ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಮ್ಮಿಂಜೆ ವಲಯದ ಒಕ್ಕೂಟದ ಶ್ರೀ ಸತ್ಯನಾರಾಯಣ ಪೂಜೆ, ಒಕ್ಕೂಟಗಳ ಪದಗ್ರಹಣ

0

ಪುತ್ತೂರು:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕೆಮ್ಮಿಂಜೆ ವಲಯದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕೆಮ್ಮಿಂಜೆ ವಲಯದ 9 ಒಕ್ಕೂಟಗಳ ಪದಗ್ರಹಣ ಸಮಾರಂಭವು ಅ.11ರಂದು ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನದ ಗೌರಿಶಂಕರ ಸಭಾಂಗಣದಲ್ಲಿ ನೆರವೇರಿತು.


ಪ್ರಾರಂದಲ್ಲಿ ಅರ್ಚಕ ನಾರಾಯಣ ಐತಾಳರ ನೇತೃತ್ವದಲ್ಲಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಪ್ರಾರಂಭಗೊಂಡಿತು. ಇದೇ ಸಮಯದಲ್ಲಿ ವಿವಿಧ ಭಜನೆ, ಕುಣಿತ ಭಜನೆ, ನಂತರ ಮಹಾಪೂಜೆ ನಡೆದ ಬಳಿಕ ಸಭಾ ಕಾರ್ಯಕ್ರಮ, ಒಕ್ಕೂಟದ ಪದಗ್ರಹಣ, ಸನ್ಮಾನ, ವಿವಿಧ ಸವಲತ್ತುಗಳ ವಿತರಣೆ ನೆರವೇರಿತು.


ಜನರಿಗೆ ಮೂಲಭೂತ ಸೌಲಭ್ಯಗಳ ಒದಗಿಸುವುದೇ ನನ್ನ ಗುರಿ-ಅಶೋಕ್ ಕುಮಾರ್ ರೈ
ಕಾರ್ಯಕ್ರಮವನ್ನು ದೀಪ ಬೆಳಗಿಸಿ, ತೆಂಗಿನ ಸಸಿಗೆ ನೀರೆರೆದು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ, ಮನೆ ಇಲ್ಲದ ಕುಟುಂಬಗಳಿಗೂ ಮನೆ, ವಿದ್ಯುತ್, ಕುಡಿಯುವ ನೀರು ಮತ್ತು ಆರೋಗ್ಯ ಸಿಗಬೇಕು ಎಂಬುದು ನನ್ನ ದೊಡ್ಡ ಆಸೆಯಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉನ್ನತ ಉದ್ಯೋಗ, ಆರೋಗ್ಯ ದೊರೆತು ಅವರು ಪರಿಪೂರ್ಣ ವ್ಯಕ್ತಿಯಾದಾಗ ಮಾತ್ರ ಕುಟುಂಬದ ಅಭಿವೃದ್ಧಿ, ದೇಶದ ಅಭಿವೃದ್ಧಿ ಆಗಲಿದೆ. ಪ್ರತಿಯೊಬ್ಬರಿಗೂ ಅವರವರ ಧರ್ಮ ಮುಖ್ಯ. ನಾನು ಹಿಂದು ಧರ್ಮದಲ್ಲಿ ಹುಟ್ಟಿದ್ದು ಶಾಸಕನಾಗಿ, ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಮೂರು ವರ್ಷದಲ್ಲಿ ರೂ.34.5ಕೋಟಿ ಅನುದಾನದ ಜೊತೆಗೆ ಸರಕಾರಿ ಜಾಗದಲ್ಲಿದ್ದ ಪ್ರಾರ್ಥನ ಮಂದಿಗಳನ್ನು ದೇವರ ಹೆಸರಿನಲ್ಲಿ ದಾಖಲೆ ಮಾಡುವ ಮೂಲಕ ಧರ್ಮಕ್ಕೆ ಬಹಳಷ್ಟು ಕೊಡುಗೆ ನೀಡಿರುವುದಾಗಿ ಶಾಸಕರು ಹೇಳಿದರು.


ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜದ ವಿಕಾಸದ ಜೊತೆಗೆ ಧರ್ಮ, ಸಂಸ್ಕೃತಿ ಉಳಿಸುವ ಕಾರ್ಯ-ಕಿಶೋರ್ ಬೊಟ್ಯಾಡಿ;
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಮಾತನಾಡಿ,ವ್ಯಕ್ತಿ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯಾಗಬೇಕು. ಪ್ರತಿಯೊಬ್ಬ ಪ್ರಜೆಯು ತಾನು ಮುನ್ನಡೆಯಬೇಕು ಎಂದು ದೇಶದ ೧೪೪ಕೋಟಿ ಪ್ರಜೆಗಳೂ ಯೋಚಿಸಿ, ಮುನ್ನಡೆದಾಗ ದೇಶದ ಅಭಿವೃದ್ಧಿ ಸಾಧ್ಯ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿನೂತನ ಕಾರ್ಯಕ್ರಮಗಳ ಮೂಲಕ ಸಮಾಜದ ವಿಕಾಸದ ಜೊತೆಗೆ ಧರ್ಮ, ಸಂಸ್ಕೃತಿ ಉಳಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.


