ಮಳೆ ಬರಲಿ ಎಂದು ಹಲವು ಪೂಜೆ-ಹೋಮ ಹವನಗಳನ್ನು ಮಾಡುವುದನ್ನು ನೋಡಿದ್ದೇವೆ. ಆದರೆ ಅಚ್ಚರಿ ಅಂದರೆ ಗ್ರಾಮದಲ್ಲಿ ಮಳೆ ಬಾರದ ಹಿನ್ನೆಲೆ ದೇವರಿಗೆ ಗ್ರಾಮದ ಜನರು ಜಲ ದಿಗ್ಬಂಧನ ಹಾಕಿರುವ ಅಪರೂಪದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ.
ಹೌದು, ಇಲ್ಲಿನ ಗ್ರಾಮದ ಜನರು ಮಳೆಯಾಗಲಿ ಎಂದು ದೇವರ ಗರ್ಭಗುಡಿಗೆ ನೀರು ತುಂಬಿಸಿ ದ್ವಾರ ಮುಚ್ಚಿ ಗ್ರಾಮಸ್ಥರು ದೇವರಿಗೆ ಜಲ ದಿಗ್ಬಂಧನ ಹಾಕಿದ್ದಾರೆ. ಇಲ್ಲಿನ ಸೂರ್ಯನಾರಾಯಣ ದೇವರಿಗೆ ಗ್ರಾಮಸ್ಥರು ಜಲದಿಗ್ಭಂಧನ ಹಾಕಿದ್ದಾರೆ. ಗ್ರಾಮದಲ್ಲಿ ಬರಗಾಲ ಬಂದಿದ್ದು, ಮಳೆ ಬೆಳೆಯಿಲ್ಲದೇ, ಕುಡಿಯಲು ನೀರಿಲ್ಲದೇ ಜನರು ಬೇಸತ್ತು ಹೋಗಿದ್ದಾರೆ. ಹಾಗಾಗಿ ದೇವಸ್ಥಾನದಲ್ಲಿ ನೀರು ತುಂಬಿಸಿದರೆ ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ಗ್ರಾಮಸ್ಥರು ದೇವರ ಗರ್ಭಗುಡಿಗೆ ನೀರು ತುಂಬಿಸಿದ್ದಾರೆ.