ಕಾವು: ರಾಷ್ಟ್ರೀಯ ಹೆದ್ದಾರಿ ಬಳಿ, ಮನೆ ಬಾಗಿಲಲ್ಲೇ ಕಾಣಿಸಿಕೊಂಡ ಕಾಡಾನೆ

0

ದಿನಗಳೆದಂತೆ ಹೆಚ್ಚಾಗುತ್ತಿದೆ ಕಾಡಾನೆ ಉಪಟಳ-ಆತಂಕದಲ್ಲಿ ಜನತೆ


ಕಾವು: ಕಳೆದ ಹಲವು ತಿಂಗಳುಗಳಿಂದ ಕಾಡಾನೆ ಉಪಟಳದಿಂದ ತತ್ತರಿಸುತ್ತಿರುವ ಮಾಡ್ನೂರು, ಕೊಳ್ತಿಗೆ, ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ದಿನಗಳೆದಂತೆ ಕಾಡಾನೆಯ ಉಪಟಳ, ರಂಪಾಟ ಜಾಸ್ತಿಯಾಗುತ್ತಲೇ ಇದ್ದು, ಕೃಷಿಕರ ಬೆಳೆ ನಾಶ ಮಾತ್ರವಲ್ಲದೇ, ಜನರು ಆತಂಕದಲ್ಲಿ ಜೀವನ ನಡೆಸುವ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಅ.4ರಂದು ರಾತ್ರಿ ಮತ್ತು ಅ.5ರಂದು ಬೆಳ್ಳಂಬೆಳಗ್ಗೆ ಕಾಡಾನೆ ಹಲವು ಭಾಗಗಲ್ಲಿ ಜನರಿಗೆ ಕಾಣಿಸಿಕೊಂಡು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

for the video👇

View this post on Instagram

A post shared by Suddi Bidugade (@suddibidugade)


ಅ.4ರಂದು ರಾತ್ರಿ ಕೆಮ್ಮತ್ತಡ್ಕ, ಪೆರ್ನಾಜೆ, ಮಳಿ, ಆನೆಗುಂಡಿ, ಮುಗೇರು, ಗುಡ್ಡಡ್ಕ ಭಾಗಗಲ್ಲಿ ಕಾಡಾನೆ ಲಗ್ಗೆಯ ಬಗ್ಗೆ ಮಾಹಿತಿ ದೊರಕಿದೆ. ಅ.5ರಂದು ಬೆಳಿಗ್ಗೆ ಗಂಟೆ 7.30ರ ಸುಮಾರಿಗೆ ಗುಡ್ಡಡ್ಕ-ಮುಗೇರು ಸಮೀಪದ ಮನೆಯೊಂದರ ಪಕ್ಕದಲ್ಲೇ ಎರಡು ಕಾಡಾನೆಗಳು ಜತೆಯಾಗಿ ಹೋಗುವುದನ್ನು ಅಲ್ಲಿಯ ನಿವಾಸಿಗಳು ಕಣ್ಣಾರೆ ಕಂಡು ಮೊಬೈಲ್ ಮೂಲಕ ಚಿತ್ರಿಕರಿಸಿದ್ದಾರೆ. ಬೆಳಿಗ್ಗೆ 7.45ರ ಸುಮಾರಿಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು-ಸುಳ್ಯ ಬಸ್ಸು ಗುಡ್ಡಡ್ಕ ಬಳಿ ಸಂಚರಿಸುತ್ತಿದ್ದಾಗ ಎರಡು ಕಾಡಾನೆಗಳು ರಸ್ತೆ ದಾಟುತ್ತಿದ್ದು, ಬಸ್ಸನ್ನು ನೋಡಿ ಆನೆ ಜೋರಾಗಿ ಘೀಳಿಟ್ಟಾಗ ಬಸ್ಸಲ್ಲಿದ್ದವರು ಗಾಬರಿಗೊಂಡ ಘಟನೆಯ ವೀಡೀಯೋ ಕೂಡ ವೈರಲ್ ಆಗುತ್ತಿದೆ. ಮಾತ್ರವಲ್ಲದೇ ಅ.4ರ ರಾತ್ರಿ ಹಲವು ಭಾಗಗಳಲ್ಲಿ ಕಾಡಾನೆ ಲಗ್ಗೆ ಇಟ್ಟು ಕೃಷಿಕರ ಬೆಳೆನಾಶ ಮಾಡಿದೆ.


