ವಿದ್ಯಾ ಆರ್‌.ಗೌರಿ ಅವರಿಗೆ ಅಂತಾರಾಷ್ಟ್ರೀಯ ‘ಫಾರ್‌ ಈಸ್ಟ್‌ ಏಷ್ಯಾ ಲೀಡರ್‌ಶಿಪ್‌ ಅವಾರ್ಡ್‌’

0

ಮಲೇಷ್ಯಾದಲ್ಲಿ ‘ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್’ನ ಪ್ರತಿಷ್ಠಿತ ಗೌರವ ಪ್ರದಾನ

ಪುತ್ತೂರು: ನಗರಸಭೆಯ ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿಯವರಿಗೆ ಮಾಧ್ಯಮ ರಂಗದ ಅಗ್ರಗಣ್ಯ ಸಂಸ್ಥೆಗಳಾದ ‘ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್’ ಜಂಟಿಯಾಗಿ ಆಯೋಜಿಸಿದ್ದ ಪ್ರತಿಷ್ಠಿತ ‘ಫಾರ್‌ ಈಸ್ಟ್ ಏಷ್ಯಾ ಲೀಡರ್‌ಶಿಪ್ ಸಮಿಟ್ ಹಾಗೂ ಲೀಡರ್‌ಶಿಪ್ ಅವಾರ್ಡ್-2026’ ಪ್ರದಾನ ನಡೆದಿದೆ. ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ನಡೆದ ಅಂತರ್ರಾಷ್ಟ್ರೀಯ ಮಟ್ಟದ ಉದ್ಯಮ ಮತ್ತು ನಾಯಕತ್ವ ಸಮಾವೇಶದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾ ಆರ್.ಗೌರಿಯವರ ಪತಿ, ವಿಜಯ ಸುಪಾರಿ ಇಂಡಸ್ಟ್ರೀಸ್‌ನ ಮಾಲಕ ರಾಮ ಭಟ್ ಪತ್ತಡ್ಕ ಈ ಸಂದರ್ಭದಲ್ಲಿ ಜೊತೆಗಿದ್ದರು.


ವಿವಿಧ ಕ್ಷೇತ್ರದ ಉದ್ಯಮಿಗಳು, ನಾಯಕರು ಹಾಗೂ ಉನ್ನತಾಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಮಲೇಷ್ಯಾದ ಭಾರತೀಯ ರಾಯಭಾರಿ ನವೀನ್ ಕುಮಾರ್, ಭೋಗನ್ ಪ್ರೊಡಕ್ಟ್ಸ್ ಟ್ರೇಡಿಂಗ್ ಸಿಇಒ ಡಾ.ವೀರಪ್ಪನ್ ರಾಮನ್, ನ್ಯಾಷನಲ್ ಆರ್ಟಿಸ್ಟ್ ಫೌಂಡೇಶನ್ ಮಲೇಶಿಯಾ ಇದರ ಟ್ರಸ್ಟಿ ಡಾ.ಕನಗರಾಜನ್, ಸ್ಮಾರ್ಟ್ ಕೀ ಇಂಟರ್‌ನ್ಯಾಷನಲ್‌ನ ಕಿರಣ್ ಉಪಾಧ್ಯಾಯ, ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಗದ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ, ಕನ್ನಡಪ್ರಭ ಸಂಪಾದಕ ಜೋಗಿ ಮತ್ತಿತರರು ಉಪಸ್ಥಿತರಿದ್ದರು. ಬಾಂಧವ್ಯ, ಆಡಳಿತಾತ್ಮಕ ದೂರದೃಷ್ಟಿ, ಶೈಕ್ಷಣಿಕ ಹಾಗೂ ನಾಯಕತ್ವದ ಅತ್ಯುತ್ತಮ ಮಾದರಿಗಳನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ.‌


