕೀಯದ ಗಂಧವೂ ಇಲ್ಲ. ಧರ್ಮವೊಂದೇ ನಮ್ಮ ಆಶಯ. ಮಹಾಲಿಂಗೇಶ್ವರನೇ ನಮ್ಮ ಆರಾಧ್ಯ. ಈ ವಿಚಾರವನ್ನು ನಾನು ಹಲವು ಬಾರಿ ಹೇಳಿದ್ದೇನೆ. ನಮ್ಮ ಧರ್ಮ, ಸಂಸ್ಕೃತಿ ಹಾಗೂ ಆಚರಣೆಗಳು ನಿತ್ಯ ನಿರಂತರವಾಗಿ ಮುಂದುವರಿಯಬೇಕು. ವೇದಮಂತ್ರಗಳ ಘೋಷದೊಂದಿಗೆ ಧಾರ್ಮಿಕ ಆಚರಣೆಗಳು ನಡೆಯುತ್ತಿರುವುದು ಮನಸ್ಸಿಗೆ ಬಹಳ ಮುದ ನೀಡುವ ಸಂಗತಿ. ವಿಶೇಷವಾಗಿ ಕಾಶಿಯ ಗಂಗಾರಾತಿ ಮಾಡುವ ತಂಡ ಈ ಭಾರಿ ಪುತ್ತೂರಿಗೆ ಬಂದು ಶಿವರಾತ್ರಿ ಮಾಡಲಿದ್ದಾರೆ. ಇದನ್ನು ನೋಡುವ ಭಾಗ್ಯ ನಮಗೆಲ್ಲರಿಗೂ ಸಿಗಲಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಪುತ್ತೂರು ಕಲ್ಯಾಣೋತ್ಸವದ ಮೂಲಕ ಮತ್ತೆ ಮತ್ತೆ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶ ನಮಗೆ ದೊರೆಯುತ್ತಿದೆ. ನಮ್ಮ ಧರ್ಮದ ಅನುಷ್ಠಾನಗಳಿಗೆ ಯಾವುದೇ ಅಡ್ಡಿ, ಅಪೇಕ್ಷೆ ಅಥವಾ ರಾಜಕೀಯ ಹಸ್ತಕ್ಷೇಪ ಇರಬಾರದು. ಧರ್ಮದ ಹಾದಿಯಲ್ಲಿ ಮಹಾಲಿಂಗೇಶ್ವರ ದೇವರ ಆರಾಧನೆ ನಿತ್ಯ ನಿರಂತರವಾಗಿ ನಡೆಯಬೇಕು.

ಶ್ರೀಕೃಷ್ಣ ಉಪಾಧ್ಯಾಯ


ಅವತ್ತಿನ ಹಾಗೆ ಉಂಟಲ್ಲಾ !
ಇಗ ಪುತ್ತಿಲ ಪರಿವಾರ ಏನಿಲ್ಲ ಎಂಬ ಮಾತು ಇತ್ತು. ಆದರೆ ಮೊನ್ನೆ ನಡೆದ ಗಿರಿಜಾ ಕಲ್ಯಾಣೋತ್ಸವದ ಪೂರ್ವಭಾವಿ ಸಭೆಯಲ್ಲಿ ಸೇರಿದ ಜನಸ್ತೋಮದ ವರದಿ ನೋಡಿ ನನಗೆ ಮಂಗಳೂರಿನಿಂದ ಕೂಡಾ ಕಾಲ್ ಮಾಡಿದ್ರು ಎಂತ ಮಾರೆ ಅವತ್ತಿನ ಹಾಗೆ ಉಂಟಲ್ಲಾ ಎಂದು ಹೇಳಿರುವುದು ಪುತ್ತಿಲ ಪರಿವಾರದ ಶಕ್ತಿಯನ್ನು ತೋರಿಸಿದೆ. ಧರ್ಮಕ್ಕಾಗಿ ಮಹಾಲಿಂಗೇಶ್ವರ ಮಣ್ಣನಲ್ಲಿ ಪುತ್ತೂರು ಒಡೆಯುವುದಿಲ್ಲ ಎಂಬುದು ಸಾಕ್ಷಿ.

