







ನೆಲ್ಯಾಡಿ: ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ನೆಲ್ಯಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಕೈಬಿಟ್ಟಿರುವುದು ಈ ಭಾಗದ ಜನರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ನೆಲ್ಯಾಡಿ-ಕೌಕ್ರಾಡಿ ಗ್ರಾಮ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನೆಲ್ಯಾಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳು ಶಿಕ್ಷಣ, ಆರೋಗ್ಯ, ಸಾರಿಗೆ, ಕುಡಿಯುವ ನೀರು, ರಸ್ತೆ ಹಾಗೂ ಇತರ ಮೂಲಸೌಕರ್ಯಗಳಿಗಾಗಿ ಪರಸ್ಪರ ಅವಲಂಬಿತವಾಗಿವೆ. ಇಂತಹ ಪ್ರದೇಶಕ್ಕೆ ಪ್ರತ್ಯೇಕ ಜಿಲ್ಲಾ ಪಂಚಾಯತ್ ಕ್ಷೇತ್ರದ ಮೂಲಕ ದೊರೆಯಬೇಕಾದ ಆಡಳಿತಾತ್ಮಕ ಗಮನ ಮತ್ತು ಜನಪ್ರತಿನಿಧಿತ್ವವನ್ನು ಕಡಿತಗೊಳಿಸುವ ನಿರ್ಧಾರವು ಗ್ರಾಮೀಣ ಭಾಗದ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಕ್ಷೇತ್ರ ಮರುವಿಂಗಡಣೆಯ ಉದ್ದೇಶ ಆಡಳಿತವನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದಾಗಿರಬೇಕೇ ಹೊರತು, ಗ್ರಾಮೀಣ ಜನರ ಧ್ವನಿಯನ್ನು ದುರ್ಬಲಗೊಳಿಸುವುದಾಗಿರಬಾರದು. ನೆಲ್ಯಾಡಿ ಭಾಗದ ಜನರ ಅಭಿಪ್ರಾಯ, ಸ್ಥಳೀಯ ಅಗತ್ಯಗಳು ಮತ್ತು ಭೌಗೋಳಿಕ ವಾಸ್ತವಗಳನ್ನು ಪರಿಗಣಿಸದೆ ಇಂತಹ ನಿರ್ಧಾರ ಕೈಗೊಂಡಿದ್ದರೆ, ಅದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಜನರಿಗೆ ತಮ್ಮ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಮಂಡಿಸಲು ಸಮರ್ಪಕವಾದ ರಾಜಕೀಯ ಪ್ರಾತಿನಿಧ್ಯ ಅತ್ಯಗತ್ಯ. ನೆಲ್ಯಾಡಿ ಕ್ಷೇತ್ರವನ್ನು ಕೈಬಿಡುವುದರಿಂದ ಈ ಭಾಗದ ಜನರು ತಮ್ಮ ಅಭಿವೃದ್ಧಿ ಸಂಬಂಧಿತ ಬೇಡಿಕೆಗಳನ್ನು ಮುಂದಿಡುವ ಅವಕಾಶಕ್ಕೆ ಧಕ್ಕೆಯಾಗಲಿದೆ. ಆದ್ದರಿಂದ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದರ ಜೊತೆಗೆ ಸಾರ್ವಜನಿಕರ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕು. ನೆಲ್ಯಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಮರುಪರಿಶೀಲಿಸಿ, ಈ ಭಾಗದ ಜನರಿಗೆ ನ್ಯಾಯಸಮ್ಮತವಾದ ಪ್ರಾತಿನಿಧ್ಯವನ್ನು ಖಚಿತಪಡಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸ್ಥಳೀಯ ಜನರ ಆಕ್ಷೇಪಣೆಗಳನ್ನು ಆಲಿಸಿ ಸೂಕ್ತ ತಿದ್ದುಪಡಿ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಎಸ್.ಡಿ.ಪಿ.ಐ ಜನಪರ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಅಬೂಬಕ್ಕರ್ ಸಿದ್ದೀಕ್ ಎಚ್ಚರಿಸಿದ್ದಾರೆ.













