ವಿಚಾರಣೆ ವೇಳೆ ಕೋರ್ಟ್‌ನಿಂದ ಪರಾರಿಯಾಗಲು ಯತ್ನ : ಆರೋಪಿ ಜಯೇಶ್‌ಗೆ 2 ವರ್ಷಗಳ ಕಾರಾಗೃಹ ಶಿಕ್ಷೆ

0

ಪುತ್ತೂರು:ಕೊಲೆ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದ ವೇಳೆ ನ್ಯಾಯಾಲಯದಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದ ಆರೋಪ ಸಾಬೀತಾಗಿ ಅಪರಾಧಿಗೆ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯವು ಎರಡು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.ಸಿರಿಬಾಗಿಲು ನಿವಾಸಿ ಜಯೇಶ್ ಅಲಿಯಾಸ್ ಜಯೇಶ್ ಕಾಂತ್ ಎಸ್., ಶಾಹಿರ್ ಅಲಿಯಾಸ್ ಶಾಕಿರ್ (41ವ) ಶಿಕ್ಷೆಗೆ ಗುರಿಯಾದ ಅಪರಾಧಿ.


ಮೂಲತ: ಕಡಬ ತಾಲೂಕಿನ ಶಿರಾಡಿ ನಿವಾಸಿಯಾಗಿರುವ ಜಯೇಶ್,2008ರಲ್ಲಿ ತನ್ನ ದೊಡ್ಡಪ್ಪನ ಮಗ ಲೋಹಿತ್‌ರವರ ಪತ್ನಿ ಸೌಮ್ಯ ಮತ್ತು ಆಕೆಯ ಮೂರು ವರ್ಷ ಪ್ರಾಯದ ಮಗು ಜಿಷ್ಣುವನ್ನು ಕೊಲೆ ಮಾಡಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ.


ಕೇರಳದಲ್ಲಿ ಬಂಧನ:
ಕೊಲೆ ಕೃತ್ಯದ ಬಳಿಕ ಪರಾರಿಯಾಗಿದ್ದ ಜಯೇಶ್ ನಾಲ್ಕು ವರ್ಷಗಳ ಕಾಲ ಕೇರಳದಲ್ಲಿ ತಲೆಮರೆಸಿಕೊಂಡಿದ್ದ. 10-10-2012ರಲ್ಲಿ ಕೇರಳದಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದ. ಕೇರಳದ ಅಲಪುರಂ ಜಿಲ್ಲೆಯಲ್ಲಿ ನೆಲೆಸಿದ್ದ ಆತ ಅಲ್ಲಿ ಪತ್ನಿಯೊಂದಿಗೆ ಜಗಳವಾಡಿ ತೆಂಗಿನ ಮರ ಹತ್ತಿ ಕುಳಿತ್ತಿದ್ದ. ಈ ವಿಚಾರ ತಿಳಿದು ಅಲ್ಲಿಗೆ ಆಗಮಿಸಿದ್ದ ಪೊಲೀಸರು ಆತನನ್ನು ಮರದಿಂದ ಕೆಳಗಿಳಿಸಿ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿ ಆತನನ್ನು ವಿಚಾರಣೆ ಮಾಡಿದಾಗ ಆತ ಶಿರಾಡಿಯಲ್ಲಿ ತಾಯಿ, ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ಆರೋಪಿ ಎಂದು ತಿಳಿದು ಬಂದಿತ್ತು. ಕೇರಳ ಪೊಲೀಸರ ಅತಿಥಿಯಾಗಿದ್ದ ಆರೋಪಿಯನ್ನು ಬಳಿಕ ಪುತ್ತೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡು ಶಿರಾಡಿಯ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಬಂಧಿಸಿ ಕರೆತಂದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೇರಳದಲ್ಲಿ ಮುಸ್ಲಿಂ ಯುವತಿಯೋರ್ವರನ್ನು ಪ್ರೀತಿಸಿ ಮದುವೆಯಾಗಿದ್ದ ಜಯೇಶ್ ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಎಂದು ವರದಿಯಾಗಿತ್ತು.


