







ಕರ್ನಾಟಕ,ಕೇರಳ,ತುಳುನಾಡಿನ ವೈವಿಧ್ಯಮಯ ಕಲಾ ಪ್ರದರ್ಶನ-ಭಾಗಿಯಾದ ಭಕ್ತ ಸಾಗರ


ಪುತ್ತೂರು:ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಬಳಿಯಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಪ್ರಯುಕ್ತ ನಡೆದ 92ನೇ ವರ್ಷದ ಶಾರದೋತ್ಸವ-ಪುತ್ತೂರು ದಸರಾದ ವೈಭವದ ಶೋಭಾಯಾತ್ರೆ ಭಕ್ತ ಸಾಗರದ ನಡುವೆ ಅ.21ರಂದು ಸಂಜೆ ನಡೆಯುವ ಮೂಲಕ, ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಅವರ ನೇತೃತ್ವದಲ್ಲಿ ಸರ್ವರ ಸಹಕಾರದೊಂದಿಗೆ ನಡೆದ 11 ದಿನಗಳ ಪುತ್ತೂರು ದಸರಾ ಯಶಸ್ವಿಯಾಗಿ ಸಂಪನ್ನಗೊಂಡಿತು.




ನವರಾತ್ರಿಯ ಸಂದರ್ಭ ಶಾರದಾ ಭಜನಾ ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶಾರದೆ ಮಾತೆಯ ವಿಗ್ರಹಕ್ಕೆ ಅ.21ರಂದು ಮಧ್ಯಾಹ್ನ ಜಲ್ಲಿ ಮುಡಿಸಿ ಶೃಂಗಾರ ಮಾಡಿ ಪೂಜೆ ಸಲ್ಲಿಸಿ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಂದು ಸುತ್ತು ಬಂದು ಕೆರೆಯ ಬಳಿಯಿಂದ ಅಲಂಕೃತ ರಥಕ್ಕೆ ತರಲಾಯಿತು.ಆರಂಭದಲ್ಲಿ ಶ್ರೀ ಶಾರದಾ ಮಾತೆಗೆ ಮಲ್ಲಿಗೆ ಹೂವಿನ ಅಲಂಕಾರದಲ್ಲಿ ಜಲ್ಲಿ ಮುಡಿಸುವ ಕಾರ್ಯಕ್ರಮ ನಡೆಸಲಾಯಿತು.ಶಿಖಾ ಬ್ಯೂಟಿಪಾರ್ಲರ್ನ 5 ಮಂದಿ ಸುಮಾರು ಎರಡೂವರೆ ಗಂಟೆಗಳ ಕಾಲ ಶ್ರೀ ಶಾರದೆಯನ್ನು ಅಲಂಕರಿಸಿದರು.ಬಳಿಕ ಮಂದಿರದಲ್ಲಿ ಮೂಲ ಗುಡಿಯಲ್ಲಿ ಮಂಗಳಾರತಿ ಮಾಡಿ,ಶಾರದೆಯ ವಿಗ್ರಹಕ್ಕೆ ಮಂಗಳಾರತಿ ಮಾಡಲಾಯಿತು.ನಂತರ ತೆಂಗಿನ ಕಾಯಿ ಒಡೆದು ಶಾರದೆ ವಿಗ್ರಹವನ್ನು ಬೊಳುವಾರಿಗೆ ಕೊಂಡೊಯ್ಯಲಾಯಿತು.ಅಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.ಕರ್ನಾಟಕ ಹಾಗೂ ಕೇರಳ ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ತುಳುನಾಡಿನ ವಿವಿಧ ಜಾನಪದ ಕಲಾ ತಂಡಗಳ ವಿಭಿನ್ನ ಕಲಾ ಪ್ರದರ್ಶನಗಳೊಂದಿಗೆ ಆರಂಭಗೊಂಡ ಶೋಭಾಯಾತ್ರೆಯು ಬೊಳುವಾರಿನಿಂದ ಪುತ್ತೂರು ಪೇಟೆಯಾದ್ಯಂತ ನಿಗದಿ ಪಡಿಸಿದ ಸ್ಥಳಗಳಲ್ಲಿ ಪ್ರದರ್ಶನ ನೀಡಿ ದರ್ಬೆ ವೃತ್ತದವರೆಗೆ ಸಾಗಿ ಅಲ್ಲಿಂದ ಹಿಂದಿರುಗಿ ಬಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯ ಕೆರೆಯಲ್ಲಿ ಶಾರದೆ ವಿಗ್ರಹ ಜಲಸ್ಥಂಭನಗೊಳಿಸಲಾಯಿತು.