ಯೋಜನೆಯು ವಿರುದ್ಧ ಷಡ್ಯಂತ್ರಗಳ ಬಂದಾಗ ಒಟ್ಟಾಗಿ ವಿರೋಧಿಸಬೇಕು-ಶಶಿಕುಮಾರ್ ರೈ ಬಾಲ್ಯೊಟ್ಟು;
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿರುವ ಗ್ರಾಮಾಭಿವೃದ್ಧಿ ಯೋಜನೆಯ ಸೌಲಭ್ಯಗಳ ಬಗ್ಗೆ ಮೆಲುಕುಹಾಕುವ ಕೆಲಸವಾಗಬೇಕು. ಯೋಜನೆ ಪುತ್ತೂರಿಗೆ ಬರುವ ಹಿಂದಿನ ಪರಿಸ್ಥಿತಿಯ ಬಗ್ಗೆ ಯೋಚಿಸಬೇಕು. ನಮ್ಮ ಮನೋಭಾವಣೆ ಬದಲಾಗಬಾರದು. ನಮ್ಮ ಬೆಳವಣಿಗೆಗೆ ಕಾರಣವಾಗಿರುವ ದಾರಿ ಮರೆಯಬಾರದು. ಯೋಜನೆಯ ವಿರುದ್ಧ ಷಡ್ಯಂತ್ರಗಳು ಬಂದಾಗ ಯಾವುದೇ ಅಸಡ್ಡೆ ಮಾಡದೇ ಎಲ್ಲರೂ ಒಟ್ಟಾಗಿ ವಿರೋಧಿಸುವ ಮೂಲಕ ಧರ್ಮಾಧಿಕಾರಿಗಳಿಗೆ ಬೆಂಬಲ ಸೂಚಿಸಬೇಕು ಎಂದು ಹೇಳಿದರು.


ಯೋಜನೆಯ ಮೂಲಕ ಸಾಮಾಜಿಕ, ಆರ್ಥಿಕ ಪರಿವರ್ತನೆ-ಶಶಿಧರ ಎಂ.:
ತಾಲೂಕು ಯೋಜನಾಧಿಕಾರಿ ಶಶಿಧರ ಎಂ ಮಾತನಾಡಿ, 2002ರಲ್ಲಿ ಪುತ್ತೂರಿನಲ್ಲಿ ಪ್ರಾರಂಭಗೊಂಡಿರುವ ಯೋಜನೆಯು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಗ್ರಾಮಾಭಿವೃದ್ಧಿ ಯೋಜನೆಯು ಸಾಲ ಸೌಲಭ್ಯಗಳಿಗೆ ಸೀಮಿತವಾಗಿರದೆ. ಸಮಾಜವನ್ನು ಸಂಘಟಿತಗೊಳಿಸಿ, ನಾಯಕತ್ವ ಬೆಳೆಸಿದೆ. ಯೋಜನೆಯ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆ ಮಾಡಿದೆ. ಒಂದು ವರ್ಷದಲ್ಲಿ ಸುಮಾರು 1000 ಮಂದಿ ಯೋಜನೆಯಲ್ಲಿ ಸೇರ್ಪಧಡೆಗೊಂಡಿದ್ದಾರೆ ಎಂದರು.


ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಜಿ.ಕೆ ಮಾತನಾಡಿ, ಕೆಮ್ಮಿಂಜೆ ವಲಯದ ಒಂಬತ್ತು ಒಕ್ಕೂಟದ ಪದಗ್ರಹಣವು ಒಟ್ಟಾಗಿ ನಡೆದಿದೆ. ಜವಾಬ್ದಾರಿ ಪಡೆದವರು ಹಿಂದಿನ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ನಷ್ಟು ಉತ್ತಮವಾಗಿ ಮುನ್ನಡೆಸಬೇಕು ಎಂದರು.


