ಪುತ್ತೂರಿನ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ 11ನೇ ಶಾಖೆ ಮಂಗಳೂರಿನಲ್ಲಿ ಉದ್ಘಾಟನೆ

0

ಸಚಿವ ಯು.ಟಿ. ಖಾದರ್, ಶಾಸಕ ಭರತ್ ಶೆಟ್ಟಿ, ಹಾಸ್ಯ ಅರವಿಂದ ಬೋಳಾರ್ ಭಾಗಿ

ಮಂಗಳೂರು: ಪ್ರಯೋಗಾಲಯ ಕ್ಷೇತ್ರದಲ್ಲಿ ಹಲವು ಹೊಸತನಗಳೊಂದಿಗೆ, ಪುತ್ತೂರು ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿರುವ ಪುತ್ತೂರಿನ ಪ್ರಸಿದ್ಧ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ 11ನೇ ಶಾಖೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಎಸ್ಸೆಲ್ ಟವರ್ಸ್ ನಲ್ಲಿ ಅ.19ರಂದು ಶುಭಾರಂಭಗೊಂಡಿತು.

ನೂತನ ಶಾಖೆಯನ್ನು ಚಿತ್ರ ಹಾಸ್ಯ ನಟ ಅರವಿಂದ ಬೋಳಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಸಿದ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಅವರು ಮಾತನಾಡಿ, ವೈದ್ಯಕೀಯ ಪ್ರಯೋಗಾಲಯ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆ ಗಳಿಸಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಚೇತನ್ ಪ್ರಕಾಶ್ ಕಜೆ ಅವರ ನಾಯಕತ್ವದಲ್ಲಿ ಮಂಗಳೂರಿನಲ್ಲಿ ಆರಂಭವಾಗುತ್ತಿರುವುದು ಸಂತೋಷದ ವಿಚಾರವಾಗಿದೆ. ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆಹಚ್ಚುವುದು ಮುಖ್ಯ. ಈ ನಿಟ್ಟಿನಲ್ಲಿ ಗುಣಮಟ್ಟದ ಪ್ರಯೋಗಾಲಯಗಳ ಪಾತ್ರ ಮಹತ್ವದ್ದಾಗಿದೆ ಎಂದರು.



ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಸೂಕ್ತ ಚಿಕಿತ್ಸೆ ನೀಡಲು ನಿಖರವಾದ ರೋಗನಿರ್ಣಯ ಅತ್ಯಗತ್ಯ. ಇದಕ್ಕಾಗಿ ವಿಶ್ವಾಸಾರ್ಹ ಪ್ರಯೋಗಾಲಯಗಳ ಅಗತ್ಯವಿದೆ. ನಿಖರ ವರದಿಗಳಿಗೆ ಹೆಸರಾಗಿರುವ ಧನ್ವಂತರಿ ಲ್ಯಾಬೊರೇಟರಿಯ ನೂತನ ಶಾಖೆಯಿಂದ ಮಂಗಳೂರು ನಗರ ಹಾಗೂ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.



ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ಕಜೆ ಅತಿಥಿಗಳನ್ನು ಸ್ವಾಗತಿಸಿ, ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿಶೇಷ ಸೇವೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸೋಮಯಾಜಿ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್‌ನ ಬಿ.ಆರ್. ಸೋಮಯಾಜಿ, ವಿಜೆ ವಿಖ್ಯಾತ್, ಚೇತನ್ ಪ್ರಕಾಶ್ ಕಜೆ ಅವರ ತಂದೆ ಡಾ. ಚಂದ್ರಶೇಖರ್ ಕಜೆ, ತಾಯಿ ಜಾನಕಿ, ಪತ್ನಿ ಡಾ. ಪ್ರಸನ್ನಾ ಚೇತನ್, ಪುತ್ರಿ ಜೀವಿತಾ, ಪುತ್ರ ಆಯುಷ್ಮಾನ್, ಸಹೋದರ ಡಾ. ಕೀರ್ತನ್ ಕಜೆ ಮತ್ತಿತರರು ಉಪಸ್ಥಿತರಿದ್ದರು. ಆಶಿಕ್ ಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here