







ಪ್ರಜಾಸೇವೆಯ ಮೂಲಕ ಅಧಿಕಾರಿಗಳೇ ಜನರ ಬಳಿಗೆ: ಅಶೋಕ್ ಕುಮಾರ್ ರೈ


ಉಪ್ಪಿನಂಗಡಿ: ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಾರ್ವಜನಿಕರು ಈ ಮೊದಲು ಸರಕಾರಿ ಕಚೇರಿಗಳಿಗೆ ಅಲೆದಾಡಬೇಕಾಗಿತ್ತು. ಜನರ ಸಂಕಷ್ಟವನ್ನು ಮನಗಂಡ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಜಾ ಸೇವೆ ಇಲಾಖೆಯನ್ನು ಸ್ಥಾಪಿಸಿದ್ದು, ಆ ಮೂಲಕ ಇಲಾಖಾ ಅಧಿಕಾರಿಗಳೇ ಜನರ ಬಳಿಗೆ ಬಂದು ಸಮಸ್ಯೆಯನ್ನು ಪರಿಹಾರಗೊಳಿಸುವ ಕೆಲಸ ಮಾಡಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪೆರ್ನೆಯ ಎ.ಎಂ. ಅಡಿಟೋರಿಯಂನಲ್ಲಿ ಅ.24ರಂದು ನಡೆದ ಬಂಟ್ವಾಳ ತಾಲೂಕು ಮಟ್ಟದ ಪ್ರಜಾ ಸೇವೆ ಆಂದೋಲನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಕಾನೂನಾತ್ಮಕವಾಗಿ ಸರಿ ಇರುವ, ಇತ್ಯರ್ಥವಾಗದ ಅರ್ಜಿಗಳನ್ನು ಪ್ರಜಾ ಸೇವೆಯ ಮೂಲಕ ಸ್ಥಳದಲ್ಲಿಯೇ ಪರಿಹರಿಸಿಕೊಡುವ ಕೆಲಸ ಮಾಡಲಾಗುವುದು. ಸ್ಥಳದಲ್ಲಿಯೇ ಪರಿಹಾರಗೊಳಿಸಲು ಸಾಧ್ಯವಾಗದಿದ್ದಲ್ಲಿ 21 ದಿನಗಳಲ್ಲಿ ಈ ಅರ್ಜಿಗಳನ್ನು ಪರಿಹಾರಗೊಳಿಸುವ ಕೆಲಸ ಮಾಡಲಾಗುವುದು. ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಈ ಆಂದೋಲನ ನಡೆಯಲಿದೆ. ಯೋಜನೆಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಬೇಕಾದರೆ ಅಧಿಕಾರಿಗಳ ಪಾತ್ರನೂ ಹಿರಿದು. ಶಾಸಕಾಂಗ ಯೋಜನೆಗಳನ್ನು ತಂದರೆ ಅದನ್ನು ಸಮರ್ಪಕವಾಗಿ ಜಾರಿಗೊಳಿಸುವ ಕೆಲಸ ಅಧಿಕಾರಿಗಳದ್ದಾಗಿದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ಜಿಲ್ಲಾಧಿಕಾರಿಯವರು ಪುತ್ತೂರಿನ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯವರು ತನ್ನ ಕಟ್ಟು ನಿಟ್ಟಿನ ಕಾರ್ಯವೈಖರಿಗೆ ಹೆಸರಾಗಿದ್ದಾರೆ. ಅವರು ಇಲ್ಲಿಗೆ ಬಂದ ನಂತರ ಜಿಲ್ಲೆಯಲ್ಲಿ ಒಂದೇ ಒಂದು ಸಂಘರ್ಷಗಳು ಸಂಭವಿಸಿಲ್ಲ. ಇಂತಹ ಅಧಿಕಾರಿಗಳು ನಮಗೆ ಬೇಕಿದೆ. ಕಚೇರಿಗೆ ಬರುವ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ಮಾತನಾಡಿ ಅವರ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಸರಕಾರಿ ಅಧಿಕಾರಿಗಳು ಮಾಡಬೇಕಿದೆ. ಇಲಾಖೆಗಳ ಬಗ್ಗೆ ಪರಸ್ಪರ ಸಂವಹನ, ಸಹಕಾರ ಸರಿಯಾಗಿ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ತಾನು ಶಾಸಕನಾದ ಮೇಲೆ 1060 ಕೋ.ರೂ. ಕುಡಿಯುವ ನೀರಿನ ಯೋಜನೆ, ಸರಕಾರಿ ಮೆಡಿಕಲ್ ಕಾಲೇಜು, ಆರ್ಟಿಒ ಟ್ರ್ಯಾಕ್ ಸೇರಿದಂತೆ ಹಲವು ಯೋಜನೆಗಳನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ತಂದಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ನನ್ನದಾಗಿದೆ. ಪ್ರತಿ ಸೋಮವಾರವನ್ನು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮೀಸಲಿಟ್ಟಿದ್ದೇನೆ. ನಾನು ಶಾಸಕನಾದ ಎರಡು ವರ್ಷ ಎಂಟು ತಿಂಗಳಲ್ಲಿ 160 ದಿನ ಬೆಳಗ್ಗೆ 10 ರಿಂದ ರಾತ್ರಿ 10ರವರೆಗೆ ನನ್ನ ಕಚೇರಿಯಲ್ಲಿ ಕೂತು ಸಾರ್ವಜನಿಕರ ಸಮಸ್ಯೆಗಳನ್ನು ಕೇಳಿ ಅದಕ್ಕೆ ಪರಿಹಾರ ನೀಡುವ ಕೆಲಸವನ್ನು ಮಾಡಿದ್ದೇನೆ ಎಂದರು.




