







ಪುತ್ತೂರು: ಕಾಲ ಐದು ದಶಕಗಳತ್ತ ಸಾಗಿದರೂ, ಕಾಲೇಜಿನ ಆವರಣದಲ್ಲಿ ಕಳೆದ ದಿನಗಳ ನೆನಪುಗಳು ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅಂತಹ ಸುವರ್ಣ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸಿದ ಅಪೂರ್ವ ಕ್ಷಣಕ್ಕೆ ಸಂತ ಫಿಲೋಮಿನಾ ಕಾಲೇಜು ಸಾಕ್ಷಿಯಾಯಿತು. 1991ರ ಬಿ.ಎಸ್ಸಿ. ಬ್ಯಾಚ್ನ ಹಿರಿಯ ವಿದ್ಯಾರ್ಥಿಗಳು 35 ವರ್ಷಗಳ ಬಳಿಕ ತಮ್ಮ ಎರಡನೇ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಸಿ ಹಳೆಯ ಸ್ನೇಹ, ಗೌರವ ಮತ್ತು ಆತ್ಮೀಯತೆಯನ್ನು ಮರುಕಳಿಸಿದರು.


ಅ.5.ರಂದು ಕಾಲೇಜಿನ ಪಿಜಿ ಸೆಮಿನಾರ್ ಹಾಲ್ನಲ್ಲಿ ಅತ್ಯಂತ ಸುಂದರ ಹಾಗೂ ಮನೋಜ್ಞವಾಗಿ ನಡೆದ ಈ ಪುನರ್ಮಿಲನ ಕಾರ್ಯಕ್ರಮದಲ್ಲಿ 1991ರ ಬ್ಯಾಚ್ನ ಹಳೆ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೃತ್ತಿ ಹಾಗೂ ಸಾಮಾಜಿಕ ಬದುಕಿನಲ್ಲಿ ವಿವಿಧ ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ಅವರು, ಕಾಲೇಜಿನ ಆವರಣದಲ್ಲಿ ಮತ್ತೆ ವಿದ್ಯಾರ್ಥಿಗಳಂತೆಯೇ ಬೆರೆತು, ತಮ್ಮ ಸುವರ್ಣ ದಿನಗಳನ್ನು ನೆನಪಿಸಿಕೊಂಡರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ| ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ಕಾಲೇಜು ಬದುಕಿತ್ತು; ಬದುಕುತ್ತಿದೆ; ಮುಂದೆಯೂ ಬದುಕಲಿದೆ. ಆದರೆ ಅದಕ್ಕಿಂತ ಮುಖ್ಯವಾದುದು ಪ್ರೀತಿ, ಗೌರವ ಮತ್ತು ಸದ್ಭಾವನೆ. ನಿಮ್ಮಂತಹ ಹಿರಿಯ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸದ್ಭಾವನೆಯಿಂದಲೇ ಕಾಲೇಜು ನಿರಂತರವಾಗಿ ಬೆಳೆಯುತ್ತಿದೆ ಎಂದು ಹೇಳಿ, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅತ್ಯಂತ ಶಿಸ್ತಿನಿಂದ ಹಾಗೂ ಸಮಯಪಾಲನೆಯೊಂದಿಗೆ ಸಂಘಟಿಸಿರುವುದನ್ನು ಶ್ಲಾಘಿಸಿದ ಅವರು, ಅವರ ಶಿಸ್ತು ಮತ್ತು ಸಮಯ ನಿರ್ವಹಣೆಯ ಸೂಕ್ಷ್ಮತೆಯು ಯಾರಿಗಾದರೂ ಮಾದರಿಯಾಗಬಲ್ಲದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೃತ್ತಿ ಸಾಧನೆಗೆ ಗೌರವ:
ಹಿರಿಯ ವಿದ್ಯಾರ್ಥಿಗಳ ವೃತ್ತಿಪರ ಸಾಧನೆಗಳನ್ನೂ ಕಾರ್ಯಕ್ರಮದಲ್ಲಿ ಗುರುತಿಸಲಾಯಿತು. ಡಾ. ಗಿರೀಶ್ ಭಟ್ ಅಜಕ್ಕಳ ಹಾಗೂ ನವೀನ್ ಕುಮಾರ್ ಅವರನ್ನು ಅವರ ವೃತ್ತಿಪರ ಸಾಧನೆಗಳಿಗಾಗಿ ಗೌರವಿಸಲಾಯಿತು. ವೃತ್ತಿಜೀವನದಲ್ಲಿನ ಸಾಧನೆಗಳು ಹಾಗೂ ಪ್ರಗತಿಯನ್ನು ಗುರುತಿಸಿ ವಿವಿಧ ಗೌರವಗಳನ್ನು ನೀಡಿ ಅಭಿನಂದಿಸಲಾಯಿತು. ರೈಲ್ವೆ ಉದ್ಯೋಗದಲ್ಲಿನ ಪದೋನ್ನತಿಯೂ ಸೇರಿದಂತೆ ವೃತ್ತಿಪರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳ ಯಶಸ್ಸನ್ನು ಕಾರ್ಯಕ್ರಮದಲ್ಲಿ ಮೆಚ್ಚುಗೆಯಿಂದ ಸ್ಮರಿಸಲಾಯಿತು.
ನೆನಪುಗಳೊಂದಿಗೆ ಮತ್ತೆ ವಿದ್ಯಾರ್ಥಿಗಳಾದ ಹಿರಿಯ ವಿದ್ಯಾರ್ಥಿಗಳು ಇತ್ತೀಚಿನ ವರ್ಷಗಳಲ್ಲಿ ಕಾಲೇಜಿನ ವಿವಿಧ ಬ್ಯಾಚ್ಗಳ ಹಿರಿಯ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ಒಗ್ಗೂಡಿಸಿಕೊಂಡು ಕಾಲೇಜಿಗೆ ಭೇಟಿ ನೀಡುತ್ತಿರುವುದು ಗಮನಾರ್ಹವಾಗಿದೆ. ಇಂತಹ ಪುನರ್ಮಿಲನಗಳು ಕೇವಲ ಭೇಟಿಗೆ ಸೀಮಿತವಾಗದೆ, ಹಳೆಯ ಸುವರ್ಣ ನೆನಪುಗಳನ್ನು ಮರುಕಳಿಸುವ, ಸ್ನೇಹದ ನಂಟನ್ನು ಗಟ್ಟಿಗೊಳಿಸುವ ಹಾಗೂ ತಾವು ಬೆಳೆದ ಸಂಸ್ಥೆಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಪುನಃ ಜೋಡಿಸುವ ವೇದಿಕೆಗಳಾಗಿವೆ. ವೃತ್ತಿ ಮತ್ತು ಸಾಮಾಜಿಕ ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಕಾಲೇಜಿನ ಆವರಣಕ್ಕೆ ಕಾಲಿಟ್ಟ ಕ್ಷಣ ಅವರು ತಮ್ಮ ಹುದ್ದೆ, ಸ್ಥಾನಮಾನಗಳನ್ನು ಮರೆತು ಮತ್ತೆ ತಮ್ಮ ಕಾಲೇಜು ದಿನಗಳ ವಿದ್ಯಾರ್ಥಿಗಳಾಗಿ, ಸ್ನೇಹಿತರಾಗಿ, ಸಹಪಾಠಿಗಳಾಗಿ ಬೆರೆತದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಇದು ಕೇವಲ ಸನ್ಮಾನವಾಗಿರದೆ, ತಮ್ಮ ಬದುಕಿಗೆ ಜ್ಞಾನ, ಶಿಸ್ತು, ಮೌಲ್ಯ ಮತ್ತು ದಿಕ್ಕು ನೀಡಿದ ಗುರುಗಳೆಡೆಗೆ ಹಳೆಯ ವಿದ್ಯಾರ್ಥಿಗಳು ಸಲ್ಲಿಸಿದ ಕೃತಜ್ಞತೆಯ ಸಂಕೇತವಾಗಿತ್ತು. ಕಾಲೇಜು ದಿನಗಳಲ್ಲಿ ಶಿಕ್ಷಕರಿಂದ ಪಡೆದ ಮಾರ್ಗದರ್ಶನವನ್ನು ಹಲವು ದಶಕಗಳ ಬಳಿಕವೂ ಸ್ಮರಿಸಿ ಗೌರವ ಸಲ್ಲಿಸಿದ ಕ್ಷಣವು ಕಾರ್ಯಕ್ರಮಕ್ಕೆ ವಿಶೇಷ ಭಾವನಾತ್ಮಕ ಸ್ಪರ್ಶ ನೀಡಿತು. ಡಾ ಕೃಷ್ಣಪ್ರಭಾ, ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್ ಮಾಣಿ, ಶಿವನಾಥ ರೈ ಮೆಗಿನಗುತ್ತು, ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಹಾಗೂ ವಾಲೇರಿಯನ್ ಡಿಸೋಜಾ ಕಾರ್ಯಕ್ರಮ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ವಾಣಿ ಹಾಗೂ ಡಾ. ಚಂದ್ರಶೇಖರ್ ಕೆ. ಜಿ. ಪ್ರಾರ್ಥಿಸಿದರು. ಡಾ. ಕೃಷ್ಣಪ್ರಭಾ ಕಾರ್ಯಕ್ರಮ ನಿರ್ವಹಿಸಿದರು. ಶಿವಕುಮಾರ್ ಸ್ವಾಗತಿಸಿದರು. ಶಿವನಾಥ ರೈ ಮೆಗಿನಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಆಶಯ ವಿವರಿಸಿದರು. ಡಾ. ಗಿರೀಶ್ ಭಟ್ ಅಜಕ್ಕಳ ವಂದಿಸಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಪೊನ್ನಪ್ಪ ಅಡ್ಲ್ಯಾಬ್ಸ್, ಕಾಲೇಜಿನ ಪಿಆರ್ಒ ಡಾ| ಭಾರತಿ ಎಸ್. ರೈ, ಉಪಕುಲಸಚಿವ (ಶೈಕ್ಷಣಿಕ) ವಿಪಿನ್ ನಾಯಕ್, ಎನ್ಸಿಸಿ ನೌಕಾ ವಿಭಾಗದ ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್, ಉಪಕುಲಸಚಿವ (ಮೌಲ್ಯಮಾಪನ) ಅಭಿಷೇಕ್ ಸುವರ್ಣ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಹರ್ಷಿತ್ ಕುಮಾರ್ ಉಪಸ್ಥಿತರಿದ್ದರು.