ವಲಯದ ನೂತನ ಅಧ್ಯಕ್ಷ ಉಮೇಶ್ ಮಾತನಾಡಿ, ಶೂನ್ಯವಾಗಿದ್ದ ನನ್ನನ್ನು ಗ್ರಾಮಾಭಿವೃದ್ದಿ ಯೋಜನೆಯು ಬಹಳಷ್ಟು ಎತ್ತರಕ್ಕೆ ಬೆಳೆಸಿದೆ. ಈಗ ವಲಯದ ಜವಾಬ್ದಾರಿ ನನಗೆ ದೊರೆತಿದ್ದು ಎಲ್ಲಾ ಹಿರಿಯ ಪದಾಧಿಕಾರಿಗಳು ಹೊಸ ಪದಾಧಿಕಾರಿಗಳಿಗೆ ಸಹಕಾರ ಮಾರ್ಗದರ್ಶನ ನೀಡುವಂತೆ ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕೆಮ್ಮಿಂಜೆ ವಲಯದ ಅಧ್ಯಕ್ಷ ಸುಂದರ ಬಲ್ಯಾಯ ಮಾತನಾಡಿ, ತನ್ನ ಅವಧಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.


ಒಕ್ಕೂಟಗಳ ಪದಗ್ರಹಣ;
ಕೆಮ್ಮಿಂಜೆ ವಲಯದ ಶಾಂತಿಗೋಡು, ಆನಡ್ಕ, ಮುಂಡೂರು, ಕೆಮ್ಮಿಂಜೆ, ಸರ್ವೆ, ವೀರಮಂಗಲ, ಮುಕ್ವೆ, ಭಕ್ತಕೋಡಿ, ನರಿಮೊಗರು ಹಾಗೂ ಪರಮಾರ್ಗ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ನಿರ್ಗಮಿತ ಪದಾಧಿಕಾರಿಗಳ, ನೂತನ ಪದಾಧಿಕಾರಿಗಳಿಗೆ ವೀಳ್ಯ ಹಾಗೂ ದಾಖಲೆ ಪುಸ್ತಕ ಹಸ್ತಾಂತರಿಸುವ ಮೂಲಕ ಪದಗ್ರಹಣ ನೆರವೇರಿತು.


ಸನ್ಮಾನ
ನಾಟ್ಯವೈದ್ಯರಾದ ನಾರ್ಣಪ್ಪ ಸಾಲಿಯಾನ್, ಯಮುನಾ ಪುರುಷರಕಟ್ಟೆ, ಪೊಲೀಸ್ ಇಲಾಖೆಗೆ ನೇಮಕಗೊಂಡಿರುವ ಸುಶ್ಮಿತಾ ಕೆಮ್ಮಿಂಜೆ, ಯೋಜನೆಯ ಮೂಲಕ ಸಾಲ ಪಡೆದು ಅಭಿವೃದ್ಧಿ ಹೊಂದಿದ ಲತಾ ವಿಠಲ ಹಾಗೂ ಶೀನಪ್ಪನಾಯ್ಕ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ವಿವಿಧ ಸವಲತ್ತುಗಳ ವಿತರಣೆ;
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡುವ ವಿವಿಧ ಸವಲತ್ತುಗಳಾದ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ, ಪ್ರಗತಿ ರಕ್ಷಾಕವಚ ವಿಮಾ ಪತ್ರ, ಸಂಪೂರ್ಣ ಸುರಕ್ಷಾ, ಒಲಿಂಪಿಯಾಡ್ ಪ್ರಮಾಣ ಪತ್ರಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.


