ಭ್ರಷ್ಟಾಚಾರ ವಿರೋಧಿ ಜನಜಾಗೃತಿ ಆಂದೋಲನ

0

  • ನಾಳೆ(ಜ.6) ಎನ್. ಸಂತೋಷ್ ಹೆಗ್ಡೆ ಪುತ್ತೂರಿಗೆ ಭೇಟಿ-ಭ್ರಷ್ಟಾಚಾರ ವಿರೋಧಿ ಫಲಕ ಬಿಡುಗಡೆ-ಸಂವಾದ

ಪುತ್ತೂರು: ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಜನಾಂದೋಲನ ವೇದಿಕೆಯ ನೇತೃತ್ವದಲ್ಲಿ ಆರಂಭಿಸಲಾಗಿರುವ ಭ್ರಷ್ಟಾಚಾರ ವಿರೋಧಿ ಜನ ಜಾಗೃತಿ ಆಂದೋಲನಕ್ಕೆ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ಪುತ್ತೂರಿನ ಪುರಭವನದಲ್ಲಿ ಜ.೬ರಂದು ಅಪರಾಹ್ನ ೨.೩೦ಕ್ಕೆ ಚಾಲನೆ ನೀಡಲಿದ್ದಾರೆ. ‘ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ’ ಎಂಬ ಧ್ಯೇಯ ವಾಕ್ಯದಡಿ ಕಾರ್ಯಕ್ರಮ ನಡೆಯಲಿದೆ.

ಸುದ್ದಿ ಬಳಗದ ನೇತೃತ್ವದಲ್ಲಿ ೩೬ ವರ್ಷಗಳ ಹಿಂದೆಯೇ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲಾಗಿತ್ತು. ಬಳಿಕ ಪತ್ರಿಕೆಯ ಮೂಲಕ ನಿರಂತರವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಮತ್ತೆ ಸರಕಾರಿ ಕಛೇರಿಗಳಲ್ಲಿರುವ ಲಂಚ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭಿಸಲಾಗಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳೂ ಆಗಿರುವ ಕರ್ನಾಟಕ ಲೋಕಾಯುಕ್ತದ ಮಾಜಿ ಮುಖ್ಯಸ್ಥ ಎನ್.ಸಂತೋಷ್ ಹೆಗ್ಡೆಯವರು ಜನವರಿ ೬ರಂದು ಬೆಳಿಗ್ಗೆ ೧೦.೩೦ಕ್ಕೆ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ಮತ್ತು ಮಧ್ಯಾಹ್ನ ೨.೩೦ಕ್ಕೆ ಪುತ್ತೂರು ಪುರಭವನದಲ್ಲಿ ಭ್ರಷ್ಟಾಚಾರ ವಿರೋಧಿ ಫಲಕ ಅನಾವರಣ ಮಾಡುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿ ಸಂವಾದ ನಡೆಸಲಿದ್ದಾರೆ.

ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ನೇತೃತ್ವದಲ್ಲಿ ಬಲಾತ್ಕಾರದ ಬಂದ್ ವಿರುದ್ಧ ಹೋರಾಟ ನಡೆಸಲಾಗಿತ್ತು. ಜತೆಗೆ ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಆಂದೋಲನ ನಡೆಸಲಾಗಿತ್ತು. ಸುದ್ದಿಯ ಆಂದೋಲನಕ್ಕೆ ಜನರು ಸಂಪೂರ್ಣ ಸಹಕಾರ ನೀಡಿದ್ದರು. ಜನಾಂದೋಲನದ ಮುಂದುವರಿದ ಭಾಗವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪಿಸಲಾಗುತ್ತಿದೆ. ಸರಕಾರಿ ಕಛೇರಿಗಳಲ್ಲಿ ಜನರು ಲಂಚ ನೀಡದೆ ತಮ್ಮ ಕೆಲಸ ಮಾಡಿಕೊಳ್ಳಲು ಸಾಧ್ಯವಾಗಬೇಕು, ಲಂಚ ನೀಡದೆ ಯಾವುದೇ ಕೆಲಸ ಆಗುವುದಿಲ್ಲ ಎಂಬ ಭಾವನೆಗಳನ್ನು ಜನರಿಂದ ತೆಗೆದು ಹಾಕಬೇಕು. ಲಂಚ ಪಡೆಯುವವರನ್ನು ದರೋಡೆಕೋರರು, ದೇಶದ್ರೋಹಿಗಳು ಎಂದು ಗುರುತಿಸಿ ಅಂತವರನ್ನು ಸಮಾಜವೇ ಬಹಿಷ್ಕಾರ ಮಾಡುವಂತಾಗಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಭ್ರಷ್ಟಾಚಾರದ ಬಗ್ಗೆ ಜನಜಾಗೃತಿ ಮೂಡಿಸುವುದಕ್ಕಾಗಿ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಭ್ರಷ್ಟಾಚಾರದ ಪ್ರತಿಕೃತಿ ಈಗಾಗಲೇ ಸಾಗುತ್ತಿದೆ. ಜನವರಿ 6ರಂದು ಸಂತೋಷ್ ಹೆಗ್ಡೆಯವರು ಸಂವಾದ ನಡೆಸಿ ಜನಜಾಗೃತಿ ಮೂಡಿಸಲಿದ್ದಾರೆ. ಇದರ ಮುಂದುವರಿದ ಭಾಗವಾಗಿ ಜನವರಿ ೧೦ರಂದು ಸುಳ್ಯ ಮತ್ತು ಪುತ್ತೂರು ಪೇಟೆಯಲ್ಲಿ ಭ್ರಷ್ಟಾಚಾರದ ಪ್ರತಿಕೃತಿ ದಹನ ಮಾಡುವ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಭ್ರಷ್ಟಾಚಾರ ರಹಿತ ಸೇವೆ ನೀಡುವ ಅಧಿಕಾರಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸಾರ್ವಜನಿಕವಾಗಿ ಸನ್ಮಾನಿಸುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ. ಜನವರಿ ೨೬ರ ಪ್ರಜಾಪ್ರಭುತ್ವ ದಿನಾಚರಣೆಯಂದು ಗ್ರಾಮ ಗ್ರಾಮಗಳಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ. ದೇಶದ ೭೫ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸುದ್ದಿ ಬಿಡುಗಡೆಯ ಮುಖಾಂತರ ನಡೆದ ಆನ್‌ಲೈನ್ ಚುನಾವಣೆಯಲ್ಲಿ ಪ್ರತೀ ಸರಕಾರಿ ಕಛೇರಿಯ ಉತ್ತಮ ಅಧಿಕಾರಿ ಮತ್ತು ಉತ್ತಮ ಸಿಬ್ಬಂದಿಯನ್ನು ಜನರೇ ಆಯ್ಕೆ ಮಾಡಿದ್ದರು. ಗ್ರಾಮ ಸ್ವರಾಜ್ಯದ ಕಲ್ಪನೆ ಸಾಕಾರಗೊಳಿಸಲು ಭ್ರಷ್ಟಾಚಾರದ ಪಿಡುಗು ನಿವಾರಣೆಯಾಗಬೇಕಿದೆ. ಅದಕ್ಕಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಸಮಾಜದ ಎಲ್ಲಾ ವರ್ಗದ ಜನರು ಸ್ವಯಂಪ್ರೇರಿತರಾಗಿ ಈ ಆಂದೋಲನದಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಇಡೀ ದೇಶದಲ್ಲಿಯೇ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಅತೀ ಕಡಿಮೆ ಭ್ರಷ್ಟಾಚಾರ ನಡೆಸುವಂತೆ ಮಾಡುವ ವಿಶ್ವಾಸದೊಂದಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪಿಸಲಾಗುತ್ತಿದೆ.

LEAVE A REPLY

Please enter your comment!
Please enter your name here