







ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಸಂಸ್ಥೆಯು ‘ನಮ್ಮ ಹಬ್ಬ, ನಮ್ಮ ಸೇವೆ – ನವರಂಗ್ 2026’ ನವರಾತ್ರಿ ನವಸೇವಾ ಸಪ್ತಾಹದ ಅಂಗವಾಗಿ ಅ.15 ರಂದು ಎರಡನೇ ಮಹಾಯುದ್ಧದಲ್ಲಿ ದೇಶಕ್ಕಾಗಿ ಭಾಗವಹಿಸಿ ಹೋರಾಡಿದ ವೀರ ಯೋಧ ಮುತ್ತಪ್ಪ ಮೂಲ್ಯ ಅವರ ಧರ್ಮಪತ್ನಿ ಹಿರಿಯ ವೀರಮಾತೆ ಸುಮಾರು 90 ವರ್ಷ ವಯೋಮಾನದ ಸ್ವರ್ಣಲತಾ ಅವರಿಗೆ ಪುತ್ತೂರಿನ ರೋಟರಿ ಕ್ಲಬ್ ಪುತ್ತೂರು ಯುವದ ಪದಾಧಿಕಾರಿಗಳು ವಿಠಲದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ, ಗೌರವ ಧನ ಹಾಗೂ ಅಗತ್ಯ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸಿದರು.


ರೋಟರಿ ಕ್ಲಬ್ ಪುತ್ತೂರು ಯುವ ವತಿಯಿಂದ ರೂ.15,000 ನಗದು ಸಹಾಯಧನ ಹಾಗೂ 25 ಕೆಜಿ ಅಕ್ಕಿ, ಸಕ್ಕರೆ, ಬೇಳೆ ಸೇರಿದಂತೆ ಅಗತ್ಯ ದಿನಸಿ ಸಾಮಗ್ರಿಗಳ ಕಿಟ್ ಅನ್ನು ಅತ್ಯಂತ ಗೌರವಪೂರ್ವಕವಾಗಿ ನೀಡಿ ಹಿರಿಯ ವೀರ ಮಾತೆಯ ಆಶೀರ್ವಾದವನ್ನು ಪಡೆದರು.



ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮವು ಜರಗಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷೆ ವಚನ ಜಯರಾಮ್, ಕಾರ್ಯದರ್ಶಿ ಅನೂಪ್ ಜಿ., ಸದಸ್ಯರಾದ ಡಾ.ದತ್ತಾತ್ರೇಯ, ಶ್ರೀದೇವಿ ರೈ, ನರಸಿಂಹ ಪೈ, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಪುರಂದರ ಹಾಗೂ ರೋಟರಿ ಯುವ ಮತ್ತು ಮಾಜಿ ಸೈನಿಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.










