







ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಪೊದೆಗಳು ಹಾಗೂ ಮುಳ್ಳುಕಂಠಿಗಳು ದಟ್ಟವಾಗಿ ಆವರಿಸಿಕೊಂಡಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಪ್ರತಿನಿತ್ಯ ಭೀತಿಯಲ್ಲಿಯೇ ಸಂಚರಿಸುವಂತಾಗಿದೆ. ವಿಶೇಷವಾಗಿ ಒಳಮೊಗ್ರು ಗ್ರಾಮದ ಬೊಳ್ಳಾಡಿ – ರಾಜಮಾಡ ರಸ್ತೆಯ ಎರಡೂ ಬದಿಗಳಲ್ಲಿ ಗಿಡ-ಗಂಟಿಗಳು ಅತಿಯಾಗಿ ಬೆಳೆದು ರಸ್ತೆಯನ್ನೇ ಆಕ್ರಮಿಸಿಕೊಂಡಿವೆ. ಇದರಿಂದಾಗಿ ಪಾದಚಾರಿಗಳಿಗೆ ನಡೆದಾಡಲು ಜಾಗವೇ ಇಲ್ಲದಂತಾಗಿದೆ. ಕಿರಿದಾದ ಈ ರಸ್ತೆಯಲ್ಲಿ ಎದುರಿನಿಂದ ಅಥವಾ ಹಿಂಬದಿಯಿಂದ ವಾಹನಗಳು ಬಂದಾಗ, ಪಾದಚಾರಿಗಳು ಬದಿಗೆ ಸರಿಯಲು ಜಾಗವಿಲ್ಲದೆ ಕಷ್ಟಪಡುವಂತಾಗಿದೆ.


ಇಷ್ಟೇ ಅಲ್ಲದೆ, ಗ್ರಾಮದ ಉರ್ವ ರಸ್ತೆ, ಡಿಂಬ್ರಿ ರಸ್ತೆ ಹಾಗೂ ಬರಮೇಲು ರಸ್ತೆಗಳ ಬದಿಯಲ್ಲೂ ಪೊದೆಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ಪ್ರತಿನಿತ್ಯ ಇದೇ ರಸ್ತೆಯಲ್ಲಿ ಶಾಲೆಗೆ ತೆರಳುವ ಪುಟ್ಟ ಮಕ್ಕಳು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಬದಿಯ ಪೊದೆಗಳಿಂದಾಗಿ ಮರೆಯಲ್ಲಿದ್ದ ವಾಹನಗಳು ತಕ್ಷಣಕ್ಕೆ ಕಾಣಿಸದೆ ಅಪಘಾತಗಳು ಸಂಭವಿಸುವ ಭೀತಿ ಎದುರಾಗಿದೆ. ಅಲ್ಲದೆ, ರಸ್ತೆ ಬದಿಯ ಪೊದೆಗಳಲ್ಲಿ ವಿಷಜಂತುಗಳ ಹಾವಳಿಯೂ ಹೆಚ್ಚಾಗಿದ್ದು, ಪಾದಚಾರಿಗಳ ಸುರಕ್ಷತೆಗೆ ಕಂಠಕವಾಗಿ ಪರಿಣಮಿಸಿದೆ. ಅಪಘಾತಗಳು ಅಥವಾ ಅಪಾಯಗಳು ಸಂಭವಿಸುವ ಮುನ್ನವೇ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಪಾದಚಾರಿಗಳ ಮತ್ತು ಶಾಲಾ ಮಕ್ಕಳ ಹಿತದೃಷ್ಟಿಯಿಂದ ಈ ಎಲ್ಲಾ ರಸ್ತೆಗಳ ಬದಿಯಲ್ಲಿರುವ ಪೊದೆಗಳನ್ನು ತಕ್ಷಣವೇ ತೆರವುಗೊಳಿಸಿ, ಸಾರ್ವಜನಿಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.