ಶೋಭಾಯಾತ್ರೆಗೆ ಬೊಳುವಾರಿನಲ್ಲಿ ಚಾಲನೆ:
ಬೊಳುವಾರು ವೃತ್ತದಲ್ಲಿ ಭಗವಧ್ವಜಾರೋಹಣವನ್ನು ಮುಂಬಯಿಯ ಹೇರಂಬ ಇಂಡಸ್ಟ್ರೀಸ್ನ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿರುವ ಕನ್ಯಾನ ಸದಾಶಿವ ಶೆಟ್ಟಿ ಕೂಳೂರು ಅವರು ನೆರವೇರಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.ಅಲಂಕೃತಗೊಂಡ ತೆರೆದ ವಾಹನದಲ್ಲಿದ್ದ ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರಕ್ಕೆ ಸೇರಿದ್ದ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.ಶಾಸಕ ಅಶೋಕ್ ಕುಮಾರ್ ರೈ ಅವರು ಶ್ರೀ ಶಾರದಾ ಮಾತೆಗೆ ಪುಷ್ಪಾರ್ಚನೆ ಮಾಡಿದರು.ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ರಥಾರತಿ ಬೆಳಗಿದರು.ಬಳಿಕ ಶ್ರೀ ಶಾರದಾ ಮೂರ್ತಿಗೆ ಮಂಗಳಾರತಿ ನಡೆದು ಶೋಭಾಯಾತ್ರೆ ಆರಂಭಗೊಂಡಿತು.ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿದರು.

ಊರಲ್ಲಿ ಇಷ್ಟೊಂದು ಗೌಜಿ ಗದ್ದಲ ಸಂತೋಷ:
ಮುಂಬಯಿಯ ಹೇರಂಬ ಇಂಡಸ್ಟ್ರೀಸ್ನ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿರುವ ಕನ್ಯಾನ ಸದಾಶಿವ ಶೆಟ್ಟಿ ಕೂಳೂರು ಅವರು ಮಾತನಾಡಿ ಬೇರೆ ಬೇರೆ ಕಡೆ ನವರಾತ್ರಿಯ ಉತ್ಸವಾದಿಗಳು ನಡೆಯುತ್ತವೆ.ಆದರೆ ಪುತ್ತೂರಿನಲ್ಲಿ ವಿಶೇಷ ಕಾರ್ಯಕ್ರಮ.ಊರಿನಲ್ಲಿ ಇಷ್ಟೊಂದು ಗೌಜಿ ಗದ್ದಲದಿಂದ ಉತ್ಸವ ನಡೆಯುವುದು ಸಂತೋಷ.ನಾನು ಕೂಡಾ ತಾಯಿ ದೇವಿಯ ಆರಾಧಕ.ನಾನು ಸಣ್ಣ ವಯಸ್ಸಿನಲ್ಲಿರುವಾಗ ನನಗೆ ತಂದೆ ತಾಯಿ ಅಕ್ಷರಾಭ್ಯಾಸ ಮಾಡಿಸಿದ್ದು ಶಾರದೆಯ ಮುಂದೆ.ಇವತ್ತು ನಾನೇನು ಸಾಽಸಿದ್ದೇನೋ ಅದು ದೇವಿಯ ಕೃಪೆಯಿಂದ ಎಂದರು.

ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು,ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಲದ ನಿರ್ದೇಶಕ,ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ ಆಗಿರುವ ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು,ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಜಯಪ್ರಕಾಶ್ ಸುಳ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಆಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ವಿಶ್ವಹಿಂದು ಪರಿಷದ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ,ಶೋಭಾಯಾತ್ರೆಯ ಸಂಚಾಲಕ ಕೃಷ್ಣ ಎಂ ಅಳಿಕೆ, ಶ್ರೀ ಮಹಾಲಿಂಗೇಶ್ವರ ವಠಾರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಡಾ| ರವೀಶ ಪಡುಮಲೆ,ಪುತ್ತೂರು ದೀಪೋತ್ಸವ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ರವೀಂದ್ರ ಶೆಟ್ಟಿ ನುಳಿಯಾಲು, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಉದ್ಯಮಿ ಸೂರಜ್ ಶೆಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಪದ್ಮಶ್ರೀ ಬಳಗದ ರತ್ನಾಕರ ರೈ ಕೆದಂಬಾಡಿಗುತ್ತು, ವಸಂತ ರೈ ಕೆದಂಬಾಡಿಗುತ್ತು,ಸುಜಾತಕೃಷ್ಣಕುಮಾರ್ ರೈ,ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು, ಅಜಿತ್ ರೈ ಹೊಸಮನೆ, ಮಾಧವ ‘ಸ್ವಾಮಿ’, ಶ್ರೀ ಶಾರದಾ ಭಜನಾ ಮಂದಿರದ ಹಿರಿಯರಾದ ಕಿಟಣ್ಣ ಗೌಡ ಬಪ್ಪಳಿಗೆ, ಶ್ರೀ ಶಾರದೆಯ ಶಿಲ್ಪಿ ಶ್ರೀನಿವಾಸ ಪ್ರಭು, ಶಾರದಾ ಭಜನಾ ಮಂದಿರದ ಕೋಶಾಧಿಕಾರಿ ವಸಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಶಾರದೋತ್ಸವ ಸಮಿತಿ ಮಾತೃಮಂಡಳಿ ಸದಸ್ಯರು, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ ಕುಲಾಲ್ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.ಶೋಭಾಯಾತ್ರೆಯ ಇನ್ನೋರ್ವ ಸಂಚಾಲಕ ನವೀನ್ ಕುಲಾಲ್ ಪುತ್ತೂರು ಕಾರ್ಯಕ್ರಮ ನಿರ್ವಹಿಸಿದರು.ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಯಾಂತ್ರೀಕೃತ ವಿಧಾನದಲ್ಲಿ ವಿಗ್ರಹದ ಜಲಸ್ಥಂಭನ:
ದರ್ಬೆ ವೃತ್ತದ ತನಕ ಸಾಗಿ ನಂತರ ಹಿಂತಿರುಗಿ ಆಗಮಿಸಿ ದೇವಸ್ಥಾನದ ಎದುರಿನ ಗದ್ದೆಯಲ್ಲಿರುವ ಕೆರೆಯಲ್ಲಿ ಯಾಂತ್ರೀಕೃತ ತಂತ್ರಜ್ಞಾನದ ಮೂಲಕ ವಿಶಿಷ್ಠ ರೀತಿಯಲ್ಲಿ ಶಾರದಾ ವಿಗ್ರಹದ ಜಲಸ್ಥಂಭನ ನಡೆಯಿತು.ಶೋಭಾಯಾತ್ರೆಯಲ್ಲಿ ಶಾರದಾ ಮಾತೆಗೆ ಭಕ್ತಾದಿಗಳು ಹಣ್ಣುಕಾಯಿ ಹಾಗೂ ಮಂಗಳಾರತಿ ಸೇವೆ ಮಾಡಿಸಿ ಪ್ರಸಾದ ಸ್ವೀಕರಿಸಿದರು.ಸಂಪ್ರದಾಯ, ಸಂಸ್ಕೃತಿ, ಧಾರ್ಮಿಕತೆಗೆ ಅನುಗುಣವಾಗಿ ಸುಂದರವಾಗಿ, ಶಿಸ್ತುಬದ್ಧ ಹಾಗೂ ಅಚ್ಚುಕಟ್ಟಾಗಿ ಶೋಭಾಯಾತ್ರೆ ನೆರವೇರಿತು.

