ಸುವರ್ಣ ಸಂಭ್ರಮದಲ್ಲಿ ಆರೋಗ್ಯ ಕಾಳಜಿ-ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದಿಂದ ಉಚಿತ ವೈದ್ಯಕೀಯ ಶಿಬಿರ

0

50ನೇ ವರ್ಷದ ನೆನಪಿಗೆ ನಿರಂತರ ಸಮಾಜಮುಖಿ ಚಟುವಟಿಕೆ: ಗೌರಿ ಹೆಚ್.
ಆರಂಭದಲ್ಲೇ ತಪಾಸಣೆ ಮಾಡಿದರೆ ರೋಗ ಗುಣಪಡಿಸಲು ಸಾಧ್ಯ: ಅಂಕೂರ್

ಪುತ್ತೂರು: ಐದು ದಶಕಗಳ ಸೇವಾ ಪಯಣದ ಸುವರ್ಣ ಸಂಭ್ರಮದಲ್ಲಿರುವ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು ತನ್ನ ಸಾಮಾಜಿಕ ಬದ್ಧತೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ನೀಡಿದೆ. ಸುವರ್ಣ ಸಂಭ್ರಮದ ಅಂಗವಾಗಿ ಅ.4ರಂದು ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು.

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಮಂಗಳೂರು, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಮಂಗಳೂರು ಹಾಗೂ ಒರೆಕಲ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಹೃದಯರೋಗ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಸಾಮಾನ್ಯ ವೈದ್ಯಕೀಯ, ಸ್ತ್ರೀ ರೋಗ ಹಾಗೂ ಕ್ಯಾನ್ಸರ್ ವಿಭಾಗಗಳಲ್ಲಿ ತಜ್ಞರಿಂದ ತಪಾಸಣೆ ನಡೆಸಲಾಯಿತು. ಆರೋಗ್ಯ ಸಂರಕ್ಷಣೆ, ಕಾಯಿಲೆಗಳ ಮುಂಜಾಗ್ರತೆ ಹಾಗೂ ಆರೋಗ್ಯಕರ ಜೀವನ ಶೈಲಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನೂ ನೀಡಲಾಯಿತು.

50ನೇ ವರ್ಷದ ನೆನಪಿಗೆ ನಿರಂತರ ಸಮಾಜಮುಖಿ ಚಟುವಟಿಕೆ:
ಶಿಬಿರವನ್ನು ಉದ್ಘಾಟಿಸಿದ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಹೆಚ್. ಮಾತನಾಡಿ, ಸುಮಾರು 3,713 ಸದಸ್ಯರನ್ನು ಹೊಂದಿರುವ ಸಂಘವು ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಪ್ರತೀ ತಿಂಗಳು ವಿವಿಧ ಸಮಾಜಮುಖಿ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಹಿಳೆಯರನ್ನು ಕಾಡುವ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ತಪಾಸಣೆಯ ಮೂಲಕ ನೆರವು ನೀಡುವುದು ಶಿಬಿರದ ಉದ್ದೇಶವಾಗಿದೆ ಎಂದರು. ಮಹಿಳೆಯರಲ್ಲಿ ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರಂಭದಲ್ಲೇ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಕಾಯಿಲೆ ಬರುವವರೆಗೆ ಕಾಯುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಆರಂಭದಲ್ಲೇ ಪತ್ತೆಯಾದರೆ ಚಿಕಿತ್ಸೆಗೆ ಸುಲಭ:
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಂಕೂರ್ ಆರೋಗ್ಯ ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು. ಮಹಿಳೆಯರನ್ನು ಕಾಡುವ ಹಲವು ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಗುಣಪಡಿಸಲು ಸಾಧ್ಯವಿದೆ. ಗರ್ಭಕೋಶ ಸೇರಿದಂತೆ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಅವರು ಮಾಹಿತಿ ನೀಡಿದರು. ಎ.ಜೆ. ಆಸ್ಪತ್ರೆಯ ಡಾ. ಪುನಿತ್ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ರೀಜನಲ್ ಕೋ-ಆರ್ಡಿನೇಟರ್ ರಂಜನ್, ಚಿಕ್ಕಮಗಳೂರು ವಿಶ್ವವಿದ್ಯಾನಿಲಯದ ಉಪನ್ಯಾಸಕ ದೀಕ್ಷಿತ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ಮೋಹಿನಿ ಪಿ. ನಾಯ್ಕ್ ಪ್ರಾರ್ಥಿಸಿದರು. ಉಪಾಧ್ಯಕ್ಷೆ ಇಂದಿರಾ ಸ್ವಾಗತಿಸಿದರು. ನಿರ್ದೇಶಕಿ ಉಷಾ ಮುಳಿಯ ಕಾರ್ಯಕ್ರಮ ನಿರೂಪಿಸಿದರು. ಸಂಘದ ಮಾಜಿ ನಿರ್ದೇಶಕಿ ವತ್ಸಲಾರಾಜ್ಞಿ, ನಿರ್ದೇಶಕರಾದ ಪುಷ್ಪಾವತಿ ಕಳುವಾಜೆ, ದೀಕ್ಷಾ ಪೈ, ವಿಜಯಲಕ್ಷ್ಮೀ, ಜ್ಯೋತಿ ಹೇರಂಬ, ಜಯಶ್ರೀ ಎಸ್. ಶೆಟ್ಟಿ, ಚಂದ್ರಾವತಿ ಕೆ., ರಜನಿ ಆಚಾರ್ಯ ಹಾಗೂ ಸಿಬ್ಬಂದಿ ವರ್ಗದವರು ಶಿಬಿರದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