ಶ್ರೀಕೃಷ್ಣ ಉಪಾಧ್ಯಾಯ


ಭಕ್ತರು ಮಾಡಿದ ಕಲ್ಯಾಣೋತ್ಸವಕ್ಕೆ ತೂಕವಿದೆ
ಸಂಘಟನೆಯಲ್ಲಿ ಯುವ ಜನತೆ, ವಿದ್ಯಾರ್ಥಿಗಳು, ಹಿರಿಯರು, ಮಾತೃಗಳು ಸೇರಿಸಿಕೊಂಡು ಪ್ರತ್ಯೇಕ ಸಮಾವೇಶ ಮಾಡಬೇಕು. ಒಬ್ಬೊಬ್ಬರಿಗೂ ಒಂದೊಂದು ಜವಾಬ್ದಾರಿ ನೀಡಬೇಕು. ಈ ಎಲ್ಲಾ ಸಮಾವೇಶ ಗಿರಿಜಾಕಲ್ಯಾಣೋತ್ಸವಕ್ಕೆ ಪೂರಕವಾಗಿರಬೇಕು ಎಂದರು.
ಯಾಕೆಂದರೆ ಭಕ್ತರು ಮಾಡಿದ ಕಲ್ಯಾಣೋತ್ಸವಕ್ಕೆ ಬಹಳ ತೂಕವಿದೆ. ಇದು ಬಹಳ ದಾಖಲೆಯಾಗಿ ಉಳಿಯುತ್ತದೆ. ಇಲ್ಲಿ ರಾಜಕೀಯ ಆಶಯವಿಲ್ಲ. ಬಾವಿ ತೋಡಿ ನೀರು ತರುವ ಪ್ರಶ್ನೆ ಇಲ್ಲ. ಭಗವಂತನೇ ಬಾವಿ ತೋಡಿ ನೀರು ಕೊಟ್ಟಿದ್ದಾರೆ. ದೇವರಮಾರು ಗದ್ದೆ ಭಕ್ತರಿಂದ ಪೂರ್ತಿ ತುಂಬಿ ತುಳುಕಬೇಕು. ದೇವರ ಕಲ್ಯಾಣವನ್ನು ನನಸು ಮಾಡಿದರೆ ನಮ್ಮ ಕಲ್ಯಾಣವನ್ನು ದೇವರು ಮಾಡುತ್ತಾರೆ. ಇದಕ್ಕೆ ಅನೇಕ ಋಷಿಮುನಿಗಳು ಉದಾಹರಣೆಯಾಗಿದ್ದಾರೆ. ಗಿರಿಜಾ ಕಲ್ಯಾಣದ ವೇಳೆ ಎರಡು ಹನಿ ಮಳೆ ಬಂದೇ ಬರುತ್ತದೆ. ಹಿಂದು ಧರ್ಮ ಬಿಟ್ಟು ಯಾವ ವಿಷಯದಲ್ಲೂ ಇಲ್ಲ. ಎಲ್ಲರು ಕುಟುಂಬ ಸಮೇತರಾಗಿ ಭಾಗವಹಿಸಿ ಎಂದು ವಿನಂತಿ

ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ


ರಾಜಕೀಯಕ್ಕೆ ಸ್ಥಾನವಿಲ್ಲ. ಜಾತಿಯ ಭೇದಕ್ಕೆ ಅವಕಾಶವಿಲ್ಲ
ಹಿಂದು ಸಮಾಜಕ್ಕೆ ಹೊಸ ಚೈತನ್ಯ ದೊರಕಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಜತೆಗೆ ಧಾರ್ಮಿಕ ಶ್ರದ್ಧೆ ಮತ್ತು ವಿಶ್ವಾಸವೂ ಇರಬೇಕು. ಡಿ.12 ಮತ್ತು 13ರಂದು ನಿಗದಿಯಾಗಿರುವ ಮುಹೂರ್ತದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎಲ್ಲರೂ ವಿಶ್ವಾಸದಿಂದ ಕೈಜೋಡಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸುವ ಸಂದರ್ಭ ಒಟ್ಟು ಸಂಘಟನಾತ್ಮಕ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಶ್ರೀಗಳು ಸಹಿತ ಎಲ್ಲಾ ಗಣ್ಯಮಾನ್ಯರು ಈ ಕಾರ್ಯಕ್ರಮದಲ್ಲಿ ತಮ್ಮ ಭಾಷಣದಲ್ಲಿ ರಾಜಕೀಯಕ್ಕೆ ಯಾವುದೇ ಸ್ಥಾನವಿಲ್ಲ. ಜಾತಿಯ ಭೇದಭಾವಕ್ಕೂ ಅವಕಾಶವಿಲ್ಲ. ಹಿಂದು ಸಮಾಜಕ್ಕೆ ಶಕ್ತಿ ತುಂಬುವ, ಧಾರ್ಮಿಕ ಶ್ರದ್ಧೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದ ಕಾರ್ಯಕ್ರಮ ಎಂದು ಹೇಳಿರುವುದು ಗಮನಾರ್ಹವಾಗಿದೆ.

ಹೈಲೈಟ್ಸ್:

  • ಡಿ.12ಕ್ಕೆ ಬೆಳಿಗ್ಗೆ ಪುತ್ತೂರ ಒಡೆಯನಿಗೆ ಲಕ್ಷ ಬಿಲ್ವಾರ್ಚನೆ
  • ಸಂಜೆ ಬೊಳುವಾರಿನಿಂದ ವೈಭವದ ಶೋಭಾಯಾತ್ರೆ,
  • ರುದ್ರ ಮಂಟಪಕ್ಕೆ ಜಗದಾಂಬಿಕೆ ಪಾರ್ವತೀ ಸಮೇತರಾದ ಶಿವ ದೇವರ ಆಗಮನ
  • ಸಂತರ ದಿವ್ಯ ಉಪಸ್ಥಿತಿಯಲ್ಲಿ ಕೇಸರಿ ಸಂಗಮ
  • ರಾತ್ರಿ ವಿಶೇಷ ಆಕರ್ಷಣೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಕೇರಳದ ಭಜನ್ ಕಾರ್ಯಕ್ರಮ
  • ಡಿ.13ಕ್ಕೆ ಬೆಳಿಗ್ಗೆ ಸುಪ್ರಭಾತ ಪೂಜಾ ಸೇವೆ
  • ಸಾಮೂಹಿಕ ವಿವಾಹ
  • ಸಂಜೆ ಗಿರಿಜಾ ಕಲ್ಯಾಣೋತ್ಸವ, ಆಕರ್ಷಕ ಸಿಡಿಮದ್ದು ಪ್ರದರ್ಶನ

LEAVE A REPLY

Please enter your comment!
Please enter your name here