ನೆಕ್ಕಿಲಾಡಿಯಲ್ಲಿ 13 ಕೋ.ರೂ. ಚತುಷ್ಪಥ ರಾಜ್ಯ ಹೆದ್ದಾರಿಗೆ ಶಂಕುಸ್ಥಾಪನೆ

0

ಇತಿಹಾಸ ಪುಟದಲ್ಲಿ ದಾಖಲಾಗುವ ಅಭಿವೃದ್ಧಿ ಕಾರ್ಯ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಇತಿಹಾಸ ಪುಟದಲ್ಲಿ ದಾಖಲಾಗಿ ಉಳಿಯುವಂತಹ ಅಭಿವೃದ್ಧಿ ಕಾಮಗಾರಿಗಳು ನನ್ನ ಶಾಸಕತ್ವದ ಅವಧಿಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿದ್ದು, 30ರಿಂದ 40 ವರ್ಷಗಳಷ್ಟು ಕಾಲ ಯಾವುದೇ ನಿರ್ವಹಣೆಯಿಲ್ಲದೆ ಬಾಳಿಕೆ ಬರುವಂತಹ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಬೊಳುವಾರು- 34 ನೆಕ್ಕಿಲಾಡಿ ರಾಜ್ಯ ಹೆದ್ದಾರಿಯಲ್ಲಿ ಬೊಳಂತಿಲ- 34 ನೆಕ್ಕಿಲಾಡಿ ತನಕ 13 ಕೋ.ರೂ. ವೆಚ್ಚದಲ್ಲಿ ನಡೆಯಲಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.


ಬೊಳಂತಿಲದಿಂದ ನೇರವಾಗಿ 34 ನೆಕ್ಕಿಲಾಡಿಯ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್‌ನ ಬಳಿ ನೇರವಾಗಿ ಈ ರಸ್ತೆಯನ್ನು ಜೋಡಿಸಬೇಕೆಂಬುದು ನನ್ನ ಕನಸಿತ್ತು. ಆದರೆ ಅಲ್ಲಿ ಕೆಲವು ಖಾಸಗಿ ಜಾಗದವರ ಆಕ್ಷೇಪಣೆಗಳಿರುವುದರಿಂದ ಯೋಜನಾ ನಕ್ಷೆಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು. ಬೊಳುವಾರು- 34 ನೆಕ್ಕಿಲಾಡಿ ರಾಜ್ಯ ಹೆದ್ದಾರಿಯು ಮುಕ್ಕಾಲು ಭಾಗ ಈಗ ಚತುಷ್ಪಥಗೊಂಡು ಕಾಂಕ್ರೀಟ್ ಕಾಮಗಾರಿ ನಡೆದಿದೆ. ಈ ಹೆದ್ದಾರಿಗೆ ಏಳೂವರೆ ಕೋ.ರೂ. ಅನುದಾನದಲ್ಲಿ ದಾರಿ ದೀಪ ಕಾಮಗಾರಿ ನಡೆಯಲಿದೆ. ಪ್ರಮುಖ ಜಂಕ್ಷನ್‌ಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪವನ್ನು ಅಳವಡಿಸಲಾಗುವುದು. ಬೊಳುವಾರಿನಿಂದ ಹಿಡಿದು 34 ನೆಕ್ಕಿಲಾಡಿಯವರೆಗೂ ದಾರಿ ದೀಪದ ವ್ಯವಸ್ಥೆ ಆಗಲಿದೆ. ಹೆದ್ದಾರಿ ಬದಿ ಹಸಿರೀಕರಣಗೊಳಿಸುವ ಉದ್ದೇಶದಿಂದ ಹೆದ್ದಾರಿಯ ಇಕ್ಕೆಡಗಳಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕೆಲಸ ನಡೆದಿದೆ ಎಂದರು.


ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ರಾಜರಾಮ್ ಕೆ.ಬಿ. ಮಾತನಾಡಿ, ಶಾಸಕರು ಆದ್ಯತೆ ಮೇರೆಗೆ ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದು, ತಾಲೂಕಿಗೆ ಸರಕಾರಿ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಸುವ ಮೂಲಕ ಇಲ್ಲಿನ ಮತದಾರರ ಬೇಡಿಕೆಯನ್ನು ಈಡೇರಿಸಿದ್ದಾರೆ. ಇದು ರೋಗಿಗಳಿಗೆ ವರದಾನವಾಗಲಿದ್ದು, ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಅನ್ನದ ಬಟ್ಟಲು ಆಗಲಿದೆ. ವಿರೋಧ ಪಕ್ಷದವರಿಗೆ ಪುತ್ತೂರಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸಹಿಸಲಾಗದೇ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸುವುದೇ ಕೆಲಸವಾಗಿದೆ ಎಂದರು.


ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಪ್ರಮುಖರಾದ ಕೆ. ರಾಧಾಕೃಷ್ಣ ನಾಕ್, ಇಸಾಕ್ ನೆಕ್ಕಿಲಾಡಿ, ಜಯಪ್ರಕಾಶ್ ಶೆಟ್ಟಿ ಬದಿನಾರು, ಶೇಖಬ್ಬ, ರೂಪೇಶ್ ರೈ ಅಲಿಮಾರ್, ಕಲಂದರ್ ಶಾಫಿ, ಉಲ್ಲಾಸ್, ರಾಜೇಶ್ ರೈ, ಮಜೀದ್ ಪಿ.ಟಿ. ಜಯಶೀಲ ಮತ್ತಿತರರು ಉಪಸ್ಥಿತರಿದ್ದರು.ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್ ಸ್ವಾಗತಿಸಿದರು. ಭೂ ನ್ಯಾಯ ಮಂಡಳಿ ಸದಸ್ಯ ಅಬ್ದುಲ್ ರಹಿಮಾನ್ ಯುನಿಕ್ ವಂದಿಸಿದರು.

LEAVE A REPLY

Please enter your comment!
Please enter your name here