6 ಕೇಂದ್ರಗಳಲ್ಲಿ ಕಲಾ ಪ್ರದರ್ಶನ:
ಶೋಭಾಯಾತ್ರೆಯಲ್ಲಿ ಬೊಳುವಾರು ವೃತ್ತದಿಂದ ದರ್ಬೆಯ ತನಕ 6 ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಶೋಭಾಯಾತ್ರೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.ಬೊಳುವಾರು ವೃತ್ತ, ಇನ್ಲ್ಯಾಂಡ್ ಮಯೂರ, ಶ್ರೀಧರ ಭಟ್ ಬ್ರದರ್ಸ್, ಬಸ್ ನಿಲ್ದಾಣ, ಹೊಟೇಲ್ ಸುಜಾತ ಬಳಿ ಅಲ್ಲಲ್ಲಿ ಪ್ರದರ್ಶನ ನಡೆಯಿತು.ಅಂತಿಮವಾಗಿ ದರ್ಬೆ ವೃತ್ತದ ಬಳಿ ಕಲಾ ತಂಡಗಳಿಂದ ವಿಶೇಷ ಪ್ರದರ್ಶನಗಳು ನಡೆದವು.

ವೈವಿಧ್ಯಮಯ ಕಲಾ ತಂಡಗಳು
ಶೋಭಾಯಾತ್ರೆಯಲ್ಲಿ ಭಗವಾಧ್ವಜ ತೆರೆದ ವಾಹನ, ಕರ್ನಾಟಕ, ಕೇರಳ ಹಾಗೂ ತುಳುನಾಡಿನ ವೈವಿಧ್ಯಮಯ ಕಲಾ ತಂಡಗಳ ಸಾಂಸ್ಕೃತಿಕ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿತ್ತು. ಆರಂಭದಲ್ಲಿ ಉಪ್ಪಿನಂಗಡಿಯ ಐಶ್ವರ್ಯ ರೈ ಅವರು ಬಾಲ ಶಾರದೆಯಾಗಿ ವಿಶೇಷ ಆಕರ್ಷಣೆಯಾಗಿದ್ದರು.ಅವರ ಹಿಂದೆ ಸುಮಾರು 8೦೦ ಮಂದಿ ಭಜಕರ ಕುಣಿತ ಭಜನೆಯ ಮೂರು ತಂಡಗಳು ಹಾಗು ಅದಕ್ಕೆ ಬೇಕಾದ ಭಜನಾ ವಾಹನ, ಮುತ್ತುಕೊಡೆ, ತ್ರಿಶೂರ್ನಿಂದ ಬಂದಿರುವ ಕಥಕಳಿ ಬೋರ್ಡ್, ಕಾಳಿ ನೃತ್ಯ, ಕರೀಂಗಾಳಿ, ತಿರುಪತಿ ಬೋರ್ಡ್, ಪೂತಂತೇರ ದುಡಿ ನೃತ್ಯ, ದೇವ ರೂಪಂ, ಅರೆಯನ್ನಮ್ ಕಲಾತಂಡ, ಅಘೋರಿಗಳ ನೃತ್ಯ ರೂಪಕ ತಂಡ, ಲಕ್ಷ್ಮೀ ದೇವಿ ಬೆಟ್ಟದ ಕಹಳೆ ಸಹಿತ ಚೆಂಡೆ, ಗೊರಿಲ್ಲಾ ತಂಡ, ದೇವಿ ಬೋರ್ಡ್, ತಾಂಬೋಲಂ ಚರ್ಮವಾದ್ಯ, ವಯೋಲಿನ್ ಸಹಿತ ಮಣಿಕಂಠ ಚೆಂಡೆ, ಶಾರದೆ ಮಾತೆಯ ರಥದ ಜೊತೆ ಪಿ.ಕೆ.ಗಣೇಶ್ ಅವರ ನೇತೃತ್ವದಲ್ಲಿ ಸ್ಯಾಕ್ಸೋಫೋನ್ ವಾದನದಿಂದ ಮಂಗಳವಾದ್ಯ ವಿಶೇಷ ಆರ್ಷಣೆಯಾಗಿತ್ತು.ದಯಾನಂದ ಪಿ ಅವರು ಶಾರದಾ ರಥದ ಸಾರಥಿಯಾಗಿದ್ದರು.


ಪೇಟೆಯುದ್ದಕ್ಕೂ ವಿದ್ಯುತ್
ದೀಪದ ಬೆಳಕಿನ ಶೃಂಗಾರಶೋಭಾಯಾತ್ರೆ ತೆರಳುವ ಬೊಳುವಾರಿನಿಂದ ದರ್ಬೆ ವೃತ್ತದವರೆಗೆ ಶೋಭಾಯಾತ್ರೆ ಸಮಿತಿ ವತಿಯಿಂದ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.ರಸ್ತೆಗೆ ಅಡ್ಡಲಾಗಿ ಹಾಗೂ ರಸ್ತೆ ವಿಭಜಕದ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.ಪುತ್ತೂರು ಪೇಟೆಯಲ್ಲಿ ಬೆಳಕಿನ ಹಬ್ಬವಾದರೆ ಶಾರದೆ ಮಾತೆ ಭಕ್ತರಿಗೆ ಬೆಳಕಿನ ಅಶೀರ್ವಾದ ನೀಡಿದರು.