ಪಂಚ ಗ್ಯಾರಂಟಿ ಯೋಜನೆಗಳ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಜಾಸೇವೆಯ 4ನೇಯ ಆಂದೋಲನವಾಗಿದೆ. ಪ್ರಜೆಗಳ ಸಂಕಷ್ಟ ಅರಿತು ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ರವರು ಜನ ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸಲು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅಶೋಕ್ ಕುಮಾರ್ ರೈಯವರು ಶಾಸಕರಾದ ಬಳಿಕ ಪುತ್ತೂರು ಸಾಕಷ್ಟು ಅಭಿವೃದ್ಧಿಯನ್ನು ಕಂಡಿದ್ದು, ಪೆರ್ನೆಗಿಂತ ಮೂರು ಕಿ.ಮೀ. ದೂರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿದೆ ಎನ್ನುವುದು ಈ ಭಾಗದವರಿಗೆ ಹೆಮ್ಮೆಯ ಸಂಗತಿ ಎಂದರು.
ವೇದಿಕೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಬಂಟ್ವಾಳ ತಾಲೂಕು ಅಧ್ಯಕ್ಷೆ ಜಯಂತಿ ಪೂಜಾರಿ, ದ.ಕ. ಜಿಲ್ಲಾ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಬಂಟ್ವಾಳ ತಾಲೂಕು ತಹಶೀಲ್ದಾರ್ ಮಂಜುನಾಥ್, ಬಂಟ್ವಾಳ ತಾ.ಪಂ. ಕಾರ್ಯನಿರ್ವಹಕಾಧಿಕಾರಿ ಸಚಿನ್ ಕುಮಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಪೆರ್ನೆ ಸಿಎ ಬ್ಯಾಂಕ್ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಡಿ., ಪುತ್ತೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಪ್ರಮುಖರಾದ ಸುನೀಲ್ ನೆಲ್ಸನ್ ಪಿಂಟೋ, ಮೆಕ್ಸಿಂ ಲೋಬೋ, ಸೀತಾರಾಮ ಶೆಟ್ಟಿ, ಸುಲೈಮಾನ್, ಗಣೇಶ್ ರಾಜ್, ಗುಣರಂಜನ್, ಪುಶಕರ ಪೂಜಾರಿ, ಅಬ್ದುಲ್ ರಜಾಕ್, ಉಮೇಶ್ ಬಾಕಿಮಾರ್, ಮುಹಮ್ಮದ್ ಶರೀಫ್, ಶಿವಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ವಂದೇ ಮಾತರಂ’ಗೆ ಪರದಾಡಿದ ಅಧಿಕಾರಿಗಳು!
