







ನಿತ್ಯಜೀವನದಲ್ಲಿ ಯೋಗ ಆರೋಗ್ಯಕ್ಕೆ ಸಹಕಾರಿ – ಡಾ. ಶಾಂತಾ


ಪುತ್ತೂರು: ನಿತ್ಯಜೀವನದಲ್ಲಿ ತಾಯಂದಿರು ಯೋಗವನ್ನು ಅನುಷ್ಠಾನಗೊಳಿಸಿದರೆ ಆರೋಗ್ಯವಂತರಾಗುವುದರೊಂದಿಗೆ ಮಾನಸಿಕ ಒತ್ತಡಗಳಿಂದ ಮುಕ್ತರಾಗಬಹುದು ಎಂದು ಸರ್ಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ, ಯೋಗ ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ. ಶಾಂತಾ ಪುತ್ತೂರು ಹೇಳಿದರು.




ಅವರು ಅ.2ರಂದು ಪುತ್ತೂರಿನ ಕಲ್ಲೇಗದ ಭಾರತ ಮಾತಾ ಕಲಾಮಂದಿರದಲ್ಲಿ ಏರ್ಪಡಿಸಲಾದ ಮಾತೃವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತ್ರಾವತಿ ವಲಯದ ಪುತ್ತೂರು ಕಲ್ಲೇಗ, ತೆಂಕಿಲ, ಪಾಂಗಳಾಯಿ ಶಾಖೆಗಳ ನೇತೃತ್ವದಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿತ್ತು. ಜಿಲ್ಲಾ ಸಹಸಂಚಾಲಕ ಲೋಕೇಶ್ ಮುಖ್ಯಭಾಷಣ ಮಾಡಿ, ಮನೆಯಲ್ಲಿ ಆನಂದ ನೆಲೆಸುವುದು ತಾಯಂದಿರ ತ್ಯಾಗದಿಂದ. ಮಾತೆಯರನ್ನು ಸಮಾಜ ಗೌರವಿಸುವುದರಿಂದ ಸುಖೀ ಸಮಾಜ ನಿರ್ಮಾಣವಾಗುತ್ತದೆ ಎಂದರು. ಶಿಕ್ಷಕಿ ಅರ್ಚನಾ ಅಧ್ಯಕ್ಷತೆ ವಹಿಸಿದ್ದರು.
ಮೇಘನಾ ಸ್ವಾಗತಿಸಿ, ದೀಪಿಕಾ ನಿರೂಪಿಸಿ, ಚಂದ್ರಲೇಖಾ ವಂದಿಸಿದರು. ಮಾತೆಯರು ಭಾರತಮಾತೆಗೆ ಅರ್ಚನೆ ಮಾಡಿ ಮಾತೃಭೋಜನದಲ್ಲಿ ಪಾಲ್ಗೊಂಡರು.










