ಮದುಮಗ ಕೊರಗಜ್ಜನ ವೇಷ ಹಾಕಿಕೊಂಡು ಬಂದ ಘಟನೆಯನ್ನು ಸಂಘ ಪರಿವಾರದವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ-ಎಚ್. ಮಹಮ್ಮದ್ ಆಲಿ

0

ಪುತ್ತೂರು: ವಿಟ್ಲದ ಸಾಲೆತ್ತೂರುನಲ್ಲಿ ನಡೆದ ಮದುವೆ ಮನೆಗೆ ಮದುಮಗ ಕೊರಗಜ್ಜನನ್ನು ಹೋಲುವ ವೇಷ ತೊಟ್ಟು ಬಂದ ಘಟನೆಯನ್ನು ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಇಡೀ ಮುಸ್ಲಿಂ ಸಮುದಾಯ ತಮ್ಮ ಧಾರ್ಮಿಕ ಪಂಡಿತರೊಂದಿಗೆ ಸೇರಿಕೊಂಡು ಖಂಡಿಸಿದೆ. ಆದರೆ ಸಂಘ ಪರಿವಾರದವರು ಈ ಘಟನೆಯನ್ನು ತಮ್ಮ ರಾಜಕೀಯ ದುರುದ್ದೇಶ ಇಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಬಳಸುತ್ತಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಯಾವುದೇ ಧರ್ಮ, ದೈವ, ದೇವರುಗಳನ್ನು ಅವಮಾನ ಮಾಡುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಆದರೆ ಸಂಘ ಪರಿವಾರ ಕೋಮುದ್ವೇಷವಾಗಿ ಬಳಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು. ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಹಿಂದೂ ಜಾಗರಣ ವೇದಿಕೆಯು ವಿಟ್ಲ ಬಂದ್‌ಗೆ ಕರೆ ನೀಡಿದೆ. ಇವರಿಗೆ ಬಂದ್ ಕರೆ ನೀಡಲು ಯಾವುದೇ ನೈತಿಕತೆ ಇಲ್ಲ ಎಂದರು. ಮದುಮಗ ಹಾಕಿಕೊಂಡು ಬಂದ ವೇಷ ಕೊರಗಜ್ಜನ ವೇಷ ಹೌದಾ ಅಥವಾ ಅಲ್ವಾ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಮುಖರಿಂದ ಚರ್ಚೆಗಳು ನಡೆಯುತ್ತಾ ಇದೆ ಎಂದು ಹೇಳಿದ ಆಲಿಯವರು.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೊರಗಜ್ಜನ ಹುಂಡಿಗೆ ಕಾಂಡೋಮ್‌ಗಳನ್ನು ಹಾಕಿ ಅಪವಿತ್ರಗೊಳಿಸಿದ್ದು ಆ ಘಟನೆಯಲ್ಲಿ ಪೊಲೀಸರು ದೇಸಾಯಿ ಎಂಬಾತನನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಆತ ನಾನು ೧೬ ಕಡೆಗಳಲ್ಲಿ ಈ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಸಂಘ ಪರಿವಾರದವರಿಗೆ ಕೊರಗಜ್ಜನ ಬಗ್ಗೆ ಭಯ, ಭಕ್ತಿ ಇರುತ್ತಿದ್ದರೆ ಯಾಕೆ ಈ ಘಟನೆಯನ್ನು ಖಂಡಿಸಲಿಲ್ಲ, ಮಂಗಳೂರು ಬಂದ್‌ಗೆ ಯಾಕೆ ಕರೆ ನೀಡಲಿಲ್ಲ, ಯಾಕೆ ಕೃತ್ಯ ಎಸಗಿದವನ ಮನೆಯೆದುರು ಪ್ರತಿಭಟನೆ ಮಾಡಲಿಲ್ಲ, ಅಪವಿತ್ರ ಯಾರೇ ಮಾಡಿದರೂ ಅಪವಿತ್ರವೇ ಇವತ್ತು ಅವರು ಮಾಡಿದರೆ ಅಪವಿತ್ರ ಮತ್ತೊಬ್ಬರು ಮಾಡಿದರೆ ಅಪವಿತ್ರವಲ್ಲ. ಸಂಘ ಪರಿವಾರದವರ ಇಂತಹ ದ್ವಂದ್ವ ನೀತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇವತ್ತು ಮುಸಲ್ಮಾನ ಸಮುದಾಯದ ಯಾರೋ ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ತಕ್ಷಣ ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಪಕ್ಷದ ಪರೋಕ್ಷ ಬೆಂಬಲದಿಂದ ಇಂದು ಜಾಗರಣ ವೇದಿಕೆ ಈ ಪ್ರಕರಣ ಕೈಗೆತ್ತಿಕೊಂಡಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಸುರತ್ಕಲ್‌ನಲ್ಲಿ ನಡೆದ ಕೊರಗ ಸಮುದಾಯದ ವ್ಯಕ್ತಿಯ ಓರ್ವನ ಮನೆಯಲ್ಲಿ ನಡೆದ ಮೆಹಂದಿ ಕಾರ್‍ಯಕ್ರಮದಲ್ಲಿ ಡಿ.ಜೆ ಹಾಕಿಸಿಕೊಂಡಿದ್ದಾರೆಂದು ಆ ಕಾರ್‍ಯಕ್ರಮ ನಡೆದ ಮನೆಯ ಮೇಲೆ ದಾಳಿ ನಡೆಸಿ ದೌರ್ಜನ್ಯ ಎಸಗಿದ ಘಟನೆಯ ಬಗ್ಗೆ ಸಂಘ ಪರಿವಾರದವರಿಂದ ಯಾವುದೇ ಖಂಡನೆ ವ್ಯಕ್ತಪಡಿಸಲಿಲ್ಲ. ಬಿಜೆಪಿಯ ಎಂ.ಪಿ, ಶಾಸಕರಿಂದ ಪ್ರತಿರೋಧ ಕೆಲಸ ಆಗಲಿಲ್ಲ. ರಾಜಕೀಯವಾಗಿ ಬಳಸಿಕೊಳ್ಳಲು ಕೊರಗಜ್ಜ ಬೇಕು, ಕೊರಗ ಸಮಾಜ ಮಾತ್ರ ಅವರಿಗೆ ಬೇಡ. ಇದು ಇವರ ದ್ವಂದ್ವ ನೀತಿ. ಜಿಲ್ಲೆಯಲ್ಲಿ ಯಾವುದೇ ಸಣ್ಣ ವಿಷಯ ಸಿಕ್ಕಿದರೂ ಸಂಘ ಪರಿವಾರದವರು ರಣಹದ್ದಿನಂತೆ ಕಾಯುತ್ತಿದ್ದಾರೆ ಎಂದ ಅವರು ಧರ್ಮನಿಂದನೆ, ದೇವರನಿಂದನೆ ಮಾಡಿರುವುದು ಕೇವಲ ಒಬ್ಬ ಮುಸಲ್ಮಾನ ವ್ಯಕ್ತಿಯಿಂದ ಮಾತ್ರ ಆಗಿರದೆ ಸಂಘ ಪರಿವಾರದವರ ಪರವೋಚ್ಚ ನಾಯಕ ಪ್ರಭಾಕರ ಭಟ್‌ರವರು ಸಾರ್ವಜನಿಕ ಸಭೆಗಳಲ್ಲಿ ಇತರ ಸಮಾವೇಶಗಳಲ್ಲಿ, ಸಭೆ ಸಮಾರಂಭಗಳಲ್ಲಿ ಬೈಯುವುದು, ಟೀಕೆ ಮಾಡುವುದು, ದೂಷಣೆಮಾಡುವುದು ಇನ್ನೊಂದು ಧರ್ಮದವರನ್ನು ಆಗಿದೆ. ಇನ್ನೊಂದು ಧರ್ಮದ ದೇವರನ್ನು ಮತ್ತು ಆ ಧರ್ಮದ ನಾಯಕರನ್ನು ಆಗಿದೆ. ಇಂತಹ ಸಂಘಟನೆಯವರಿಂದ ಕೊರಗಜ್ಜನಿಗೆ ಅವಮಾನವಾಗಿದೆ, ಹಿಂದೂ ಭಾವನೆಗೆ ನೋವಾಗಿದೆ ಎಂದು ಹೇಳುತ್ತಿರುವುದು ನಾಚಿಕೆ ವಿಷಯ. ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಹೇಳಿದರು.

ನಾವೆಲ್ಲರೂ ಒಂದು, ನಾವೆಲ್ಲರೂ ಹಿಂದೂ ಎಂದು ಹೇಳುವವರ ಮನಸ್ಸಿನಲ್ಲಿ ಅಸ್ಪೃಷ್ಯತೆ ತುಂಬಿಕೊಂಡಿದೆ. ಶೂದ್ರರನ್ನು, ದಲಿತರನ್ನು, ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡುವ ಕಾರ್ಯ ನಡೆಯುತ್ತಿದೆ. ಒಂದು ಕಡೆಯಿಂದ ಇವರೇ ಅಸ್ಪೃಷ್ಯತೆಗೆ ಪ್ರೋತ್ಸಾಹ ಮಾಡುತ್ತಿದ್ದಾರೆ. ವ ಮೂಲಕ ಹಾಗೂ ಅಸ್ಪೃಷ್ಯತೆಯನ್ನು ಬೆಳೆಸುವ ಮೂಲಕ ದಲಿತ ತಳಮಟ್ಟದ ಸಮುದಾಯದವರನ್ನು ಮುಖ್ಯವಾಹಿನಿಯಿಂದ ದೂರವಿಡುವ ಕಾರ್‍ಯಕ್ರಮದಿಂದ ಸಂಘ ಪರಿವಾರ ಮಾಡುತ್ತಿದೆ. ದಲಿತರಿಗೆ ಏನಾದರೂ ಸಮಸ್ಯೆಯಾದಾಗ ಅದನ್ನು ಹಿಡಿದುಕೊಂಡು ರಾಜಕೀಯ ಲಾಭ ಮಾಡುವುದನ್ನು ಕಾಂಗ್ರೆಸ್ ಪಕ್ಷ ತೀವ್ರ ಖಂಡಿಸುತ್ತದೆ ಎಂದು ಅವರು ಹೇಳಿದರು.

