ಝೀ ಕನ್ನಡ ’ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸೂಪರ್ ಮಾಮ್‌ನಲ್ಲಿ ಮಿಂಚುತ್ತಿರುವ ಕುಂಬ್ರ ಕೈಕಾರದ ಪ್ರತಿಭೆ ಸೌಪರ್ಣಿಕಾ ಗುರುರಾಜ್

0

ವರದಿ: ಸಿಶೇ ಕಜೆಮಾರ್


ಪುತ್ತೂರು: ಕರಾವಳಿಯ ಪ್ರತಿಭಾವಂತೆ, ನೃತ್ಯ ಕ್ಷೇತ್ರದಲ್ಲಿ ಸಾಧನೆಯ ಮೇಲೆ ಸಾಧನೆ ಮಾಡುತ್ತಿರುವ ಸೌಪರ್ಣಿಕಾ ಗುರುರಾಜ್ ರೈ ಅವರು ಈಗ ಝೀ ಕನ್ನಡ ವಾಹಿನಿಯ ಪ್ರತಿಷ್ಠಿತ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನದ ಮೂಲಕ ಕರಾವಳಿಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಬೆಳಗುತ್ತಿದ್ದಾರೆ.


ಪುತ್ತೂರು ತಾಲೂಕಿನ ಕೈಕಾರ ಮೂಲದವರಾದ ಸೌಪರ್ಣಿಕಾ ಅವರು, ಕಡಬ ತಾಲೂಕಿನ ಐಂಬಾಗಿಲು, ಕೈಕಾರದ ಐಂಬಾಗಿಲು ಉಮೇಶ್ ರೈ ಹಾಗೂ ಪನಡ್ಕದ ಸೌಮ್ಯ ರೈ ದಂಪತಿಯ ಪುತ್ರಿ. ಈಶ್ವರಮಂಗಲದ ಗುರುರಾಜ್ ರೈ ಅವರ ಪತ್ನಿಯಾಗಿರುವ ಇವರಿಗೆ ಚರಿಷ್ ರೈ ಎಂಬ ಮಗನಿದ್ದಾನೆ. ಸಂಸಾರ ಹಾಗೂ ಮಗನ ಜವಾಬ್ದಾರಿಯ ಜೊತೆಜೊತೆಯೇ ತಮ್ಮ ನೃತ್ಯದ ಕನಸನ್ನು ಜೀವಂತವಾಗಿರಿಸಿಕೊಂಡು ಇವರು ಸಾಧನೆ ಮಾಡಿದ್ದು ಎಲ್ಲರಿಗೂ ಮಾದರಿಯಾಗಿದೆ.


ನೃತ್ಯದ ನಾನಾ ಪ್ರಕಾರಗಳಲ್ಲಿ ವಿಶೇಷ ಪರಿಣತಿ
ಸೌಪರ್ಣಿಕಾ ಅವರು ನಾಟ್ಯ ವಿದುಷಿ ನಯನ ವಿಶ್ವನಾಥ ರೈ ಅವರ ನೇತೃತ್ವದ ’ವಿಶ್ವ ಕಲಾನಿಕೇತನ’ ಸಂಸ್ಥೆಯಲ್ಲಿ ಶಾಸ್ತ್ರೀಯ ಭರತನಾಟ್ಯವನ್ನು (ಕ್ಲಾಸಿಕಲ್ ನಾಟ್ಯ) ಅಭ್ಯಾಸ ಮಾಡಿದ್ದಾರೆ. ಇದರೊಂದಿಗೆ ಪವನ್ ಬಲ್ನಾಡು ನೇತೃತ್ವದ ’ಸ್ಟೆಪ್ ಮೇಕರ್ಸ್ ಡ್ಯಾನ್ಸ್ ಕ್ರೂ’ ಸಂಸ್ಥೆಯಲ್ಲಿ ವೆಸ್ಟರ್ನ್ ಡ್ಯಾನ್ಸ್ ಪ್ರಕಾರದಲ್ಲೂ ವಿಶೇಷ ತರಬೇತಿ ಪಡೆದಿದ್ದಾರೆ.


ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹೆಗ್ಗುರುತು
2017ರಲ್ಲಿ ನಡೆದ ರಾಷ್ಟ್ರೀಯ ಮಟ್ಟದ ‘ಇಂಡಿಯನ್ ಹಿಪ್ ಹಾಪ್ ಡ್ಯಾನ್ಸ್’ ಸ್ಪರ್ಧೆಯಲ್ಲಿ ‘ಸ್ಟೆಪ್ ಮೇಕರ್ಸ್ ಡ್ಯಾನ್ಸ್ ಕ್ರೂ’ ತಂಡದೊಂದಿಗೆ ಭಾಗವಹಿಸಿ ವಿಜೇತರಾಗಿದ್ದ ಇವರು, ಅಮೆರಿಕದಲ್ಲಿ ನಡೆಯಲಿದ್ದ ಅಂತಾರಾಷ್ಟ್ರೀಯ ಹಿಪ್ ಹಾಪ್ ಡ್ಯಾನ್ಸ್ ಸ್ಪರ್ಧೆಗೂ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದರು.


ವಿಜೇತ ಯಾನ
ಇತ್ತೀಚೆಗೆ ‘ನಮ್ಮ ಟಿವಿ ಕುಡ್ಲ’ ವಾಹಿನಿಯ ಆಯೋಜನೆಯಲ್ಲಿ ಅತ್ಯಂತ ಯಶಸ್ವಿಯಾಗಿ ಮೂಡಿಬಂದ ಜನಪ್ರಿಯ ‘ಡ್ಯಾನ್ಸ್ ಮಮ್ಮಿ ಡ್ಯಾನ್ಸ್’ ಸೀಸನ್ – 8ರಲ್ಲಿ ಭಾಗವಹಿಸಿ ಭರ್ಜರಿ ವಿಜೇತರಾಗಿ ಹೊರಹೊಮ್ಮಿದ್ದರು. ಇದೀಗ ಮುಂದುವರಿದು ಝೀ ಕನ್ನಡ ಟಿವಿಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ವೇದಿಕೆಯಲ್ಲಿ ತಮ್ಮ ಅದ್ಭುತ ನೃತ್ಯ ಕೌಶಲದ ಮೂಲಕ ನಿರ್ಣಾಯಕರ ಮೆಚ್ಚುಗೆಯನ್ನು ಗಳಿಸುತ್ತಿದ್ದಾರೆ. ಕುಟುಂಬದ ಪ್ರೋತ್ಸಾಹ ಮತ್ತು ಸ್ವಂತ ಪರಿಶ್ರಮದಿಂದ ಕರಾವಳಿಗೆ ಹೆಮ್ಮೆ ತಂದಿರುವ ಸೌಪರ್ಣಿಕಾ ಗುರುರಾಜ್ ರೈ ಅವರ ಮುಂದಿನ ನೃತ್ಯ ಯಾನ ಯಶಸ್ವಿಯಾಗಿ ಸಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

LEAVE A REPLY

Please enter your comment!
Please enter your name here