ಅಂಬೇಡ್ಕರ್ ಹೆಸರಿನಲ್ಲಿ ದಿನಕ್ಕೊಂದರಂತೆ ಹುಟ್ಟಿಕೊಳ್ಳುವ ಸಂಘಟನೆಗಳು ದಲಿತರ ಪರವಾಗಿ ಕೆಲಸ ಮಾಡಬೇಕು: ಸೇಸಪ್ಪ ಬೆದ್ರಕಾಡು

0

ಪುತ್ತೂರು: ದ.ಕ. ಜಿಲ್ಲೆಯಲ್ಲಿ ಅಂಬೇಡ್ಕರ್‌ರ ಹೆಸರಿನಲ್ಲಿ ದಿನಕ್ಕೊಂದು ಸಂಘಟನೆಗಳನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಅವರೆಲ್ಲಾ ಇಲ್ಲಿನ ಪ್ರಜ್ಞಾವಂತ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ದಲಿತರ, ಶೋಷಿತರ ಪರವಾಗಿ ಕೆಲಸ ಮಾಡುತ್ತಾ ದಲಿತ ಚಳುವಳಿಯನ್ನು ಬಲಿಷ್ಠಗೊಳಿಸಬೇಕು ಎಂದು ದ.ಕ. ಜಿಲ್ಲಾ ದಲಿತ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಹೇಳಿದ್ದಾರೆ.


ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಎಂಬ ಸಂಘಟನೆ ಸ್ಥಾಪಿಸಿದ ಗಿರಿಧರ ನಾಯ್ಕರ ಸಂಘಟನೆ ಇಂದು ದಲಿತ ವರ್ಗದವರಿಂದ ದೂರವಾಗುತ್ತಿದೆ. ಸ್ವಪ್ರತಿಷ್ಠೆಗೋಸ್ಕರ ಅಂಬೇಡ್ಕರ್ ಆಪದ್ಬಾಂಧವ ಟ್ರಸ್ಟ್ ಎಂಬ ಸಂಘಟನೆ ಪುತ್ತೂರಿನಲ್ಲಿ ಉದಯವಾಗಿ ಇದರ ಸ್ಥಾಪಕರು ಕೂಡ ದಲಿತ ವರ್ಗದವರಿಗೆ ವಂಚಿಸಿ ಅವರು ಕೈಬಿಟ್ಟಿರುತ್ತಾರೆ. ಇದರಲ್ಲಿ ಇರುವ ಪ್ರಾಮಾಣಿಕ ಮುಖಂಡರು, ಕಾರ್ಯಕರ್ತರು ತಟಸ್ಥಗೊಂಡಿದ್ದು, ಇವರ ಸೇವೆಗಳು ನಮ್ಮ ಸಮುದಾಯಕ್ಕೆ ಅಗತ್ಯವಿದೆ. ಹೀಗಾಗಿ ಇವರೆಲ್ಲ ನಮ್ಮ ಸಂಘಟನೆ ಸೇರಿಕೊಳ್ಳುವಂತೆ ಮನವಿ ಮಾಡಿದರು.

ದ.ಕ. ಜಿಲ್ಲೆಯಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ದಿನಕ್ಕೊಂದು ಸಂಘಟನೆ ಹುಟ್ಟಿಕೊಳ್ಳುತ್ತಿದ್ದು, ಇವರು ದಲಿತರ ಸೇವೆ ಮಾಡುವ ಬದಲು ದಲಿತರನ್ನೇ ಛಿದ್ರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದ್ದರಿಂದ ಇಲ್ಲಿನ ಪತ್ರಿಯೊಬ್ಬ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಇತಿಹಾಸ ಹೊಂದಿರುವ ಸಂಘಟನೆಗೆ ಅಥವಾ ಜಿಲ್ಲೆಯಲ್ಲಿ ನ್ಯಾಯಯುತವಾಗಿ ಹೋರಾಟ ಮಾಡುವ ಸಂಘಟನೆಗೆ ಅಥವಾ ದಲಿತ್ ಸೇವಾ ಸಮಿತಿ ಸಂಘಟನೆಗೆ ಸೇರಿಕೊಂಡು ದಲಿತ ಚಳುವಳಿಯನ್ನು ಗಟ್ಟಿಗೊಳಿಸೋಣ ಒಂದು ಸಂಘಟನೆಯಲ್ಲಿ ಇದ್ದು ಅದನ್ನು ಒಡೆದು ಇನ್ನೊಂದು ಸಂಘಟನೆಯನ್ನು ಸ್ಥಾಪಿಸುವ ಮುಖಂಡರುಗಳ ಮಾತಿಗೆ ಬಲಿಯಾಗಬಾರದು ಎಂದು ವಿನಂತಿಸಿಕೊಂಡರು. ಸುದ್ದಿಗೋಷ್ಠಿಯಲ್ಲಿ ದಲಿತ ಸೇವಾ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನಂಜಯ ಬಲ್ನಾಡು, ತಾಲೂಕು ಅಧ್ಯಕ್ಷ ಬಿ.ಕೆ. ಅಣ್ಣಪ್ಪ, ಮಾಜಿ ತಾಲೂಕು ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here