ವ್ಯಾಸರಾಯ ಬಲ್ಲಾಳ ಪ್ರಶಸ್ತಿಗೆ ಚಂದ್ರಶೇಖರ ಪಾಲೆತ್ತಾಡಿ ಆಯ್ಕೆ

0

ಪುತ್ತೂರು: ಕನ್ನಡದ ಹೆಸರಾಂತ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ನೆನಪಿನಲ್ಲಿ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಕೊಡ ಮಾಡುವ 2026 ರ ಸಾಲಿನ ವ್ಯಾಸರಾಯ ಬಲ್ಲಾಳ ಪ್ರಶಸ್ತಿಗೆ ಖ್ಯಾತ ಪತ್ರಕರ್ತ, ಕರ್ನಾಟಕ ಮಲ್ಲ ದೈನಿಕದ ಸಂಪಾದಕರಾಗಿರುವ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಸರ್ವಾನುಮತದಿಂದ ಆರಿಸಲಾಗಿದೆ.

ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿದೆ.ದಿನಾಂಕ ಅ.19 ರ ಮಧ್ಯಾಹ್ನ ಮುಂಬಯಿ ವಿಶ್ವವಿದ್ಯಾಲಯದಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಪ್ರತಿಷ್ಠಾನದ ಸಂಚಾಲಕರಾದ ಕುಸುಮ ಬಲ್ಲಾಳ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಹಾಗೂ ಆಯ್ಕೆ ಸಮಿತಿಯ ಸದಸ್ಯರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಹಾಜರಿದ್ದು, ಚಂದ್ರಶೇಖರ ಪಾಲೆತ್ತಾಡಿ ಅವರ ಪತ್ರಿಕೋದ್ಯಮದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಯಿತು.

ವ್ಯಾಸರಾಯ ಬಲ್ಲಾಳ ಅವರು ಮೊದಲು ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿ ಬಳಿಕ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟವರು. ನುಡಿ ಪತ್ರಿಕೆಯ ಬೆಳವಣಿಗೆಯಲ್ಲಿ ಬಲ್ಲಾಳರ ಪಾತ್ರ ಅಪಾರವಾದುದು. ಹೀಗಾಗಿ ಈ ಸಾಲಿನ ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಕೊಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಚಂದ್ರಶೇಖರ ಪಾಲೆತ್ತಾಡಿ:-

ಮುಂಬಯಿ ಕನ್ನಡ ಪತ್ರಿಕೋದ್ಯಮದಲ್ಲಿ ಚಂದ್ರಶೇಖರ ಪಾಲೆತ್ತಾಡಿ ಅವರದು ಎದ್ದು ಕಾಣುವ ಹೆಸರು ಹಾಗೂ ವಿಶಿಷ್ಟ ಸಾಧನೆ. ಹೊಸ ಸಹಸ್ರಮಾನದಲ್ಲಿ ಅವರು ಮುಂಬಯಿಯಲ್ಲಿ ಕನ್ನಡದ ಕ್ರಾಂತಿಯನ್ನು ಗೈದವರು. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತ ಬಂದ ಪಾಲೆತ್ತಾಡಿ ಅವರು ಮುಂಬಯಿಯಲ್ಲಿ ಕನ್ನಡಕ್ಕೆ ಹೊಸ ಚೈತನವನ್ನು ನೀಡಿದವರು. ಅವರ ಸಮಗ್ರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ಮೊಹರೆ ಹನುಮಂತರಾಯ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಗೌರವವನ್ನು ನೀಡಿ ಗೌರವಿಸಿದೆ. ಆಪ್ತ ಮಿತ್ರ ಅವರಿಗೆ ಸಂದ ಗೌರವ ಗ್ರಂಥ. ಪಾಲೆತ್ತಾಡಿ ಅವರ ನಿರಂತರ ಪರಿಶ್ರಮ, ಪ್ರಯತ್ನಗಳಿಂದ ಕರ್ನಾಟಕ ಮಲ್ಲ ಇಂದಿಗೂ ಉಳಿದು ಬೆಳೆದು ಸಮೃದ್ಧ ಪತ್ರಿಕೆಯಾಗಿ ಮುಂಬಯಿ ಮಹಾನಗರದಲ್ಲಿ ಕಂಗೊಳಿಸುತ್ತಿದೆ ಎಂಬುದು ಅಭಿಮಾನ ಪಡುವ ಸಂಗತಿ. ಕರ್ನಾಟಕ ಮಲ್ಲದಲ್ಲಿ ಪಾಲೆತ್ತಾಡಿ ಅವರು ಬರೆದ ಸಂಪಾದಕೀಯಗಳು, ಅಂಕಣ ಬರಹಗಳ ಸಂಖ್ಯೆ ಹತ್ತು ಸಾವಿರವನ್ನೂ ಮೀರಿರುವುದು ವಿಶೇಷ. ಮುಂಬಯಿಯ ತುಳು – ಕನ್ನಡಿಗರ ಪ್ರೀತ್ಯಾದರಗಳಿಗೆ ಪಾತ್ರರಾಗಿರುವ ಚಂದ್ರಶೇಖರ ಪಾಲೆತ್ತಾಡಿ ಅವರು ನೇರ ನಡೆ ನುಡಿಗೆ ಹೆಸರಾದ ಅಪರೂಪದ ಚೇತನ.

LEAVE A REPLY

Please enter your comment!
Please enter your name here