ಪಟಾಕಿ ಮೊರೆ ಹೋದ ಕೃಷಿಕರು:
ರಾತ್ರಿಯಾಗುತ್ತಿದ್ದಂತೆ ಆನೆ ಹಾವಳಿ ಪ್ರದೇಶಗಳಲ್ಲಿ ಪಟಾಕಿ ಸದ್ದು ಕೇಳಲಾರಂಭಿಸುತ್ತದೆ. ಎಲ್ಲಿಯಾದರೂ ತೋಟದಲ್ಲಿ ಆನೆ ಬಂದಿದ್ದರೆ ಪಟಾಕಿ ಸದ್ದಿಗೆ ಓಡಿ ಹೋಗುತ್ತದೆ ಎಂಬ ಮಾಹಿತಿಯಿಂದ ಎಲ್ಲರ ಮನೆಯಲ್ಲೂ ರಾತ್ರಿ ವೇಳೆ ಪಟಾಕಿ ಸದ್ದು ಮಾಡುತ್ತಿದೆ.


ಪಟಾಕಿ ಸದ್ದಿಗೆ ಘೀಲಿಟ್ಟ ಕಾಡಾನೆ:
ಪೆರ್ನಾಜೆ ಕೆಮ್ಮತ್ತಡ್ಕದ ದಯಾನಂದ ಗೌಡರವರ ಮನೆಯಲ್ಲಿ ರಾತ್ರಿ ವೇಳೆ ಕಾಡಾನೆಯ ಭಯಕ್ಕಾಗಿ ಪಟಾಕಿ ಸಿಡಿಸಿದಾಗ ಅಲ್ಲೇ ತೋಟದಲ್ಲಿದ್ದ ಕಾಡಾನೆ ಜೋರಾಗಿ ಘೀಳಿಟ್ಟು ಭಯ ಹುಟ್ಟಿಸಿದ ಘಟನೆಯ ವೀಡಿಯೋ ಕೂಡ ವೈರಲ್ ಆಗುತ್ತಿದೆ.


ಆನೆ ಹಾವಳಿ ಮಾಹಿತಿಗೆ ವಾಟ್ಸಾಪ್ ಗ್ರೂಪ್:
ಇವತ್ತು ಆನೆ ಎಲ್ಲಿಗೆ ಬಂದಿದೆ, ಆನೆ ಯಾರ ತೋಟದಲ್ಲಿದೆ, ಎಲ್ಲೆ ಬೆಳೆ ನಾಶವಾಗಿದೆ, ಅಧಿಕಾರಿಗಳು ಎಲ್ಲಿ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ಆನೆ ಹಾವಳಿ ಭಾಗದ ಸ್ಥಳೀಯರೇ ಸೇರಿಕೊಂಡು ಆನೆ ಮಾಹಿತಿ ಗ್ರೂಪ್ ಮಾಡಿಕೊಂಡು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.


ಕಂಗಾಲಾದ ಜನತೆ-ಕ್ರಮಕ್ಕೆ ಒತ್ತಾಯ:
ಕಾಡಾನೆ ಹಾವಳಿ, ರಂಪಾಟದಿಂದ ಸಾರ್ವಜನಿಕರು ಆತಂಕದಲ್ಲಿದ್ದು, ಅರಣ್ಯ ಇಲಾಖೆಯ ಬಗ್ಗೆ ದಿನದಿಂದ ದಿನಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಆನೆ ಹಾವಳಿ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಬಂದು, ಕಾರ್ಯಾಚರಣೆ ಮಾಡ್ತಾರೆ, ಹೋಗ್ತಾರೆ, ಆದರೆ ಮತ್ತೆ ಅದೇ ದಿನ ರಾತ್ರಿ ಕಾಡಾನೆ ಉಪಟಳ ಮುಂದುವರಿಯುತ್ತದೆ. ಹಾಗಾಗಿ ಅರಣ್ಯ ಇಲಾಖೆಯು ಕಾಡಾನೆಯನ್ನು ಶಾಶ್ವತವಾಗಿ ಕಾಡಿಗಟ್ಟಲು ಬೇಕಾದ ಎಲ್ಲಾ ಅಗತ್ಯ ಕ್ರಮ ವಹಿಸುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಾಯ ಜೋರಾಗುತ್ತಿದೆ.

LEAVE A REPLY

Please enter your comment!
Please enter your name here