







ಪುತ್ತೂರನ್ನು ಮೈಸೂರು ದಸರಾವನ್ನಾಗಿ ಮಾಡಿದ ಅಧ್ಯಕ್ಷರು
ನೇತೃತ್ವ ನನ್ನದಾದರೂ ಶಕ್ತಿ ನಿಮ್ಮದು: ಕೆದಂಬಾಡಿಗುತ್ತು ಸೀತಾರಾಮ ರೈ


ಪುತ್ತೂರು: ಈ ಬಾರಿ ಅಭೂತಪೂರ್ವ ಯಶಸ್ಸಿನೊಂದಿಗೆ ಜನಮನ್ನಣೆ ಪಡೆದ ಪುತ್ತೂರು ದಸರಾ ಕಾರ್ಯಕ್ರಮದ ಕೃತಜ್ಞತಾ ಸಭೆ ಅ.23ರಂದು ರಾತ್ರಿ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯಿತು.
ನೇತೃತ್ವ ನನ್ನದಾದರೂ ಶಕ್ತಿ ನಿಮ್ಮದು:
ಸಭೆಯ ಅಧ್ಯಕ್ಷತೆ ವಹಿಸಿದ ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಅವರು ಮಾತನಾಡಿ ಈ ಬಾರಿಯ ಕಾರ್ಯಕ್ರಮ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಹೊರಗಡೆಯಿಂದ ಬಂದ ಸವಾಲುಗಳನ್ನು ಸ್ವೀಕರಿಸಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಸಾರ್ವಜನಿಕ ಕಾರ್ಯಕ್ರಮವನ್ನು ಈ ರೀತಿ ಮಾಡಲು ಸಾಧ್ಯವೇ ಎಂಬ ಮಾತು ಕೂಡ ಕೇಳಿ ಬಂದಿದೆ. ಕಾರ್ಯಕ್ರಮದ ನೇತೃತ್ವ ವಹಿಸಿದ್ದು ಯಾರು, ಅವರ ಮಾರ್ಗದರ್ಶನ ಇಡೀ ಹಿಂದೂ ಸಮಾಜಕ್ಕೆ ಹೇಳಿ ಎಂದು ಜಿಲ್ಲಾಡಳಿತವೇ ಮಾತನಾಡುತ್ತಿದೆ ಎಂದು ಹೇಳಿದ ಅವರು, ಇಲ್ಲಿ ಎಲ್ಲರೂ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ, ಇಲ್ಲಿ ಅಧ್ಯಕ್ಷತೆ ನನ್ನದಾದರೂ ಅದರ ಹಿಂದಿರುವ ಶಕ್ತಿ ನೀವೇ, ಇದರ ಎಲ್ಲಾ ಯಶಸ್ಸು ನಿಮಗೆ ಸಲ್ಲಬೇಕು, ದೇವಿ ಎಲ್ಲದಕ್ಕೂ ಅನುಗ್ರಹಿಸಿದ್ದಾರೆ, ವರುಣನ ಕೃಪೆ ಕೂಡ ನಮಗೆ ಸಿಕ್ಕಿದೆ. ಮುಂದೆ ದೇವಿಯ ಭಜನಾ ಮಂದಿರದ ಭವ್ಯನಿರ್ಮಾಣಕ್ಕೆ ಸಹಕರಿಸೋಣ ಎಂದು ಹೇಳಿ ಬಂದಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.




ಕಾರ್ಯಕ್ರಮ ಯಶಸ್ಸು ಕಂಡಿದೆ:
ಶೋಭಾಯಾತ್ರೆ ಸಂಚಾಲಕ ನವೀನ್ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈಯವರ ಅಧ್ಯಕ್ಷತೆಯಲ್ಲಿ ನಡೆದ ಪುತ್ತೂರು ದಸರಾ ಯಶಸ್ಸು ಕಂಡಿದೆ ಎಂದು ಜನಾಭಿಪ್ರಾಯದ ವಿಚಾರವನ್ನು ಮುಂದಿಟ್ಟರು. ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಶೋಭಾಯಾತ್ರೆ ಸಂಚಾಲಕ ಕೃಷ್ಣ ಎಂ ಅಳಿಕೆ, ಜತೆ ಕಾರ್ಯದರ್ಶಿ ಜಲಜಾಕ್ಷಿ ಹೆಗ್ಡೆ, ಭಜನಾ ಸಂಘಟಕ ಪುರುಷೋತ್ತಮ ಕೋಲ್ಪೆ, ನವನೀತ್ ಬಜಾಜ್ ಪುತ್ತೂರು ದಸರಾ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಕೃತಜ್ಞತಾ ಸಭೆಯ ಬಳಿಕ ಸಹಭೋಜನ ನಡೆಯಿತು.

ವೃತಾಚರಣೆಯ ಸಂಕಲ್ಪದೊಂದಿಗೆ ಬರಿಗಾಲ ನಡಿಗೆ
ದಸರಾ ಹಬ್ಬದ ಧಾರ್ಮಿಕ ಆಚರಣೆಯ ಅಂಗವಾಗಿ ಕೆದಂಬಾಡಿ ಸೀತಾರಾಮ ರೈಯವರು ಕೈಗೊಂಡಿರುವ ಬರಿಗಾಲ ನಡಿಗೆ ಭಕ್ತಾದಿಗಳ ಪ್ರಶಂಸೆಗೆ ಪಾತ್ರವಾಗಿದೆ. ದಸರಾ ಆರಂಭದ ಹಿಂದಿನ ದಿನ ಕಟೀಲು ಕ್ಷೇತ್ರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಅವರು, ತಾವು ಧರಿಸಿದ್ದ ಪಾದರಕ್ಷೆಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದಾರೆ. ಬಳಿಕ ನವರಾತ್ರಿಯ ಆರಂಭದ ದಿನದಿಂದ ಕೊನೆಯ ದಿನದವರೆಗೆ ವ್ರತಾಚರಣೆಯನ್ನು ಪಾಲಿಸುತ್ತಾ ಪಾದರಕ್ಷೆ ಧರಿಸದೆ ಬರಿಗಾಲಿನಲ್ಲಿ ಸಂಚರಿಸಿದ್ದಾರೆ.ಅವರ ಈ ಧಾರ್ಮಿಕ ಶ್ರದ್ಧೆ, ಭಕ್ತಿ ಹಾಗೂ ಸಂಕಲ್ಪಕ್ಕೆ ಭಕ್ತಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.