ಇವತ್ತು ಒಂದು ಸಮುದಾಯದ ವ್ಯಕ್ತಿ ಮಾಡಿದಂತಹ ಈ ಒಂದು ಕರ್ಮವನ್ನು ಮುಸ್ಲಿಂ ಸಮುದಾಯ ಖಂಡನೆ ಮಾಡಿದೆ. ಆ ವ್ಯಕ್ತಿಯ ಮನೆಯನ್ನು ಜಮಾಅತ್‌ನಿಂದಲೇ ಹೊರಗಿಡುವ ಕೆಲಸ ಆ ಭಾಗದ ಜಮಾಅತ್ ಮಾಡಿದೆ. ಕೊರಗಜ್ಜನ ವೇಷ ಹಾಕಿಕೊಂಡು ಬಂದ ಈ ವ್ಯಕ್ತಿಯು ಕೊರಗಜ್ಜ ವೇಷ ಅಥವಾ ಉದ್ದೇಶ ಏನೆಂದು ಗೊತ್ತಾಗದಂತಾಗಿದೆ. ಕೊರಗಜ್ಜನನ್ನು ಅವಮಾನಿಸುವ ಉದ್ದೇಶದಿಂದ ಮಾಡಿರುವುದು ಕಾಣುವುದಿಲ್ಲ. ಕೊರಗಜ್ಜನ ವೇಷ ತೊಟ್ಟು ಬಂದಿರುವುದು ಇಡೀ ನಾಗರಿಕ ಸಮಾಜವೇ ಇದನ್ನು ಖಂಡಿಸುತ್ತದೆ ಎಂದು ಅವರು ಹೇಳಿದರು. ಮುಸಲ್ಮಾನರನ್ನು ಧರ್ಮದ ಮುಖ್ಯವಾಹಿನಿಯಿಂದ ದೂರವಿಡುವ ಸಂಘ ಪರಿವಾರದವರ ಈ ಹುನ್ನಾರವನ್ನು ಪ್ರತಿಯೊಬ್ಬ ಸಮುದಾಯದವರು ಅರ್ಥಮಾಡಿಕೊಳ್ಳಬೇಕು ಎಂದು ಮಹಮ್ಮದ್ ಆಲಿ ಹೇಳಿದರು.

ಇಂತಹ ಕೆಟ್ಟ ಪದ್ದತಿಯಿಂದ ಮುಸ್ಲಿಂ ಧರ್ಮಕ್ಕೆ ಅವಮಾನ-ಶಕೂರ್ ಹಾಜಿ
ಪುತ್ತೂರು ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿಯವರು ಮಾತನಾಡಿ ಮದುವೆ ಮನೆಗೆ ಮದುಮಗ ಹಾಕಿಕೊಂಡು ಬಂದಂತ ವೇಷಕ್ಕೂ ಹಳೇ ಕಾಲದ ಮಾರ್ನೆಮಿಯ ದಿನದಂದು ಹಾಕಿಕೊಂಡು ಬರುತ್ತಿದ್ದ ಕೊರಗರ ವೇಷಕ್ಕೂ ಅಜಗಜಾಂತರವಿದೆ. ಆದರೆ ಇಂತಹ ವೇಷದಿಂದ ಇನ್ನೊಂದು ಧರ್ಮದವರನ್ನು ದ್ವೇಷಿಸುವುದು, ನೋಯಿಸುವುದು ಇಸ್ಲಾಂ ಧರ್ಮದಲ್ಲಿ ಇಲ್ಲ. ಇಸ್ಲಾಂ ಧರ್ಮದಲ್ಲಿ ಯಾವುದೇ ಧರ್ಮವನ್ನು ದ್ವೇಷಿಸುವುದು, ನೋಯಿಸುವುದು ಅಥವಾ ತನ್ನ ಧರ್ಮದಲ್ಲಿ ತಮಾಷೆಗೂ ಅವಕಾಶವಿಲ್ಲ. ಇಸ್ಲಾಂ ಧರ್ಮದ ಎಲ್ಲಾ ಉಲಮಾಗಳು ಉಗ್ರವಾಗಿ ಖಂಡಿಸಿದ್ದಾರೆ ಎಂದರು ಇಸ್ಲಾಂ ಧರ್ಮದಲ್ಲಿ ತಾಳ ಎಂಬುದೇ ಇಲ್ಲ. ಗಡಿಭಾಗದಲ್ಲಿ ಕೆಲವು ಕಡೆ ಇಂತಹ ಕಾರ್‍ಯಕ್ರಮಗಳನ್ನು ಕೆಲವರು ನಡೆಸಿಕೊಂಡು ಬರುತ್ತಿದ್ದು ದ.ಕ. ಜಿಲ್ಲೆಯಲ್ಲಿ ಇಂತಹ ಕೆಟ್ಟ ಪದ್ಧತಿ ಇಲ್ಲ. ಇಂತಹ ಘಟನೆಯಿಂದ ಇಸ್ಲಾಂ ಧರ್ಮಕ್ಕೆ ಅವಮಾನವಾಗಿದ್ದು ಇದಕ್ಕೆ ಯಾರೂ ಕಾರಣಕರ್ತರೋ ಅವರೇ ಕಾರಣವಾಗುತ್ತಾರೆ. ಮುಸ್ಲಿಂ ಸಂಘಟನೆಯು ಇದನ್ನು ಖಂಡಿಸುತ್ತದೆ ಎಂದು ಅವರು ಮುಂದೆ ಇಂತಹ ಘಟನೆ ನಡೆಯದಂತೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಅವರು ಹೇಳಿದರು.

