







ಪುತ್ತೂರು: ಆಸರೆ ಇಲ್ಲದೆ ಜೀವನ ನಡೆಸುತ್ತಿದ್ದ ಸುಮಾರು 60 ವರ್ಷ ವಯಸ್ಸಿನ ಲಕ್ಷ್ಮಣ ಭಂಡಾರಿ ಎಂಬ ನಿರ್ಗತಿಕ ವ್ಯಕ್ತಿಯನ್ನು ಮಂಗಳೂರಿನ ಪಚ್ಚನಾಡಿ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ದಾಖಲಿಸಿ ಮಾನವೀಯತೆ ಕಾರ್ಯಕ್ಕೆ ಪಾತ್ರರಾದ ಸಂಗತಿ ಪುತ್ತೂರಿನಲ್ಲಿ ನಡೆದಿದೆ.


ಸ್ಥಳೀಯ ಪೊಲೀಸ್ ಇಲಾಖೆಯ ಸಿಬ್ಬಂದಿ ಚೇತನ್ ಅವರು ಈ ವ್ಯಕ್ತಿಯ ಪರಿಸ್ಥಿತಿಯ ಬಗ್ಗೆ ಪುತ್ತೂರಿನ ಉಮೇಶ್ ನಾಯಕ್ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು.



ಮಂಗಳೂರಿನ ಪಚ್ಚನಾಡಿ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಲಕ್ಷ್ಮಣ್ ಸದಲಗಿ ಅವರ ನೇತೃತ್ವದಲ್ಲಿ ಕೇಂದ್ರದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣ ಸ್ಪಂದಿಸಿ, ಲಕ್ಷ್ಮಣ ಭಂಡಾರಿ ಅವರನ್ನು ಸುರಕ್ಷಿತವಾಗಿ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದು ದಾಖಲಿಸುವ ಕಾರ್ಯ ನೆರವೇರಿಸಿದರು.
ಈ ಕಾರ್ಯದಲ್ಲಿ ಅಧೀಕ್ಷಕ ಲಕ್ಷ್ಮಣ್ ಸದಲಗಿ, ಮಹಿಳಾ ವಾರ್ಡನ್ ಶೈಲಜಾ, ಸ್ಟಾಫ್ ನರ್ಸ್ ಗಿರೀಶ್, ಭದ್ರತಾ ಸಿಬ್ಬಂದಿಗಳಾದ ಪ್ರದೀಪ್ ಹಾಗೂ ಮಣಿಕಂಠ, ವಾಹನ ಚಾಲಕ ಸಾಯಿ ಕುಮಾರ್ ಹಾಗೂ ಸ್ಥಳೀಯ ಉದ್ಯಮಿಗಳು ಉಪಸ್ಥಿತರಿದ್ದು ಈ ಕಾರ್ಯಕ್ಕೆ ಸಹಕರಿಸಿದರು.
ಅಧೀಕ್ಷಕ ಲಕ್ಷ್ಮಣ್ ಸದಲಗಿ ಅವರ ಮಾರ್ಗದರ್ಶನದಲ್ಲಿ ಪಚ್ಚನಾಡಿ ಕೇಂದ್ರದ ಇಡೀ ತಂಡ ಅತ್ಯಂತ ಮುತುವರ್ಜಿಯಿಂದ ಕರ್ತವ್ಯ ನಿರ್ವಹಿಸಿ, ನಿರಾಶ್ರಿತ ವ್ಯಕ್ತಿಗೆ ಸೂಕ್ತ ಆಸರೆ ಕಲ್ಪಿಸುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸಕಾಲಿಕ ನೆರವು ನೀಡಿತು. ತಂಡದ ಈ ಮಾನವೀಯ ಸೇವೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.