ಪರಾರಿಯಾಗಲು ಯತ್ನಿಸಿದ್ದ:
ತಾಯಿ, ಮಗುವಿನ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ವಿಚಾರಣೆಗಾಗಿ ಮಂಗಳೂರು ಕಾರಾಗೃಹದಿಂದ 5-4-2016ರಂದು ಪುತ್ತೂರು ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಕರೆ ತಂದು ಸಾಕ್ಷಿ ವಿಚಾರಣೆ ನಡೆಯುತ್ತಿದ್ದಾಗ ಕಟಕಟೆಯಲ್ಲಿದ್ದ ಆರೋಪಿ ದಿಢೀರ್ ಕಟಕಟೆಯ ಬಲಬದಿಯಿಂದ ಮೇಲಕ್ಕೆ ಜಿಗಿದು ಅಲ್ಲಿದ್ದವರು ನೋಡನೋಡುತ್ತಿದ್ದಂತೆಯೇ ಕೋರ್ಟಿನಿಂದ ಹೊರಗೆ ಬಂದು ಪರಾರಿಯಾಗಲು ಯತ್ನಿಸಿದ್ದ. ರಸ್ತೆಯಲ್ಲಿ ಓಡುತ್ತಾ ಮಿನಿ ವಿಧಾನ ಸೌಧದ ಕಡೆ ಓಡುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಕಡಬದ ಪೊಲೀಸ್ ಸಿಬಂದಿ ಮಹೇಶ್ ಹಾಗೂ ನ್ಯಾಯವಾದಿಯೊಬ್ಬರು ಆತನನ್ನು ಹಿಡಿದುಕೊಂಡರು. ಅದೇ ವೇಳೆ ಸಾರ್ವಜನಿಕರೂ ಸೇರಿಕೊಂಡು ಆತನನ್ನು ಹಿಡಿದು ನ್ಯಾಯಾಲಯಕ್ಕೆ ಕರೆ ತಂದಿದ್ದರು.ಈ ಸಂದರ್ಭದಲ್ಲಿ ಆತ ಒಂದು ರೀತಿಯಲ್ಲಿ ಬೆದರಿಕೆಯೊಡ್ಡುವ ರೀತಿಯಲ್ಲಿ ವರ್ತಿಸಿದ್ದ. ಈ ಘಟನೆಯ ಕುರಿತು ಪುತ್ತೂರು ನ್ಯಾಯಾಲಯದಿಂದ ಬಂದ ಮಾಹಿತಿ ಮತ್ತು ಈತನನ್ನು ಜಿಲ್ಲಾ ಕಾರಾಗೃಹದಿಂದ ಪುತ್ತೂರಿಗೆ ಕರೆ ತಂದ ಪೊಲೀಸರ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಜಯೇಶ್ ಯಾನೆ ಶಾಹೀರ್ ಯಾನೆ ಶಾಕೀರ್‌ನ ವಿರುದ್ಧ ಐಪಿಸಿ ಸೆಕ್ಷನ್ 224ರ ಪ್ರಕಾರ ಅಭಿರಕ್ಷಾಲಯದಿಂದ ಓಡಲೆತ್ನಿಸಿದ ಪ್ರಕರಣ ದಾಖಲಾಗಿತ್ತು.ಪುತ್ತೂರು ನಗರ ಠಾಣೆಯ ಉಪನಿರೀಕ್ಷಕರಾಗಿದ್ದ ಖಾದರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಽಶರಾದ ಪ್ರಕೃತಿ ಕಲ್ಯಾಣಪುರ್ ಅವರು, ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಅಪರಾಽ ಜಯೇಶ್ ಯಾನೆ ಜಯೇಶ್ ಕಾಂತ್ ಯಾನ್ ಶಾಹಿರ್ ಅಲಿಯಾಸ್ ಶಾಕಿರ್‌ಗೆ ಎರಡು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಽಸಿ ಆದೇಶಿಸಿದರು.ಪ್ರಾಸಿಕ್ಯೂಶನ್ ಪರ ಸಹಾಯಕ ಸರಕಾರಿ ಅಭಿಯೋಜಕ ಮನೋಜ್ ಕುಮಾರ್ ವಾದಿಸಿದ್ದರು.


ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣದಲ್ಲಿ 5 ವರ್ಷ ಶಿಕ್ಷೆ:
ಶಿರಾಡಿಯಲ್ಲಿ ತಾಯಿ,ಮಗುವಿನ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಜಯೇಶ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು ಅಲ್ಲಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರ ಕಚೇರಿಗೆ ಕರೆ ಮಾಡಿ, ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಂಡದವನೆಂದು ಹೇಳಿಕೊಂಡು 100 ಕೋಟಿ ರೂ.ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ಬಾಂಬ್ ಸ್ಪೋಟ ನಡೆಸಿ ಗಡ್ಕರಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬೆದರಿಕೆ ಹಿನ್ನೆಲೆಯಲ್ಲಿ ನಾಗ್ಪುರ ಪೊಲೀಸರು ಗಡ್ಕರಿ ಅವರ ನಿವಾಸ ಮತ್ತು ಕಚೇರಿಗಳಿಗೆ ಬಿಗಿ ಭದ್ರತೆ ಒದಗಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.ಈ ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಸಹ ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು.


ತನಿಖೆ ಕೈಗೊಂಡಿದ್ದ ನಾಗ್ಪುರ ಪೊಲೀಸರು ಹಿಂಡಲಗಾ ಜೈಲಿಗೆ ಭೇಟಿ ನೀಡಿ ಜಯೇಶ್‌ನ ವಿಚಾರಣೆ ನಡೆಸಿದ್ದರು. ಈ ವೇಳೆ ಜಯೇಶ್‌ನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಒಂದು ಸೆಲ್ ಫೋನ್ ಮತ್ತು ಎರಡು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಜಯೇಶ್ ಪೂಜಾರಿಯಿಂದ ಒಂದು ಡೈರಿಯನ್ನು ವಶಪಡಿಸಿಕೊಳ್ಳಲಾಗಿದ್ದು ಅದರಲ್ಲಿ ಗಡ್ಕರಿ ಕಚೇರಿಯ ದೂರವಾಣಿ ಸಂಖ್ಯೆಗಳು ದಾಖಲಾಗಿದ್ದವು. ಈ ಸಂಖ್ಯೆಯನ್ನು ಆತನ ಸ್ನೇಹಿತೆ ನೀಡಿದ್ದಾಳೆಂದು ಹೇಳಲಾಗಿದೆ.ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಬೆಂಗಳೂರಿನ ನಾಲ್ವರೊಂದಿಗೆ ತಾನು ಸಂಪರ್ಕದಲ್ಲಿದ್ದೆ ಎಂದು ಜಯೇಶ್ ವಿಚಾರಣೆ ವೇಳೆ ಹೇಳಿ ತಪ್ಪೊಪ್ಪಿಕೊಂಡಿದ್ದ. ಮಹಾರಾಷ್ಟ್ರ ಪೊಲೀಸರು ಈ ಮಾಹಿತಿಯನ್ನು ಎನ್‌ಐಎ ಜತೆ ಹಂಚಿಕೊಂಡಿದ್ದರು.ಇದರಂತೆ ಜಯೇಶ್ ಹೆಸರಿಸಿರುವ ನಾಲ್ವರ ವಿರುದ್ಧ ಎನ್‌ಐಎ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಪೊಲೀಸರ ಪ್ರಕಾರ ಜಯೇಶ್ ಪೂಜಾರಿ ಹೆಸರು ಮಂಗಳೂರು ಬಾಂಬ್ ಸ್ಪೋಟ ಪ್ರಕರಣದಲ್ಲಿಯೂ ಕೇಳಿಬಂದಿದೆ. ವಿವಿಧ ಕಲಂಗಳ ಅಡಿ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಜಯೇಶ್ ತಪ್ಪಿತಸ್ಥನೆಂದು ತೀರ್ಪು ನೀಡಿದ ನಾಗಪುರ ನ್ಯಾಯಾಲಯ 5 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.ಇದೀಗ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಪರಾರಿಯಾಗಲು ಯತ್ನಿಸಿದ್ದ ಪ್ರಕರಣದಲ್ಲಿ ಆಪಾದಿತನಿಗೆ 2 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here