ಪುತ್ತೂರು: ಸ್ವಚ್ಛಭಾರತ್ ಮಿಷನ್ (ಗ್ರಾ) ಯೋಜನೆಯಡಿ ಒಡಿಎಫ್ ಪ್ಲಸ್ನ ವಿವಿಧ ಘಟಕಗಳ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಲೋಗನ್ ಬರೆಯುವ ಸ್ಪರ್ಧೆಯಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಗ್ರಾಮೀಣ ಸಮುದಾಯದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಉದ್ದೇಶವಿರುವ ಶೌಚಾಲಯದ ಬಳಕೆ, ಸಮುದಾಯ ಶೌಚಾಲಯ, ಘನ ತ್ಯಾಜ್ಯ ನಿರ್ವಹಣೆ, ದ್ರವ ತ್ಯಾಜ್ಯ ನಿರ್ವಹಣೆ, ಮಲ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ನಿಷೇಧ ಇತ್ಯಾದಿಗಳಿಗೆ ಸಂಬಂಧಿಸಿದ ಸ್ಪೋಗನ್ಗಳನ್ನು ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಇದರಲ್ಲಿ ಎಲ್ಲಾ ಗ್ರಾಮ ಪಂಚಾಯತ್ಗಳು ಭಾಗವಹಿಸಿದ್ದವು. ಈ ಸ್ಲೋಗನ್ಗಳನ್ನು ಗ್ರಾಮದ ಪ್ರಮುಖ ಸಾರ್ವಜನಿಕ ಸ್ಥಳಗಳಾದ ಗ್ರಾಮ ಪಂಚಾಯತ್ ಕಛೇರಿ, ಶಾಲೆ, ಸಮುದಾಯ ಸಂಕೀರ್ಣಗಳು, ಮಾರುಕಟ್ಟೆ, ಸಂತೆ ನಡೆಯುವ ಸ್ಥಳ, ಬಸ್ ನಿಲ್ದಾಣಗಳಲ್ಲಿ ಬರೆಯಲು ಕೇಂದ್ರ ಸರಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಲಶಕ್ತಿ ಮಂತ್ರಾಲಯ ಸೂಚನೆ ನೀಡಿತ್ತು ಅಲ್ಲದೆ 2021 ಅ.15 ರೊಳಗೆ ಸ್ಪೋಗನ್ ಬರೆಯಿಸಿ ಪೂರ್ತಿಗೊಳಿಸಲು ತಿಳಿಸಲಾಗಿತ್ತು, ಇದರಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರೆ ಮಂಗಳೂರು ತಾಲೂಕಿನ ಕುಪ್ಪೆಪದವು ಗ್ರಾಪಂ ದ್ವಿತೀಯ ಹಾಗೂ ಉಳಾಯಿಬೆಟ್ಟು ಗ್ರಾಪಂ ತೃತೀಯ ಸ್ಥಾನ ಪಡೆದುಕೊಂಡಿದೆ. ಪ್ರಥಮ ಬಹುಮಾನ ನಗದು ರೂ.10 ಸಾವಿರ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಈ ಗ್ರಾಪಂ ಮುಖ್ಯಸ್ಥರನ್ನು ಗೌರವಿಸಲಾಗುವುದು ಎಂದು ಜಿಪಂ ಸಿಇಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
` ಗ್ರಾಪಂ ವತಿಯಿಂದ ಈಗಾಗಲೇ ಬಸ್ಸು ನಿಲ್ದಾಣ, ಸಾರ್ವಜನಿಕ ಶೌಚಾಲಯ, ಗ್ರಾಪಂ ಕಛೇರಿ ಕಟ್ಟಡ ಇತ್ಯಾದಿ ಕಡೆಗಳಲ್ಲಿ ಸ್ಲೋಗನ್ಗಳನ್ನು ಬರೆಯಲಾಗಿದೆ. ಈ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ನಮ್ಮ ಗ್ರಾಪಂಗೆ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಗ್ರಾಪಂ ಅಧಿಕಾರಿ ವರ್ಗ ಮತ್ತು ಎಲ್ಲಾ ಸದಸ್ಯರ ಬೆಂಬಲ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ – ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