ಗುರುವಿನ ಹುಟ್ಟುಹಬ್ಬವನ್ನು ಹೆದ್ದಾರಿ ಬದಿಯಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಿದ ಶಿಷ್ಯ

0

ಪುತ್ತೂರು: ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಹೆಚ್.ಬಿ ಅವರ ಹುಟ್ಟುಹಬ್ಬ ಪ್ರಯುಕ್ತ ಅವರ ಹಿರಿಯ ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಸೇರಿಕೊಂಡು ಪ್ರತೀ ವರ್ಷ ಒಂದೊಂದು ಜಿಲ್ಲೆಗೆ ಪ್ರವಾಸ ಆಯೋಜಿಸಿ ಅಲ್ಲಿ `ಹಿರಿಯ ವಿದ್ಯಾರ್ಥಿಗಳ ಗೌರವ ದಿನ’ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು ಈ ಬಾರಿ ಅ.18ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಿತಾರಾ ಬೋಟ್ ಹೌಸ್‌ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಶ್ರೀನಿವಾಸ್ ಹೆಚ್.ಬಿ ಅವರು ತನ್ನ ಶಿಷ್ಯ ಬಳಗ ಹಾಗೂ ಅಭಿಮಾನಿಗಳ ಜೊತೆ ಬಸ್ ಮೂಲಕ ಬ್ರಹ್ಮಾವರಕ್ಕೆ ತೆರಳುತ್ತಿರುವ ವಿಷಯ ತಿಳಿದ ಶ್ರೀನಿವಾಸ್ ಹೆಚ್.ಬಿ ಅವರ ಶಿಷ್ಯ, ಖ್ಯಾತ ಕಬಡ್ಡಿ ಆಟಗಾರ ಮೋಹನ್ ಕುಮಾರ್ ಎಂಬವರು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಕ್ಕ ಎಂಬಲ್ಲಿ ಹೆದ್ದಾರಿ ಬದಿಯಲ್ಲೇ ತನ್ನ ನೆಚ್ಚಿನ ಗುರುವಿಗೆ ಹುಟ್ಟುಹಬ್ಬದ ಶುಭ ಕೋರಲು ವ್ಯವಸ್ಥೆ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ.


ಶ್ರೀನಿವಾಸ್ ಹೆಚ್.ಬಿ ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಹಾರಾರ್ಪಣೆ ಮಾಡಿ ಸನ್ಮಾನಿಸಿದ ಮೋಹನ್ ಕುಮಾರ್ ಅವರು ಅಲ್ಲೇ ಕೇಕ್ ಕಟ್ ಮಾಡುವ ಮೂಲಕ ತನ್ನ ಗುರುವಿನ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸುವ ರೀತಿಯಲ್ಲಿ ಆಚರಿಸಿಕೊಂಡರು. ಒಂದು ರೀತಿಯ ವಿಶೇಷ ಎನ್ನಬಹುದಾದ ಈ ವಿಶಿಷ್ಟ ಸನ್ನಿವೇಶ ಗುರು-ಶಿಷ್ಯ ನಡುವಿನ ಪ್ರೀತಿ, ಅಭಿಮಾನ, ಗೌರವಕ್ಕೆ ಹೊಸ ಭಾಷ್ಯ ಬರೆಯಿತು.


ಖುಷಿಯಿಂದಲೇ ಗೌರವ ಸ್ವೀಕರಿಸಿದ ಶ್ರೀನಿವಾಸ್ ಹೆಚ್.ಬಿ ಅವರು ತನ್ನ ಮೇಲೆ ಇಷ್ಟೆಲ್ಲಾ ಪ್ರೀತಿ ಮತ್ತು ಅಭಿಮಾನ ತೋರುವ ಹಿರಿಯ ವಿದ್ಯಾರ್ಥಿಗಳನ್ನು ಪಡೆದ ತಾನು ಭಾಗ್ಯವಂತ ಎಂದು ಹೇಳಿದರು. ನಮಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡಿ ಈ ಮಟ್ಟಕ್ಕೆ ಬೆಳೆಸಿದ ಗುರುವಿಗೆ ಇಷ್ಟಾದರೂ ಗೌರವ ಕೊಡಲು ಸಾಧ್ಯವಾಗಿರುವುದಕ್ಕೆ ಅಪಾರ ಖುಷಿಯಿದೆ ಎಂದು ಮೋಹನ್ ಕುಮಾರ್ ಹೇಳಿದರು.

LEAVE A REPLY

Please enter your comment!
Please enter your name here