ಒಂದು ಋಣಸ್ಮರಣೆ; ಗುರುಗಳಿಗೆ ಭಾವಪೂರ್ಣ ಗುರುವಂದನೆ
1991ರ ಬಿ.ಎಸ್ಸಿ. ಬ್ಯಾಚ್ನ ಹಳೆಯ ವಿದ್ಯಾರ್ಥಿಗಳು ತಮ್ಮ ಬದುಕಿಗೆ ಜ್ಞಾನ ಮತ್ತು ದಿಕ್ಕು ನೀಡಿದ ಗುರುಗಳಾದ ಪ್ರೊ. ಅಣ್ಣಾಜಿರಾವ್, ಪ್ರೊ. ಹರಿನಾರಾಯಣ ಮಾಡಾವು, ಪ್ರೊ. ವಿಷ್ಣು ಭಟ್, ಡಾ. ಎ.ಪಿ. ರಾಧಾಕೃಷ್ಣ, ಡಾ. ಕೃಷ್ಣಕುಮಾರ್, ಪ್ರೊ. ಗಣೇಶ್ ಭಟ್, ಪ್ರೊ. ಬಾಲಕೃಷ್ಣ, ಪ್ರೊ. ವಸಂತಿ, ಪ್ರೊ. ಇಟಾ ಡಿಸೋಜಾ ಇವರುಗಳನ್ನು ಏಲಕ್ಕಿ ಹಾರ, ಸರಸ್ವತಿ ವಿಗ್ರಹ, ಶಾಲು ಹಾಗೂ ಹಣ್ಣುಗಳನ್ನು ನೀಡಿ ಗುರುವಂದನೆಯೊಂದಿಗೆ ಸನ್ಮಾನಿಸಿದರು. ಗುರುವಂದನೆ ಸ್ವೀಕರಿಸಲು ಅನಾರೋಗ್ಯ ಮತ್ತು ವಯೋಸಹಜ ಕಾರಣಗಳಿಗೆ ಸಮಾರಂಭಕ್ಕೆ ಬರಲಾಗದ ಪ್ರೊ. ಲಕ್ಷ್ಮಿನಾರಾಯಣ ಕಡಂಬಳಿತ್ತಾಯ, ಪ್ರೊ.ಕೇಶವ ಭಟ್, ಪ್ರೊ.ಕಾನ್ಸೆಪ್ಟ ಲೋಬೋ, ಪ್ರೊಸಿರಿಲ್ ಮಥಿಯಾಸ್ ಅವರ ನಿವಾಸಗಳಿಗೆ ಹುಡುಕಿಕೊಂಡು ಹೋದ ಹಿರಿಯ ವಿದ್ಯಾರ್ಥಿಗಳು ಅಲ್ಲಿಯೇ ಗುರುವಂದನೆ ಸಲ್ಲಿಸಿ ಕೃತಾರ್ಥರಾದದ್ದು ವಿಶೇಷವಾಗಿತ್ತು.
ನೆನಪಿನ ನಂಟಿನಲ್ಲಿ ಕಾಲೇಜಿನ ಅಭಿವೃದ್ಧಿಗೆ ರೂ. 2 ಲಕ್ಷ ಕೊಡುಗೆ
ಪುನರ್ಮಿಲನವು ಕೇವಲ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಕಾರ್ಯಕ್ರಮವಾಗಿ ಉಳಿಯದೆ, ತಾವು ಕಲಿತ ಸಂಸ್ಥೆಯ ಮೇಲಿನ ಋಣ ತೀರಿಸುವ ಸಾರ್ಥಕ ಸಂದರ್ಭವಾಗಿಯೂ ಪರಿಣಮಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 1991ರ ಬ್ಯಾಚ್ನ ಹಿರಿಯ ವಿದ್ಯಾರ್ಥಿಗಳು ಒಟ್ಟಾಗಿ ರೂ. 2ಲಕ್ಷವನ್ನು ಕಾಲೇಜಿನ ಅಭಿವೃದ್ಧಿ ಕಾರ್ಯಗಳಿಗಾಗಿ ದೇಣಿಗೆಯಾಗಿ ನೀಡಿದರು. ತಾವು ವಿದ್ಯಾಭ್ಯಾಸ ಪಡೆದ ಸಂಸ್ಥೆಯ ಅಭಿವೃದ್ಧಿಗೆ ದಶಕಗಳ ಬಳಿಕವೂ ಕೈಜೋಡಿಸಿದ ಹಿರಿಯ ವಿದ್ಯಾರ್ಥಿಗಳ ಈ ಕೊಡುಗೆ ಕಾಲೇಜಿನ ಮೇಲಿನ ಅವರ ಪ್ರೀತಿ, ಕೃತಜ್ಞತೆ ಹಾಗೂ ಸದ್ಭಾವನೆಯ ಪ್ರತೀಕವಾಗಿ ಮೂಡಿಬಂತು.