ಸಾಲೆತ್ತೂರು ಘಟನೆಯಿಂದ ಬಿಜೆಪಿ ಸಂಘ ಪರಿವಾರ ಲಾಭಗಳಿಸುವ ಅವಶ್ಯಕತೆಯಿಲ್ಲ-ಅಭಿಷೇಕ್ ಬೆಳ್ಳಿಪ್ಪಾಡಿ
ಜಿಲ್ಲಾ ಯುವ ಕಾಂಗ್ರೆಸ್ ಉಪಾದ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿಯವರು ಮಾತನಾಡಿ ಸಾಲೆತ್ತೂರು ಘಟನೆಗೆ ಸಂಂಧಿಸಿದಂತೆ ಕೊರಗಜ್ಜನಿಗೆ ಅವಮಾನವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೊರಗಜ್ಜನ ದೈವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಗಿದೆ. ಆದರೆ ಇದನ್ನು ನಾವು ಪತ್ರಿಕೆಯಲ್ಲಿ ಪ್ರಚಾರ ಮಾಡಲಿಲ್ಲ. ಆದರೆ ಸಂಘ ಪರಿವಾರದವರು ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ ಪ್ರಾರ್ಥನೆಗಳನ್ನು ಪತ್ರಿಕೆಗಳಲ್ಲಿ ಪ್ರಚಾರ ಪಡಿಸಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ನೇತೃತ್ವದ ಸಂಘ ಪರಿವಾರದವರಿಗೆ ಕೊರಗ ಸಮುದಾಯದವರ ಮೇಲೆ ಪ್ರೀತಿ, ಕಾಳಜಿ ಇರುತ್ತಿದ್ದರೆ ಕೋಟ ಶ್ರೀನಿವಾಸ ಪೂಜಾರಿಯವರ ಮನೆಯ ಪಕ್ಕದಲ್ಲಿ ಮೆಹಂದಿ ಕಾರ್‍ಯಕ್ರಮ ನಡೆಯುತ್ತಿದ್ದ ಕೊರಗ ಸಮುದಾಯದವರ ಮನೆಯಲ್ಲಿ ಪೋಲಿಸರು ದೌರ್ಜನ್ಯ ನಡೆಸಿದಾಗ ಅವಮಾನಿಸಿದ ಘಟನೆಯ ಬಗ್ಗೆ ಯಾರೂ ಬಿಜೆಪಿಯವರು, ಸಂಘ ಪರಿವಾರದವರು ಖಂಡಿಸಲಿಲ್ಲ. ಸಾಲೆತ್ತೂರ್ ಘಟನೆಯನ್ನು ಬಿಜೆಪಿ ಸಂಘ ಪರಿವಾರದವರು ರಾಜಕೀಯ ಮಾಡುವುದು ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಕೇಶವ ಪಡೀಲ್, ನಗರ ಕಾಂಗ್ರೆಸ್‌  ಕಾರ್ಯದರ್ಶಿ ದಾಮೋದರ್‌ ಭಂಡಾರ್ಕರ್  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here