ನೆರವಿಗೆ ಬಂದ ಶಾಸಕರ ಪಿಎ
ಶಿಷ್ಠಾಚಾರದಂತೆ ಸಭಾ ಕಾರ್ಯಕ್ರಮ ಆರಂಭಗೊಳ್ಳುವ ಮೊದಲು ಹೈಸ್ಕೂಲ್ ವಿದ್ಯಾರ್ಥಿಗಳ ತಂಡದವರಿಂದ ನಾಡ ಗೀತೆಯನ್ನು ಹಾಡಿಸಲಾಯಿತು. ಅದು ಮುಗಿದ ಕೂಡಲೇ ಅವರು ಹೋಗಿ ಸಭೆಯಲ್ಲಿ ಹೋಗಿ ಆಸೀನರಾದರು. ಆಗ ಅಧಿಕಾರಿಯೋರ್ವರು ಸ್ವಾಗತಕ್ಕೆ ಮುಂದಾಗುತ್ತಿದ್ದಂತೆ ವೇದಿಕೆಯಲ್ಲಿ ನಿಂತಿದ್ದ ಅಧಿಕಾರಿಯೋರ್ವರು ಅಲ್ಲೇ ನಿಂತಿದ್ದ ಇತರ ಅಧಿಕಾರಿಗಳೊಡನೆ ವಂದೇ ಮಾತರಂನ ಬಗ್ಗೆ ಪಿಸುಗುಟ್ಟಿದರು. ಆಗ ಗೊಂದಲಕ್ಕೀಡಾಗುವ ಸರದಿ ತಹಶೀಲ್ದಾರ್, ತಾ.ಪಂ. ಇಒ ಸೇರಿದಂತೆ ವೇದಿಕೆಯಲ್ಲಿ ನಿಂತಿದ್ದ ಅಧಿಕಾರಿಗಳದ್ದಾಯಿತ್ತಲ್ಲದೆ, ಸ್ವಾಗತವನ್ನು ತಡೆಹಿಡಿಯಲಾಯಿತು. ಅವರ ಗೊಂದಲ, ಕಳವಳ ಅರ್ಥೈಸುವಾಗ ಅಧಿಕಾರಿಗಳು ವಂದೇ ಮಾತರಂ’ ಹಾಡಿಸಲು ಪೂರ್ವ ತಯಾರಿಯೇ ಮಾಡಿರದಂತೆ ಕಂಡು ಬಂತು. ಆಗ ತಹಶೀಲ್ದಾರ್, ಇಒ ಸೇರಿದಂತೆ ಅಲ್ಲಿದ್ದ ಅಧಿಕಾರಿಗಳೆಲ್ಲರೂ `ವಂದೇ ಮಾತರಂ’ ಹಾಡಿಗಾಗಿ ಮೊಬೈಲ್ನಲ್ಲಿ ಹುಡುಕಾಟ ಆರಂಭಿಸಿದ್ದರು. ಆದರೆ ಸಕಾಲಕ್ಕೆ ಅದನ್ನು ಹುಡುಕುವಲ್ಲಿ ಅವರು ವಿಫಲವಾದರು. ಆಗ ಅಲ್ಲೇ ಇದ್ದ ಶಾಸಕರ ಆಪ್ತ ಸಹಾಯಕರಾದ ರಂಜಿತ್ ಅವರು ತನ್ನ ಮೊಬೈಲ್ನಲ್ಲಿ ಹಾಡನ್ನು ಹುಡುಕಿ ಅದನ್ನು ಮೈಕ್ ಮುಂದೇ ಪ್ಲೇ ಮಾಡಿದರು. ಆಗ ತಹಶೀಲ್ದಾರ್, ಇಒ ಸೇರಿದಂತೆ ಅಲ್ಲಿದ್ದ ಇತರ ಕೆಲ ಅಧಿಕಾರಿಗಳು ಮೈಕ್ ಮುಂದೆ ಬಂದು ನಿಂತರು. ಇಷ್ಟಾಗುವಾಗ ಸುಮಾರು 5 ನಿಮಿಷ ಹಿಡಿದಿತ್ತು. ಸಭೆಯಲ್ಲಿದ್ದವರೂ ವಂದೇ ಮಾತರಂಗೆ ಗೌರವಕೊಟ್ಟು ಎದ್ದು ನಿಂತರು. ಕರ್ನಾಟಕ ಸರಕಾರ ವಂದೇ ಮಾತರಂನ ಎರಡು ಚರಣಗಳನ್ನು ಹಾಡಬೇಕೆಂದು ನಿರ್ದೇಶನ ನೀಡಿದ್ದರೂ, ಇಲ್ಲಿ ಮಾತ್ರ ವಂದೇ ಮಾತರಂನ ಗೀತೆಯ ಪೂರ್ತಿ ಗಾಯನ ಮೊಳಗಿತು. ಈ ಎಲ್ಲಾ ಘಟನೆಗಳು ಶಾಸಕರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯವರ ಮುಂದೆಯೇ ನಡೆಯಿತು.