ತಪಾಸಣೆ, ಚಿಕಿತ್ಸೆಗೆ ಪ್ರತ್ಯೇಕ ವಿಭಾಗ:
ಮಹಿಳೆಯರ ಅನುಕೂಲಕ್ಕಾಗಿ ಶಿಬಿರದಲ್ಲಿ ವಿವಿಧ ತಪಾಸಣೆ ಮತ್ತು ಚಿಕಿತ್ಸಾ ವಿಭಾಗಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಆಗಮಿಸಿದವರು ಮೊದಲು ನೋಂದಣಿ ಮಾಡಿಕೊಂಡು ಬಳಿಕ ಸಂಬಂಧಿಸಿದ ವಿಭಾಗಗಳಿಗೆ ತೆರಳಿ ತಜ್ಞರಿಂದ ತಪಾಸಣೆ ಮಾಡಿಸಿಕೊಳ್ಳಲು ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿ ಸಹಕರಿಸಿದರು. ಹೃದಯರೋಗ, ಸಾಮಾನ್ಯ ಚಿಕಿತ್ಸೆ, ಸಾಮಾನ್ಯ ವೈದ್ಯಕೀಯ, ಸ್ತ್ರೀ ರೋಗ ಮತ್ತು ಕ್ಯಾನ್ಸರ್ ವಿಭಾಗಗಳಿಗೆ ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆಗೊಳಿಸಲಾಗಿತ್ತು.

180ಕ್ಕೂ ಅಧಿಕ ಮಹಿಳೆಯರಿಗೆ ಆರೋಗ್ಯ ತಪಾಸಣೆ
ಬೆಳಗ್ಗಿನಿಂದ ಆರಂಭವಾದ ಉಚಿತ ಆರೋಗ್ಯ ಶಿಬಿರವು ಮಹಿಳೆಯರ ವಿವಿಧ ಕಾಯಿಲೆಗಳ ತಪಾಸಣೆ ಮತ್ತು ವೈದ್ಯಕೀಯ ಸಲಹೆಯೊಂದಿಗೆ ಸಂಜೆಯವರೆಗೂ ನಡೆಯಿತು. 180ಕ್ಕೂ ಅಧಿಕ ಮಹಿಳೆಯರು ಶಿಬಿರದ ಪ್ರಯೋಜನ ಪಡೆದರು.

LEAVE A REPLY

Please enter your comment!
Please enter your name here