







ಪುತ್ತೂರು: ನಗರದ ರಸ್ತೆಗಳಲ್ಲಿ ಸೌಂದರ್ಯ,ಕಟ್ಟುನಿಟ್ಟಾದ ಸಂಚಾರ ನಿಯಮಗಳನ್ನು ಜಾರಿಗೆ ತರಲು ಮತ್ತು ನಿಯಮ ಮೀರುವವರಿಗೆ ಕಡಿತಾಣ ಹಾಕಲು ಪೊಲೀಸ್ ಇಲಾಖೆಯು ಹೊಸ ತಂತ್ರಜ್ಞಾನದ ಅಳವಡಿಕೆಗೆ ಮುಂದಾಗಿದೆ.


ಪುತ್ತೂರಿನ ಪ್ರಮುಖ ಸ್ಥಳಗಳಾದ ಬೊಳುವಾರು ಮತ್ತು ದರ್ಬೆ ಜಂಕ್ಷನ್ಗಳಲ್ಲಿ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್ಪಿಆರ್) ಕೆಮೆರಾಗಳನ್ನು ಅಳವಡಿಸಲು ಮುಂದಾಗಿದ್ದು , ನಿಯಮ ಉಲ್ಲಂಘಿಸುವ ವಾಹನ ಸವಾರರ ವಿವರವನ್ನು ಇದು ಅತ್ಯಂತ ನಿಖರವಾಗಿ ಪತ್ತೆ ಹಚ್ಚುತ್ತದೆ.
ಈ ಆಧುನಿಕ ಕೆಮೆರಾಗಳ ಮೂಲಕ ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ವಾಹನದ ನೋಂದಣಿ ಸಂಖ್ಯೆಯನ್ನು ಆಧರಿಸಿ ನೇರವಾಗಿ ದಂಡದ ನೋಟೀಸ್ ಸಂಬಂಧಪಟ್ಟವರ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಎತ್ತಿನಹೊಳೆ, ಉಪ್ಪಿನಂಗಡಿ, ಸುಳ್ಯ ಹಾಗೂ ಬಂಟ್ವಾಳ ಗ್ರಾಮಾಂತರ ವ್ಯಾಪಿಯ ವಾಹನ ದಟ್ಟಣೆಯಿರುವ ಸ್ಥಳಗಳಲ್ಲಿ ಈಗಾಗಲೇ ವಿಟಿಎಂಎಸ್ ಯೋಜನೆಯಡಿಯಲ್ಲಿ ಎಎನ್ಪಿಆರ್ ಕೆಮೆರಾಗಳನ್ನು ಅಳವಡಿಸಿ, ದಂಡ ವಿಧಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.




ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸದಿರುವುದು, ಟ್ರಿಪಲ್ ರೈಡ್, ಆಟೋ ರಿಕ್ಷಾಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು ಮುಂತಾದ ಹಲವು ಬಗೆಯ ಸಂಚಾರ ನಿಯಮ ಉಲ್ಲಂಘನೆಗಳನ್ನು ಈ ಕೆಮೆರಾಗಳು ಪತ್ತೆ ಮಾಡುತ್ತವೆ.
“ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಯುವ ದೃಷ್ಟಿಯಿಂದ ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಯೋಜನೆಯಡಿಯಲ್ಲಿ ಈ ಕೆಮೆರಾಗಳನ್ನು ಅಳವಡಿಸಿ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದ್ದು, ಇತರ ಭಾಗಗಳಿಗೂ ಇದು ವಿಸ್ತರಣೆಗೊಳ್ಳಲಿದೆ.” ಎನ್ನಲಾಗಿದೆ.