ಜನಪರ ಬದ್ಧತೆಗೆ ಸಂದ ಗೌರವ:
ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಹಾಗೂ ವಾಣಿಜ್ಯ ನಗರಿ ಪುತ್ತೂರಿನ ಸಾರ್ವಜನಿಕ ಜೀವನದಲ್ಲಿ ತಮ್ಮ ವಿಶಿಷ್ಟ ಆಡಳಿತ ವೈಖರಿ, ವೃತ್ತಿಪರ ಕೌಶಲ್ಯ ಹಾಗೂ ನಿಸ್ವಾರ್ಥ ಸಾಮಾಜಿಕ ಸೇವೆಯ ಮೂಲಕ ಮನೆಮಾತಾಗಿರುವ ವಿದ್ಯಾ ಆರ್.ಗೌರಿ ಅವರು ಪುತ್ತೂರು ನಗರಸಭೆಯ ಸದಸ್ಯೆಯಾಗಿ, ಉಪಾಧ್ಯಕ್ಷೆಯಾಗಿ ಕಟ್ಟುನಿಟ್ಟಿನ ಆಡಳಿತ ವೈಖರಿ, ರಾಜಕೀಯ ಪಕ್ವತೆ, ವೈಜ್ಞಾನಿಕ ಯೋಜನಾ ಶಕ್ತಿ ಮತ್ತು ಜನಪರ ಬದ್ಧತೆಯ ಮೂಲಕ ಕ್ಷೇತ್ರ ಮಟ್ಟದಲ್ಲಿ ಪ್ರಬಲ ನಾಯಕತ್ವದ ಭರವಸೆಯಾಗಿ ಹೊರಹೊಮ್ಮಿದ್ದಾರೆ.
ಬಿ.ಕಾಂ, ಎಂ.ಬಿ.ಎ (ಮಾನವ ಸಂಪನ್ಮೂಲ),ಮ್ಯಾಸ್ಟರ್ ಫೆಸಿಲಿಟೇಟರ್ ಇನ್ ಲೀಡರ್‌ಷಿಪ್ ಅಂಡ್ ಹ್ಯೂಮನ್ ರಿಸೋರ್ಸ್ ಡೆವಲಪ್‌ಮೆಂಟ್ ಉನ್ನತ ಪದವಿಗಳನ್ನು ಪಡೆದಿರುವ ಇವರು, ಇಂಡಸ್ ಕಾಲೇಜು ಮತ್ತು ವಿವೇಕಾನಂದ ಕಾನೂನು ಕಾಲೇಜಿನಲ್ಲಿ MBA ವಿದ್ಯಾರ್ಥಿಗಳಿಗೆ ಸಂದರ್ಶಕ ಪ್ರಾಧ್ಯಾಪಕಿಯಾಗಿ, ಡೆಕ್ಕನ್ ಹೆರಾಲ್ಡ್ ಸಂಸ್ಥೆಯ DHIE ಉಪಕ್ರಮದಡಿ ಪುತ್ತೂರು ಮತ್ತು ಮಂಗಳೂರಿನ 20ಕ್ಕೂ ಹೆಚ್ಚು ಶಾಲೆಗಳಲ್ಲಿ ಮೃದು ಕೌಶಲ್ಯ ತರಗತಿಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ವಿವೇಕಾನಂದ ವಿದ್ಯಾವರ್ಧಕ ಸಂಘದ VCET ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕಿಯಾಗಿ ಹಾಗೂ ವಿವೇಕಾನಂದ ವಿದ್ಯಾರ್ಥಿ ನಿಲಯದ ನಿರ್ವಹಣಾ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಇವರ ಕೊಡುಗೆ ಅಪಾರ:
1991-92ರಲ್ಲಿ ರೋಟರಿ-ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆಯಾಗಿ ಅತ್ಯುತ್ತಮ ಅಧ್ಯಕ್ಷೆ ಪ್ರಶಸ್ತಿ ಸೇರಿದಂತೆ 13 ಪ್ರಶಸ್ತಿಗಳನ್ನು ಪಡೆದಿರುವ ಇವರು, ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗಾಗಿ ‘ವಸ್ತ್ರ ನಿಧಿ’ ಹಾಗೂ ಶಾಲಾ ಮಕ್ಕಳಿಗಾಗಿ ‘ಡೀವರ್ಮಿಂಗ್ ಕ್ಯಾಂಪ್’ ಜಾರಿಗೆ ತಂದಿದ್ದರು.ಅಂದು ಇವರು ಆರಂಭಿಸಿದ ಡೀವರ್ಮಿಂಗ್ ಕಾರ್ಯಕ್ರಮ ಇಂದು ಸರ್ಕಾರದ ಆರೋಗ್ಯ ಯೋಜನೆಯ ಭಾಗವಾಗಿರುವುದು ಇವರ ದೂರದೃಷ್ಟಿಗೆ ಸಾಕ್ಷಿ.

LEAVE A REPLY

Please enter your comment!
Please enter your name here