







ಪುತ್ತೂರು: ಕೇಂದ್ರ ಸರಕಾರ ರೈತರ ಸದೂದ್ದೇಶದಿಂದ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ವರ್ಷ ತಮಗೆ ವಿಮಾ ಪರಿಹಾರ ಮೊತ್ತ ಬರುವ ಮನೋಭಾವನೆ ಬಹಳಷ್ಟು ರೈತರಲ್ಲಿದೆ. ಈಗಿನ ಪರಿಸ್ಥಿತಿಯಲ್ಲಿ ವಿಮೆ ಕಟ್ಟಿದ ಮೊತ್ತವೂ ಬರುವುದಿಲ್ಲ ಎಂಬ ಭಾವನೆ ರೈತರಲ್ಲಿದೆ. ರೈತರು ಪಾವತಿಸಿದ ವಿಮಾ ಮೊತ್ತ ಎಲ್ಲಿ ಹೋಗುತ್ತಿದೆ. ಹವಾಮಾನ ಆದಾರಿತ ಬೆಳೆ ವಿಮೆಯಲ್ಲಿ ಮೇಲ್ನೋಟಕ್ಕೆ ಷಡ್ಯಂತ್ರ, ಭ್ರಷ್ಠಾಚಾರ ನಡೆಯುತ್ತಿದೆ. ಇದರ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದರು.


ಅ.8ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ ಜಿಲ್ಲೆಯಲ್ಲಿ ರೂ,294 ಕೋಟಿ ವಿಮಾ ಮೊತ್ತ ಪಾವತಿಸಿದೆ. 840ಕೋಟಿ ಪರಿಹಾರ ಮೊತ್ತ ಬರಬೇಕಾಗಿದ್ದು ರೈತರಿಗೆ ನೀಡಿದ ವಿಮಾ ಪರಿಹಾರ ಮೊತ್ತವನ್ನು ಬಹಿರಂಗಪಡಿಸಬೇಕು. ಪಾವತಿಸಿದ ವಿಮಾ ಮೊತ್ತದಲ್ಲಿ ಎಷ್ಟು ಪ್ರಮಾಣ ಪರಿಹಾರ ಮೊತ್ತವಾಗಿ ಪಾವತಿಸಲಾಗಿದೆ. ಯಾವ ಮಾನದಂಡ ಆಧಾರದಲ್ಲಿ ಒಂದೊಂದು ಗ್ರಾಮಕ್ಕೆ ಒಂದೊಂದು ರೀತಿಯಲ್ಲ ವಿಮಾ ಪರಹಾರ ಪಾವತಿಸಲಾಗಿದೆ ಎಂದು ಮಾಧ್ಯಮಗಳ ಮೂಲಕ ಅಂಕ ಅಂಶ ಸಹಿತ ಜನರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.



ಹವಾಮಾನ ಆಧಾರಿತ ಬೆಳೆ ವಿಮೆಯ ಪರಿಹಾರ ವಿತರಣೆಯಲ್ಲಿ 2023-24ರ ತನಕ ದ.ಕ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆ ನಂತರದಲ್ಲಿ ಟರ್ಮ್ ಶೀಟ್ ಬದಲಾವಣೆಯ ನಂತರ ದ.ಕ ಜಿಲ್ಲೆಯಲ್ಲಿ ಈ ಸಮಸ್ಯೆ ಉಂಟಾಗಿದೆ. ವಿಮಾ ಮೊತ್ತ ಪಾವತಿಸಿದ ರೈತರಿಗೆ ವಿಮಾ ಪರಿಹಾರ ದೊರಯದೇ ಇದ್ದಾಗ ಮುಂದೆ ವಿಮಾ ಮೋತ್ತ ಪಾವತಿಸಬೇಕಾ ಎಂಬ ಪ್ರಶ್ನೆ ರೈತರಲ್ಲಿ ಮೂಡುತ್ತಿದೆ. ಸಹಕಾರಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ವಿಮಾ ಮೊತ್ತ ಪಾವತಿಸಲಾಗುತ್ತಿದ್ದು ವಿಮಾ ಪರಿಹಾರದಲ್ಲಿ ಶೇ.4 ಸಹಕಾರಿ ಸಂಘ, ಬ್ಯಾಂಕ್‌ಗಳಿಗೆ ಪಾವತಿಯಾಗುತ್ತಿದ್ದು ರೈತರು ಬ್ಯಾಂಕ್ ಹಾಗೂ ಸಹಕಾರಿ ಸಂಘವನ್ನು ಪ್ರಶ್ನಿಸುವಂತಾಗಿದೆ.
