ಕೆಎಸ್‌ಆರ್‌ಟಸಿ ಬಸ್ ಕಂಡಕ್ಟರ್‌ಗೆ ಹಲ್ಲೆ : ಪ್ರಕರಣ ದಾಖಲು

0

ಬೆಳ್ಳಾರೆ: ಬೆಳ್ಳಾರೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕರೋರ್ವರಿಗೆ ಹಲ್ಲೆ ನಡೆದ ಘಟನೆ ನಡೆದಿದ್ದು ಹಲ್ಲೆ ನಡೆಸಿದ ವ್ಯಕ್ತಿಯ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿದೆ.

ಸುಳ್ಯದಿಂದ ಬೆಳಿಗ್ಗೆ ಬೆಳ್ಳಾರೆ ಕಡೆಗೆ ಹೋಗುವ ಬಸ್ಸಿಗೆ ಐವರ್ನಾಡಿನಲ್ಲಿ ಪುರುಷೋತ್ತಮ ಎಂಬವರು ಬಸ್ ಹತ್ತಿದ್ದರು. ಬಸ್ಸಿನಲ್ಲಿ ನಿರ್ವಾಹಕ ಟಿಕೆಟ್ ನೀಡುವಾಗ ಪ್ರಯಾಣಿಕನು ರೂ.100ರ ನೋಟನ್ನು ನೀಡಿದ್ದರು. ನಿರ್ವಾಹಕ ವಸಂತ ಕೆ.ಆರ್. ಎಂಬವರು ರೂ.100 ಪಡೆದುಕೊಂಡು ಚಿಲ್ಲರೆ ಮತ್ತೆ ಕೊಡುವುದಾಗಿ ಹೇಳಿ ಟಿಕೆಟ್ ಹಿಂಬದಿಯಲ್ಲಿ 90 ಕೊಡಲು ಬಾಕಿ ಇದೆ ಎಂದು ಬರೆದಿದ್ದರು. ಬೆಳ್ಳಾರೆ ಬಸ್‌ಸ್ಟ್ಯಾಂಡ್ ತಲುಪುವಾಗ ಪ್ರಯಾಣಿಕ ಪುರುಷೋತ್ತಮರವರು ನಿರ್ವಾಹಕನಲ್ಲೊ ಚಿಲ್ಲರೆ ಕೇಳಿದ್ದು ನಿರ್ವಾಹಕನಲ್ಲಿ ಚಿಲ್ಲರೆ ಇಲ್ಲದೆ ಪಕ್ಕದ ಅಂಗಡಿಯಲ್ಲಿ ಕೇಳಿ ಬರುವುದಾಗಿ ಹೇಳಿ ಹೋಗಿದ್ದರು. ಅಂಗಡಿಯಲ್ಲಿ ಚಿಲ್ಲರೆ ಪಡೆದು ಬರುವಾಗ ತಡವಾಗಿತ್ತು ಎನ್ನಲಾಗಿದೆ.

ಪುರುಷೋತ್ತಮರವರು ಬೆಳ್ಳಾರೆಯಿಂದ ಪುತ್ತೂರು ಕಡೆಗೆ ಹೋಗಲಿಕ್ಕಿದ್ದ ಕಾರಣ ಬಸ್‌ಸ್ಟ್ಯಾಂಡ್‌ನಿಂದ ಪುತ್ತೂರು ಕಡೆಗೆ ಬಸ್ ಹೊರಟಿದ್ದು ಇವರಿಗೆ ಚಿಲ್ಲರೆ ಸಿಗುವಾಗ ಬಸ್ ತಪ್ಪಿತೆನ್ನಲಾಗಿದೆ. ಇದರಿಂದ ಕೋಪಗೊಂಡ ಪ್ರಯಾಣಿಕ ನಿರ್ವಾಹಕನ ಜೊತೆ ಮಾತಿಗಿಳಿದಿದ್ದು ಮಾತಿಗೆ ಮಾತು ಬೆಳೆದು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದನೆನ್ನಲಾಗಿದೆ. ಈ ಬಗ್ಗೆ ಬಸ್ ಕಂಡಕ್ಟರ್ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ಬಸ್ ಪ್ರಯಾಣಿಕ ಪುರುಷೋತ್ತಮರವರ ಮೇಲೆ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here