ಚುಟುಕು ಸಾಹಿತ್ಯ ಪರಿಷತ್ ನಿಂದ ವಿದ್ಯಾರ್ಥಿಗಳಿಗೆ ಕವನ ರಚನಾ ಕಾರ್ಯಾಗಾರ, ಕವಿಗೋಷ್ಠಿ

0

ಸಾಹಿತ್ಯದಿಂದ ಮನಸ್ಸು ಅರಳುತ್ತದೆ: ಸವಣೂರು ಸೀತಾರಾಮ ರೈ

ಪುತ್ತೂರು: ಸಾಹಿತ್ಯಕ್ಕೆ ವಿಶೇಷವಾದ ಶಕ್ತಿ ಇದೆ. ಒಳ್ಳೆಯ ಸಾಹಿತ್ಯ ನಮ್ಮ ಮನಸ್ಸನ್ನು ಅರಳಿಸುತ್ತದೆ. ವಿದ್ಯಾರ್ಥಿಗಳು ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಅದಕ್ಕಾಗಿ ಓದುವ ಅಭ್ಯಾಸವನ್ನು ಮಾಡಬೇಕು ಆ ಮೂಲಕ ತಮ್ಮ ಜ್ಞಾನಾಭಿವೃದ್ಧಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ ಸೀತಾರಾಮ ರೈಯವರು ಹೇಳಿದರು.


ಅವರು ಚುಟುಕು ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಇದರ ವತಿಯಿಂದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ನ.26 ರಂದು ವಿದ್ಯಾಚೇತನ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಕವನಾ ರಚನಾ ಕಾರ್ಯಾಗಾರ ಮತ್ತು ಕವಿಗೋಷ್ಠಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಚು.ಸಾ.ಪ.ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಸಮದ್ ಬಾವಾರವರು ಮಾತನಾಡಿ, ಘಟಕ ಉದ್ಘಾಟನೆಗೊಂಡ ಬಳಿಕ ಮೊದಲ ಕಾರ್ಯಕ್ರಮವನ್ನು ಸವಣೂರು ವಿದ್ಯಾರಶ್ಮಿಯಲ್ಲಿ ಮಾಡುತ್ತಿದ್ದೇವೆ. ಮಕ್ಕಳಲ್ಲಿ ಚುಟುಕು ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸುವುದು ಮತ್ತು ಸಾಹಿತ್ಯದ ಬಗ್ಗೆ ಒಲವು ಮೂಡಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಚು.ಸಾ.ಪ ದ.ಕ ಜಿಲ್ಲೆಯ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟುರವರು ಮಾತನಾಡಿ, ಚು.ಸಾ.ಪ.ಪುತ್ತೂರು ಘಟಕ ಒಂದು ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಖುಷಿ ಕೊಟ್ಟಿದೆ. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸುವುದು ಇಂದಿನ ಅಗತ್ಯತೆಯಾಗಿದೆ ಎಂದರು. ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾರಾಯಣ ಮೂರ್ತಿಯವರು ಚುಟುಕಿನಲ್ಲಿರುವ ವಿಧಗಳು ಮತ್ತು ಅವುಗಳು ಹೇಳುವ ಅರ್ಥಗಳ ಬಗ್ಗೆ ಚುಟುಕು ವಾಚನ ಮಾಡುವ ಮೂಲಕ ತಿಳಿಸಿದರು.

ಕವನ ರಚನಾ ಕಾರ್ಯಾಗಾರ, ಕವಿಗೋಷ್ಠಿ
ಸಂಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಗುರು,ಮಕ್ಕಳ ಸಾಹಿತಿ ರಮೇಶ್ ಉಳಯರವರು ವಿದ್ಯಾರ್ಥಿಗಳಿಗೆ ಕವನ ರಚನೆಯ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. 1 ಗಂಟೆಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಯಾವ ರೀತಿಯಲ್ಲಿ ಚುಟುಕು ರಚನೆ ಮಾಡಬಹುದು ಎಂಬುದನ್ನು ಬಹಳ ಸೊಗಸಾಗಿ ತಿಳಿಸಿಕೊಟ್ಟರು. ಕಾರ್ಯಾಗಾರದ ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ರಮೇಶ್ ಉಳಯರವರು ವಿದ್ಯಾರ್ಥಿಗಳಿಗೆ ಸಾಹಿತ್ಯದ ಮಹತ್ವವನ್ನು ವಿವರಿಸಿದರು. ಸಾಹಿತ್ಯ ರಚನೆ ಮಾಡಬೇಕಾದರೆ ಓದು ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ಪುಸ್ತಕ ಓದುವ ಕಡೆ ಗಮನ ಹರಿಸಬೇಕು ಎಂದು ಹೇಳಿದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ, ಬಹುಮಾನ ವಿತರಿಸಿದರು. ಕಾರ್ಯಾಗಾರ ನಡೆಸಿಕೊಟ್ಟ ರಮೇಶ್ ಉಳಯರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಚು.ಸಾ.ಪ.ನ ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲಿಕಾ ಜೆ.ರೈ ರಮೇಶ್ ಉಳಯರ ಪರಿಚಯ ಪತ್ರ ಓದಿದರು.

ವೇದಿಕೆಯಲ್ಲಿ ವಿದ್ಯಾರಶ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ಸುಳ್ಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತುನ ಅಧ್ಯಕ್ಷ ಅಶ್ವಿನಿ ಕೋಡಿಬೈಲು ಉಪಸ್ಥಿತರಿದ್ದರು. ಚುಟುಕು ಸಾಹಿತ್ಯ ಪರಿಷತ್ತುನ ಕಾರ್ಯಕಾರಿ ಸಮಿತಿ ಸದಸ್ಯ ಕುಮಾರ್ ಪೆರ್ನಾಜೆ ಸ್ವಾಗತಿಸಿದರು. ಉಪಾಧ್ಯಕ್ಷ ಸಿಶೇ ಕಜೆಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಹೈದರಾಲಿ ಐವತ್ತೊಕ್ಲು ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಖಾದರ್ ಕೂರ್ನಡ್ಕ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಕುಂಬ್ರ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಗೌರವ ಸಲಹೆಗಾರರಾದ ಅಬ್ದುಲ್ ಹಮೀದ್ ಕೆ, ಕಾರ್ಯಕಾರಿ ಸಮಿತಿ ಸದಸ್ಯ ಸಫ್ವಾನ್ ಸವಣೂರು, ಕಮರುದ್ದೀನ್ ಸಾಲ್ಮರ ಸಹಕರಿಸಿದ್ದರು.

124 ವಿದ್ಯಾರ್ಥಿಗಳ ಭಾಗವಹಿಸುವಿಕೆ
ವಿದ್ಯಾರ್ಥಿಗಳ ಕವನ ರಚನಾ ಕಾರ್ಯಾಗಾರದಲ್ಲಿ ವಿದ್ಯಾರಶ್ಮಿಯ 124 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 24ವಿದ್ಯಾರ್ಥಿಗಳು ಚುಟುಕು ವಾಚನ ಮಾಡಿದರು. ಚು.ಸಾ.ಪ.ನ ಜತೆ ಕಾರ್ಯದರ್ಶಿ ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here