ಭೌಗೋಳಿಕವಾಗ ತಾಲೂಕಿನಲ್ಲಿ ಒಂದೇ ರೀತಿ ಮಳೆ ಪ್ರಮಾಣ, ಉಷ್ಣಾಂಶ ಒಂದೇ ರೀತಿ ಇರುತ್ತಿದೆ. ಆದರೂ ವಿಮಾ ಪರಿಹಾರದಲ್ಲಿ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಯಾಕೆ ವ್ಯತ್ಯಾಸ ಮಾಡಿದ್ದಾರೆ. 100 ಮೀಟರ್ ಅಂತರದಲ್ಲಿ 10-15 ಸಾವಿರ ರೂಪಾಯಿಗಳ ವ್ಯತ್ಯಾಸವಿದೆ. ಒಂದೇ ತಾಲೂಕು, ಒಂದೇ ಹೋಬಳಿಯಲ್ಲಿ ವ್ಯತ್ಯಾಸವಿದೆ. ಪಂಚಾಯತ್‌ನಿಂದ ಪಂಚಾಯತ್‌ಗೆ ವ್ಯತ್ಯಾಸವಿದೆ. ಇದರಲ್ಲಿ ಯಾವುದೋ ಕೈವಾಡ ಇದೆಯಾ ಎಂಬ ಪ್ರಶ್ನೆಗಳು ಮೂಡುತ್ತದೆ. ಶೇ.20ರಷ್ಟು ವಿಮಾ ಮೊತ್ತ ರಾಜ್ಯ ಸರಕಾರ ಪಾವತಿಸುತಿದ್ದ ರಾಜ್ಯ ಸರಕಾರಕ್ಕೂ ಜವಾಬ್ದಾರಿಯಿದೆ. ಈ ತಾರತಮ್ಯದ ಬಗ್ಗೆ ರಾಜ್ಯ ಸರಕಾರ ವಿಮಾ ಕಂಪನಿಯ ಬಗ್ಗೆ ತನಿಖೆ ನಡೆಸಬೇಕು. ರೈತರಿಗೆ ಅನ್ಯಾಯವಾಗುವಾಗ ಸರಕಾರ ಕಣ್ಮುಚ್ಚಿ ಕುಳಿತ್ತಿದೆ. ಇದನ್ನು ನಿರ್ವಹಣೆ ಮಾಡುವ ಜಿಲ್ಲಾಧಿಕಾರಗಳು ವಿಮಾ ಕಂಪನಿಯರನ್ನು ಜೊತೆ ವಿಚಾರಿಸಿಲ್ಲ.