ಪರಮಾರ್ಗ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಬೆಳಿಯಪ್ಪ ಗೌಡ ಕೆದ್ಕಾರ್, ಶಾಂತಿಗೋಡು ಒಕ್ಕೂಟದ ನಿಕಟಪೂರ್ವ ಅಧಕ್ಷೆ ಅನುರಾಧ ಪ್ರಭು ಶಾಂತಿಗೋಡು ಅನಿಸಿಕೆ ವ್ಯಕ್ತಪಡಿಸಿದರು.
ಭಕ್ತಕೋಡಿ ಸೇವಾ ಪ್ರತಿನಿಧಿ ಚಿತ್ರ ಪ್ರಾರ್ಥಿಸಿದರು. ಕೆಮ್ಮಿಂಜೆ ವಲಯದ ಮೇಲ್ವಿಚಾರಕ ಗಿರೀಶ್ ಸ್ವಾಗತಿಸಿದರು. ನರಿಮೊಗರು ವಲಯದ ಸೇವಾಪ್ರತಿನಿಧಿ ಯಶೋಧ ವರದಿ ವಾಚಿಸಿದರು. ಸದಸ್ಯ ಪ್ರಕಾಶ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿ, ಪರಮಾರ್ಗ ಒಕ್ಕೂಟದ ಚಿದಾನಂದ ವಂದಿಸಿದರು. ಸದಸ್ಯರಾದ ಶಶಿಧರ ಎಂ ಭಕ್ತಕೋಡಿ, ಉಮೇಶ್ ಪೂಜಾರಿ ವೀರಮಂಗಲ, ಪುಷ್ಪಾ ಅಂಬಟ., ಚೇತನ್ ಕುಮಾರ್ ಕೆಮ್ಮಿಂಜೆ, ವಸಂತ ಪೂಜಾರಿ, ಗಣೇಶ್ ಅತಿಥಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಕ ಬೋಜನ ನಡೆದು ನಂತರ ಕೆಮ್ಮಿಂಜೆ ವಲಯದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ವಿವಿಧ ಒಕ್ಕೂಟಗಳ ಸೇವಾ ಪ್ರತಿನಿಧಿಗಳು, ಸದಸ್ಯರು ಸಹಕರಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿವಿಧ ಸೌಲಭ್ಯ, ಯೋಜನೆಗಳ ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಿದೆ. ಮದ್ಯವರ್ಜನ ಶಿಬಿರದ ಮೂಲಕ ಹಲವು ಮಂದಿಗೆ ಮರುಜೀವನ ನೀಡಿದೆ. ನಾಲ್ಕುಗೋಡೆಗಳ ಮಧ್ಯೆಯಿದ್ದ ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿಗೆ ಬರುವಷ್ಟು ಬೆಳೆದಿರುವುದಲ್ಲದೆ ಉತ್ತಮ ಸಂಘಟಕರಾಗಿ ಮೈಕ್ ಹಿಡಿದು ಮಾತನಾಡುವಷ್ಟು ಬೆಳೆದಿದ್ದಾರೆ. ಯೋಜನೆಯು ಜೀವನಕ್ಕೆ ಪೂರಕವಾದ ದಾರಿ ನೀಡುವ ಜೊತೆಗೆ ಸ್ವಾವಲಂಬಿ ಬದುಕು ನೀಡಿದೆ.
-ಅಶೋಕ್ ಕುಮಾರ್ ರೈ, ಶಾಸಕರು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್ ಮತ್ತು ಬಡವರ ಮನೆ ಬಾಗಿಲಿಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡುವ ಸಾಲ ಸೌಲಭ್ಯಗಳು ಕ್ಷೇತ್ರದಿಂದ ನೀಡುವುದಲ್ಲ. ಕಟ್ಟುವ ಬಡ್ಡಿಯೂ ಕ್ಷೇತ್ರಕ್ಕೆ ಸಂದಾಯವಾಗುವುದಿಲ್ಲ. ಎಸ್‌ಬಿಐ ಬ್ಯಾಂಕ್ ಮೂಲಕ ಸದಸ್ಯರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದ್ದು ಸಾಲದ ಮರು ಪಾವತಿ, ಸದಸ್ಯರು ಕಟ್ಟು ಬಡ್ಡಿ ಮೊತ್ತವೂ ಬ್ಯಾಂಕ್‌ಗಳಿಗೆ ಸಂದಾಯವಾಗುತ್ತಿದೆ. ಪುತ್ತೂರಿನಲ್ಲಿ ಒಟ್ಟು ರೂ.145ಕೋಟಿ ವ್ಯವಹಾರ ಮಾಡಿದ್ದು ಕೆಮ್ಮಿಂಜೆ ವಲಯ ಒಂದರಲ್ಲಿ ರೂ.19ಕೋಟಿ ಬ್ಯಾಂಕ್ ವ್ಯವಹಾರಗಳ ಮೂಲಕ ಹಣಕಾಸಿನ ನೆರವು ನೀಡಲಾಗಿದೆ. ಯಾವುದೇ ಭ್ರಷ್ಟಾಚಾರವಿಲ್ಲದೆ, ಪಾರದರ್ಶಕವಾಗಿ ಯೋಜನೆಯು ಸೇವೆ ಜನರಿಗೆ ನೀಡುತ್ತಿದೆ. ಜೊತೆಗೆ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಶಿಕ್ಷಕರ ನೇಮಕ, ಮದ್ಯವರ್ಜನ ಶಿಬಿರ, ಸರಕಾರಿ ಕೆರೆಗಳ ಅಭಿವೃದ್ದಿ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ನೆರವು, ವಿದ್ಯಾರ್ಥಿ ವೇತನ, ಮನೆ ದುರಸ್ಥಿಗೆ ನೆರವು, ಸಾಲಗಾರ ಸದಸ್ಯರಿಗೆ ಪ್ರಗತಿ ರಕ್ಷಾ ಕವಚ ಸಹಿತ ಹಲವು ಸೌಲಭ್ಯಗಳನ್ನು ಯೋಜನೆಯ ಮೂಲಕ ಜನರಿಗೆ ನೀಡಲಾಗುತ್ತಿದೆ.
-ಶಶಿಧರ ಎಂ. ಯೋಜನಾಧಿಕಾರಿಗಳು ಪುತ್ತೂರು

LEAVE A REPLY

Please enter your comment!
Please enter your name here