







ನೆಲ್ಯಾಡಿ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 8ನೇ ಡಬ್ಲ್ಯುಜಿಕೆಎಫ್ ವರ್ಲ್ಡ್ ಗೊಜೊರಿಯೊ ಚಾಂಪಿಯನ್ ಶಿಪ್ 2026 ಅಂತರ್ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪದಕ ವಿಜೇತ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ ಹಾಗೂ ಮೆರವಣಿಗೆ ಅ.10ರಂದು ನಡೆಯಿತು.



ಚಿನ್ನದ ಪದಕ ವಿಜೇತ ಮೊಹಮ್ಮದ್ ಹಿಶಾಮ್ ಕೆ.ಕೆ., ಬೆಳ್ಳಿ ಪದಕ ವಿಜೇತ ಫಾತಿಮತ್ ಫಸಿಲಾ, ಕಂಚಿನ ಪದಕ ವಿಜೇತ ಮಹಮ್ಮದ್ ಸಾನಿ, ಆರಾಧ್ಯ ಕೆ., ಅದ್ವೈತ್ ಕೆ., ವರ್ಣಿತ್ ಪಿ.ವಿ., ಮನ್ವಿತ್‌ಕುಮಾರ್, ಕೋಚ್ ಅಲ್ಫೋನ್ಸಾ ಮಥಾಯಿ ಅವರಿಗೆ ಬಜತ್ತೂರಿನಲ್ಲಿ ಹಾರಾರ್ಪಣೆ ಮಾಡಿ ಅದ್ದೂರಿ ಸ್ವಾಗತ ನೀಡಲಾಯಿತು. ಅಲ್ಲಿಂದ ವಿಜೇತ ವಿದ್ಯಾರ್ಥಿಗಳು, ಅವರ ಪೋಷಕರು, ಶಾಲಾ ಆಡಳಿತ ಮಂಡಳಿಯವರು ಮೆರವಣಿಗೆಯಲ್ಲಿ ಗೋಳಿತ್ತೊಟ್ಟು, ಕೋಲ್ಪೆ, ನೆಲ್ಯಾಡಿ ಮೂಲಕ ಹೊಸಮಜಲುಗೆ ಆಗಮಿಸಿದರು. ಹೊಸಮಜಲುನಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಡಾ| ವರ್ಗೀಸ್ ಕೈಪನಡ್ಕ ಅವರು, ನೆಲ್ಯಾಡಿಯ ಹೆಸರನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆಯ ವಿಚಾರವಾಗಿದೆ. ನೆಲ್ಯಾಡಿ, ಕೌಕ್ರಾಡಿಯ ನಾಗರಿಕರಿಕರು ಶಾಲೆ, ಪದಕ ವಿಜೇತ ಮಕ್ಕಳನ್ನು ಅಭಿನಂದಿಸಿರುವುದು ಸಂತಸ ತಂದಿದೆ. ನಮ್ಮ ಶಾಲೆಯಲ್ಲಿ ಕರಾಟೆಯೊಂದಿಗೆ ಸ್ಕೇಟಿಂಗ್, ಸ್ಕೌಟ್ಸ್, ಗೈಡ್ಸ್ ಸಹಿತ ಎಲ್ಲಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಹೇಳಿದರು. ಕೌಕ್ರಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸಲಾಂ ಬಿಲಾಲ್, ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸುಧೀರ್‌ಕುಮಾರ್, ರಿಜ್ಮಾ ನೆಲ್ಯಾಡಿ, ಕೆ.ಇ.ಅಬೂಬಕ್ಕರ್ ಹೊಸಮಜಲು, ಕೆ.ಕೆ.ಇಸ್ಮಾಯಿಲ್ ಕೋಲ್ಪೆ ಮತ್ತಿತರರು ಪದಕ ವಿಜೇತ ವಿದ್ಯಾರ್ಥಿಗಳಿಗೆ, ತರಬೇತುದಾರರಿಗೆ ಅಭಿನಂದನೆ ಸಲ್ಲಿಸಿದರು.



ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಸುಪಿರೀಯರ್ ರೆ.ಫಾ.ಸ್ಯಾಮುವೆಲ್ ಜಾರ್ಜ್, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಕೆ.ಕೆ.ಅಬೂಬಕ್ಕರ್ ಕೋಲ್ಪೆ, ಅಬ್ದುಲ್ಲಾ ಕುಂಞಿ ಕೊಂಕೋಡಿ, ಖಲೀಲ್ ಇಬ್ರಾಹಿಂ, ಅಬೂಬಕ್ಕರ್ ಸಿದ್ಧೀಕ್, ರಫೀಕ್ ಬೈಲು, ಇಸ್ಮಾಯಿಲ್, ನೌಶಾದ್, ಅಬ್ದುಲ್ ಅಝೀಝ್ ಕೋಲ್ಪೆ, ನೆಲ್ಯಾಡಿ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಮನೋಜ್ ಬೆಥನಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೆಲ್ಯಾಡಿಯಲ್ಲಿ ರಿಕ್ಷಾ ಚಾಲಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪದಕ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.