ಕಳೆದ ಅವಧಿಯಲ್ಲಿ ಪಕ್ಷದ ಸತ್ಯಶೋಧನ ಸಮಿತಿಯಿಂದ ಜಿಲ್ಲೆಯ 9 ತಾಲೂಕುಗಳಲ್ಲಿ ಅಧ್ಯಯನ ಮಾಡಿದ್ದು, ಮಳೆ ಮಾಪಕ ಸರಿಯಾಗಿ ಕಾರ್ಯನಿರ್ವಹಿಸಿದ ಪರಿಣಾಮ ವಿಮಾ ಪರಿಹಾರ ಮೊತ್ತ ರೈತರಿಗೆ ಸರಿಯಾಗಿ ದೊರೆಯದೇ ಇರುವುದು ಕಂಡುಕೊಂಡಿದ್ದೇವೆ. ಈ ಎಲ್ಲಾ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಬಳಿಕ ಅವರು ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿಗಳು ಮಳೆ ಮಾಪಕಗಳನ್ನು ದುರಸ್ಥಿ ಮಾಡುವ ಕೆಲಸವಾಗಿದೆ. ಅದರ ನಿರ್ವಹಣೆಯನ್ನು ಗ್ರಾಮ ಆಡಳಿತಾಧಿಕಾರಿಗಳಿಗೆ ನೀಡಿದ್ದರೂ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ.
ವಿಮಾ ಪರಿಹಾರ ಮೊತ್ತ ವಿತರಣೆಯಲ್ಲಿನ ತಾರತಮ್ಯದಿಂದ ರೈತರಗೆ ಅನ್ಯಾಯವಾಗಿದೆ. ತಾಲೂಕಿನ ಎಲ್ಲಾ ಗ್ರಾಮಗಳ ಪ್ರತಿಯೊಬ್ಬ ರೈತರಿಗೂ ಒಂದೇ ಮಾನದಂಡದಲ್ಲಿ ವಿಮಾ ಪರಿಹಾರ ನೀಡಬೇಕು. ಒಂದು ಗ್ರಾಮಕ್ಕೆ ಗರೀಷ್ಠ ಪರಿಹಾರ ನೀಡಿದರೆ ಅದೇ ರೀತಿಯಲ್ಲಿ ಎಲ್ಲಾ ಗ್ರಾಮಗಳ ರೈತರಿಗೂ ವಿಮಾ ಪರಿಹಾರ ನೀಡಬೇಕು. ಪಂಚಾಯತ್, ಹೋಬಳಿ, ಗ್ರಾಮಕ್ಕೆ ಒಂದೊಂದು ರೀತಿಯಲ್ಲಿ ಪರಿಹಾರ ಮಾಡಿದರೆ ರೈತರು ಈ ಯೋಜನೆಯ ಬಗ್ಗೆ ವಿಶ್ವಾಸ ಕಳೆದುಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ವಿಮಾ ಮೊತ್ತ ಪಾವತಿಸಬೇಕಾ ಎಂಬ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಆದರೆ ಇದರ ಬಗ್ಗೆ ತೋಟಗಾರಿಕಾ ಇಲಾಖೆ ಚಕಾರ ಎತ್ತುವುದಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ 274 ಗ್ರಾ.ಪಂಗಳಲ್ಲಿ ಮಳೆ ಮಾಪಕವನ್ನು ಅಳವಡಿಸಲಾಗಿದ್ದು ಈ ಪೈಕಿ 231 ಮಾತ್ರ ಸಮರ್ಪವಾಗಿ ಕಾರ್ಯನಿರ್ವಹಿಸುತ್ತಿದೆ. 20 ಹೋಬಳಿ ಮಟ್ಟದಲ್ಲಿ ಉಷ್ಣಾಂಶ ಮಾಪಕವಿದೆ. ಇದರಲ್ಲಿ ದಾಖಲಾಗುವ ವಾರ್ಷಿಕ ಮಳೆ ಮತ್ತು ಉಷ್ಣಾಂಶಗಳಿಗೆ ಸಂಬಂಧಿಸಿ ಟರ್ಮ್ ಶೀಟ್ ಮಾಡಿ ಅದರ ಮೂಲಕ ವಾರ್ಷಿಕ ಮಳೆ ಮತ್ತು ಉಷ್ಣಾಂಶಗಳ ಸರಾಸರಿ ಆಧಾರದಲ್ಲಿ ವಿಪತ್ತು ನಿರ್ವಹಣಾ ಕೇಂದ್ರದ ವರದಿಯ ಆಧಾರದಲ್ಲಿ ವಿಮಾ ಕಂಪನಿ ವಿಮಾ ಪರಿಹಾರ ನೀಡುತ್ತಿದೆ. ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಿದ್ದು ಇದರಲ್ಲಿ ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಸಮಿತಿ ಕಾರ್ಯದರ್ಶಿಯಾಗಿರುತ್ತಾರೆ.