ಬೆಲೆಬಾಳುವ ಸೀರೆಯೊಂದಿಗೆ ಅಲಂಕೃತ ಶಾರದೆಯ ಜಲಸ್ತಂಭನ
ಶಾರದಾ ಮಾತೆಗೆ ಸಾವಿರಾರು ರೂಪಾಯಿ ಬೆಲೆ ಬಾಳುವ ಸೀರೆಯನ್ನು ಭಕ್ತರು ಸಮರ್ಪಣೆ ಮಾಡುತ್ತಾರೆ.ಪ್ರತಿ ವರ್ಷ ಒಬ್ಬ ಭಕ್ತರಿಗೆ ಈ ಅವಕಾಶ ಸಿಗುತ್ತದೆ.ಈ ಬಾರಿ ಮಹಾಲಿಂಗೇಶ್ವರ ದೇವಸ್ಥಾನದ ಸಿಬ್ಬಂದಿ ಶೋಭಾ ಅವರಿಗೆ ಈ ಅವಕಾಶ ಲಭಿಸಿತ್ತು.ಸಮರ್ಪಣೆ ಮಾಡಿದ ಸೀರೆ ಸಹಿತ ಅಲಂಕೃತ ಶಾರದಾ ಮಾತೆಯನ್ನು, ಯಾವುದೇ ಅಲಂಕಾರವನ್ನು ಕಳಚದೆ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯ ಕೆರೆಯಲ್ಲಿ ಜಲಸ್ತಂಭನಗೊಳಿಸಲಾಯಿತು. ಜಲಸ್ತಂಭವನ್ನು ಕೂಡಾ ತಾಂತ್ರಿಕ ರೀತಿಯಲ್ಲಿ ನಿಧಾನವಾಗಿ ನೆರವೇರಿಸಲಾಯಿತು.


ನವರಾತ್ರಿಯ ಆರಂಭದಲ್ಲೂ ಕೊನೆಯಲ್ಲೂ ಶುಭಶಕುನ !
ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ ಅ.11ರಂದು ನವರಾತ್ರಿಯ ಆರಂಭದ ದಿನ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಪ್ರಾರ್ಥನೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಶ್ರೀ ಗಣಪತಿಯ ಗದ್ದಿಗೆಯಿಂದ ಹೂವು ಹಾಗೂ ಹಿಂಗಾರ ಜಾರಿ ಬಿದ್ದು ಶುಭಶಕುನ ನೀಡಿತ್ತು.ಅದೇ ರೀತಿ,ಕೊನೆಯ ದಿನ ಅ.21ರಂದು ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಗೆ ಮುನ್ನ ದೇವಿಯನ್ನು ಮಂದಿರದಿಂದ ಬೀಳ್ಕೊಡುವ ಸಂದರ್ಭದಲ್ಲಿ ಅಧ್ಯಕ್ಷರು ಮತ್ತೊಮ್ಮೆ ಪ್ರಾರ್ಥನೆ ಸಲ್ಲಿಸಿದರು.ಈ ವೇಳೆ ಶ್ರೀ ಶಾರದಾ ಮಾತೆಯ ವೀಣೆಯ ಬಲಭಾಗದಿಂದ ಹೂವು ಜಾರಿ ಕೆಳಗೆ ಬಿದ್ದಿದ್ದು, ಶೋಭಾಯಾತ್ರೆಗೂ ತಾಯಿ ಶಾರದೆಯ ಶುಭಸೂಚನೆ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು.ನವರಾತ್ರಿಯ ಆರಂಭದಲ್ಲೂ ಅಂತ್ಯದಲ್ಲೂ ಇಂತಹ ಶುಭಶಕುನ ಕಂಡುಬಂದದ್ದು ವಿಶೇಷವಾಗಿತ್ತು.