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ರೈತ ಶೇ.5 ರಾಜ್ಯ ಸರಕಾರ ಶೇ.10 ಹಾಗೂ ಕೇಂದ್ರ ಸರಕಾರ ಶೇ.10ದಂತೆ ಒಟ್ಟು ಶೇ.25ರಷ್ಟು ವಿಮಾ ಮೊತ್ತ ಪಾವತಿಸಬೇಕು. ವಿಮಾ ಕಂಪನಿಯವರಿಗೆ ನಷ್ಟ ಆಗುವ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಮೊತ್ತವನ್ನು ರಾಜ್ಯ ಸರಕಾರ ಭರಿಸಬೇಕು ಎಂಬ ನಿಯಮವಿದೆ. 2025-26ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ದ.ಕ ಜಿಲ್ಲೆಯಲ್ಲಿ ಬೆಳೆವಿಮಾ ಯೋಜನೆಯಲ್ಲಿ ರೈತ ಶೇ.5, ರಾಜ್ಯ ಸರಕಾರ ಶೇ.20 ಹಾಗೂ ಕೇಂದ್ರ ಸರಕಾರ ಶೇ.10ವಿಮಾ ಮೊತ್ತ ಪಾವತಿಸಿದೆ. ರೈತರಿಂದ ರೂ.42,03,,73,390, ಕೇಂದ್ರ ಸರಕಾರ ರೂ.84,07,93,522 ಹಾಗೂ ರಾಜ್ಯ ಸರಕಾರ 168,14,93,522ದಂತೆ ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕುಗಳಿಂದ ಒಟ್ಟು ರೂ.294,26,13,663 ವಿಮಾ ಮೊತ್ತ ಪಾವತಿಯಾಗಿದೆ. ರೈತರು ಪ್ರತಿ ಹೆಕೇರ್‌ಗೆ ಅಡಿಕೆಗೆ ರೂ.6,475 ಹಾಗೂ ಕಾಳು ಮೆನಸಿಗೆ 2,377ಯಂತೆ ಪಾವತಿಸಿದ್ದಾರೆ. ರೈತರು ಪಾವತಿಸಿದ ರೂ.45,000 ವಿಮಾ ಮೊತ್ತ ಪಾವತಿಸಿದ ಬಜತ್ತೂರು ಗ್ರಾ.ಪಂ ವ್ಯಾಪ್ತಿಯ ರೈತರಿಗೆ ಹೆಕ್ಟೇರ್‌ಗೆ ಕನಿಷ್ಠ ರೂ,10,800 ಕನಿಷ್ಠ ಮಾತ್ರ ಪಾವತಿಯಾಗಿದೆ. ಅದೇ ಕೊಳ್ತಿಗೆಯ ರೈತರಿಗೆ ರೂ.51,824 ವಿಮಾ ಪರಿಹಾರ ಮೊತ್ತ ರೈತರ ಖಾತೆಗೆ ಜಮೆಯಾಗಿದೆ. ಪುತ್ತೂರು ತಾಲೂಕಿನಲ್ಲಿ ಕೊಳ್ತಿಗೆ ಗ್ರಾಮಕ್ಕೆ ಗರೀಷ್ಟ ನೀಡಿ ಉಳಿದ ಗ್ರಾಮಗಳಿಗೆ ಕನಿಷ್ಟ ಪರಿಹಾರ ಮೊತ್ತ ನೀಡಿದ್ದಾರೆ.
ರಾಜ್ಯ ಸರಕಾರದಿಂದ ರೈತ ವಿರೋಧಿ ನೀತಿ:
ಅಡಿಕೆ ಬೆಳೆಗೆ ರೈತರು ವಿಮಾ ಮೊತ್ತ ಪಾವತಿಸಿದ್ದಾರೆ. ಆದರೆ ವಿಮಾ ಪರಿಹಾರ ಮೊತ್ತವೂ ಸಮರ್ಪಕವಾಗಿ ಬರುತ್ತಿಲ್ಲ. ಅಡಿಕೆ ದಾರಣೆ ಕುಸಿದಿದೆ. ಕಳೆದ ಅವಧಿಯಲ್ಲಿ ರಾಜ್ಯ ಸರಕಾರ ರೈತರಿಗೆ ನೀಡುತ್ತಿದ್ದ ಕಿಸಾನ್ ಸನ್ಮಾನ್, ವಿದ್ಯಾನಿಧಿ ಯೋಜನೆಯನ್ನು ಈಗಿನ ಸರಕಾರ ನಿಲ್ಲಿಸಿದೆ. ರೈತರಿಗೆ ಒಂದಲ್ಲ ಒಂದು ರೀತಿಯಲ್ಲಿ ಹೊಡೆತ ನೀಡುತ್ತಿರುವ ರಾಜ್ಯ ಸರಕಾರ ರೈತ ವಿರೋಧ ನೀತಿ ಅನುಸರಿಸುತ್ತದೆ ಎಂದು ಆರೋಪಿಸಿದರು.ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಹಾಗೂ ರೈತ ಮೋರ್ಚಾದ ಅಧ್ಯಕ್ಷ ಶರತ್ಚಂದ್ರ ಬೈಪಾಡಿತ್ತಾಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬರದಲ್ಲೂ ರಾಜಕೀಯ….!
ಕಂಡು ಕೇಳರಿಯದ ರೀತಿಯಲ್ಲಿ ಬರ ರಾಜ್ಯಲ್ಲಿದೆ. ಆದರೆ ಬರದಲ್ಲಿಯೂ ರಾಜಕೀಯ ಎದ್ದು ಕಾಣುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೆನ್ಸಿಲ್‌ನಲ್ಲಿ ಮಾರ್ಕ್ ಮಾಡಿದ ರೀತಿಯಲ್ಲಿ ಮಳೆ ಬರುತ್ತಿದೆಯಾ ಎಂಬ ಸಂಶಯ ಮೂಡತ್ತಿದೆ. ಬಂಟ್ವಾಳ, ಉಳ್ಳಾಲ, ಬೆಳ್ತಂಗಡಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳನ್ನಾಗಿ ಘೋಷಣೆ ಮಾಡಲಾಗಿದೆ. ಸರಕಾರದ ಬರಪೀಡತ ತಾಲೂಕುಗಳ ಪಟ್ಟಿಯಲ್ಲಿ ಪುತ್ತೂರು, ಸುಳ್ಯ, ಮಂಗಳೂರು, ಮೂಡಬಿದರೆ, ಕಡಬ ತಾಲೂಕುಗಳ ಉಲ್ಲೇಖವಿಲ್ಲ. ಯಾವ ವೈಜ್ಞಾನಿಕ ವರದಿಯ ಆಧಾರದಲ್ಲಿ ಬರಪೀಡಿತ ತಾಲೂಕುಗಳನ್ನು ಗುರುತಿಸಲಾಗಿದೆ. ಇದು ರಾಜಕೀಯ ವರದಿಯ, ರಾಜಕೀಯ ಇಚ್ಚಾಶಕ್ತಿಯಿಂದ ಸರಕಾರ ಸಚಿವರ ಇಚ್ಚಾಶಕ್ತಿಯಿಂದ ಮಾಡದ ವರದಿಯಾ ಎಂಬ ಅನುಮಾನಗಳು ಜನರಲ್ಲಿ ಮೂಡುತ್ತಿದೆ.
-ಸಂಜೀವ ಮಠಂದೂರು ಮಾಜಿ ಶಾಸಕರು










